ಕೂಡಿಗೆ ಕಾಲೇಜು ಬಾಲಕರ ಥ್ರೋಬಾಲ್, ಬಾಲಕ- ಬಾಲಕಿಯರ ಖೋ-ಖೋ ತಂಡಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

ಕುಶಾಲನಗರ : ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಹೆಬ್ಬಾಲೆ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಬಾಲಕರ ಥ್ರೋಬಾಲ್ ಪಂದ್ಯಾವಳಿಯಲ್ಲಿ ಕೂಡಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಬಾಲಕರು ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಹಾಗೆಯೇ, ಶಿರಂಗಾಲ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ತಾಲೂಕು ಮಟ್ಟದ ಬಾಲಕರು ಮತ್ತು ಬಾಲಕಿಯರ ಖೋ- ಖೋ ಪಂದ್ಯಾವಳಿ ನಡೆಯಿತು. ಈ ಖೋ- ಖೋ ಟೂರ್ನಿಯಲ್ಲಿ ಕೂಡ ಕೂಡಿಗೆ ಸರ್ಕಾರಿ ಪಿಯೂ ಕಾಲೇಜಿನ ಬಾಲಕರು ಮತ್ತು ಬಾಲಕಿಯರು ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟದ ಟೂರ್ನಿಗೆ ಆಯ್ಕೆಯಾಗಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಹಂಡ್ರಂಗಿ ನಾಗರಾಜ್ ತಿಳಿಸಿದ್ದಾರೆ.
ಈ ಎಲ್ಲಾ ಟೂರ್ನಿಗಳಲ್ಲಿ ಈ ತಂಡಗಳು ಇದೇ ಮೊದಲ ಬಾರಿಗೆ ಜಿಲ್ಲಾಮಟ್ಟದ ಟೂರ್ನಿಗೆ ಆಯ್ಕೆಗೊಂಡಿರುವುದು ಕಾಲೇಜಿಗೆ ಕೀರ್ತಿ ತಂದಿದೆ ಎಂದು ತಿಳಿಸಿದ್ದಾರೆ. ಈ ಟೂರ್ನಿಗಳ ತಂಡದ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿದ ಉಪನ್ಯಾಸಕರಾದ ಎಂ.ಟಿ. ರಮೇಶ್ ಮತ್ತು ನಂದಿನಿ ಅವರಿಗೆ ಹಾಗೂ ಕ್ರೀಡಾಪಟುಗಳಿಗೆ ಮತ್ತು ಉಪನ್ಯಾಸಕರ ವೃಂದಕ್ಕೂ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಸೋಮಶೇಖರ್ ಹಾಗೂ ಪ್ರಾಂಶುಪಾಲ ನಾಗರಾಜ್ ಅಭಿನಂದನೆ ಸಲ್ಲಿಸಿದ್ದಾರೆ.