ಕುಶಾಲನಗರ : ಕನ್ನಡ ಭಾರತಿ ವಿದ್ಯಾ ಸಂಸ್ಥೆ ವಾರ್ಷಿಕೋತ್ಸವ: ಪ್ರೇಕ್ಷಕರ ಮನರಂಜಿಸಿದ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ
ಕುಶಾಲನಗರ : ವಿದ್ಯಾರ್ಥಿಗಳು ಶಿಸ್ತು,ಸಂಯಮ, ಸಮಯ ಪ್ರಜ್ಞೆ ಹಾಗೂ ಉತ್ತಮ ಸಂಸ್ಕಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ತಾಲ್ಲೂಕು ತಹಶೀಲ್ದಾರ್ ಕಿರಣ್ ಜಿ.ಗೌರಯ್ಯ ವಿದ್ಯಾರ್ಥಿಗಳಿಗೆ ಕರೆಕೊಟ್ಟರು. ಪಟ್ಟಣದ ಕನ್ನಡ ಭಾರತಿ ಪದವಿ ಹಾಗೂ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಕಾಲೇಜು ಜೀವನವನ್ನು ಮೋಜು ಮಾಸ್ತಿಗಾಗಿ ಹಾಳುಮಾಡಿಕೊಳ್ಳಬಾರದು.ಇದೊಂದು ಗೋಲ್ಡನ್ ಲೈಫ್ ಕಠಿಣ ಪರಿಶ್ರಮ, ನಿರ್ದಿಷ್ಟ ಗುರಿಯೊಂದಿಗೆ ಏಕಾಗ್ರತೆ ಹಾಗೂ ಶ್ರದ್ದೆ ಅಧ್ಯಯನಶೀಲತೆ ಕೈಗೊಂಡು ಉನ್ನತ ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು. ಪೋಷಕರು ಹಾಗೂ ಗುರುಹಿರಿಯರು ಗೌರವ ನೀಡುವುದರ ಜೊತೆಗೆ ಅವರ ಆಸೆ ಆಕಾಂಕ್ಷೆ ಹಾಗೂ ನಿರೀಕ್ಷೆಯಂತೆ ಉನ್ನತ ಸ್ಥಾನಮಾನಕ್ಕೆ ಹೋದಾಗ ಮಾತ್ರ ಪೋಷಕರು ಕಂಡ ಕನಸು ನನಸಾಗಿಸಲು ಸಾಧ್ಯ ಎಂದರು.
ಕುಶಾಲನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಪುಟ್ಟರಾಜು ಮಾತನಾಡಿ, ವಿದ್ಯಾರ್ಥಿಗಳ ಉತ್ತಮ ಶಿಕ್ಷಣಕ್ಕೆ ಅವರಲ್ಲಿನ ಶಿಸ್ತು ಹಾಗೂ ಸಮಯ ಪಾಲನೆ ಮುಖ್ಯ ಪಾತ್ರ ವಹಿಸುತ್ತದೆ. ಪೋಷಕರು ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಸಮನ್ವಯತೆ ಅತಿ ಮುಖ್ಯ. ವಿದ್ಯಾರ್ಥಿಗಳು ಮೊಬೈಲ್ ಗಳಿಂದ ದೂರವಿದ್ದು ಪಠ್ಯದತ್ತ ಹೆಚ್ಚು ಗಮನಕೊಡಬೇಕು ಎಂದು ಕರೆ ಕೊಟ್ಟರು.
ದೇಶಕ್ಕಾಗಿ ತ್ಯಾಗ ಬಲಿದಾನ ಗೈದ ಮಹಾಪುರುಷರ ಆದರ್ಶಗಳು ವಿದ್ಯಾರ್ಥಿಗಳಲ್ಲಿ ಅರಳಬೇಕಿದೆ. ಹಾಗಾಗಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣದತ್ತ ಒಲವು ತೋರಬೇಕು. ಉನ್ನತ ಶಿಕ್ಷಣ ಸಂಸ್ಥೆಗಳು ರಾಜ್ಯದಲ್ಲಿ ಸಾಕಷ್ಟಿದ್ದರೂ ಕೂಡ ನಮ್ಮ ದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಬೇರೆ ರಾಜ್ಯಗಳಿಗೆ ಹೋಲಿಸಿದಲ್ಲಿ ಕಡಿಮೆ ಇದ್ದು ಕೇವಲ ಶೇ 33 ರಷ್ಟಿದೆ.ಕೊಡಗಿನಲ್ಲಿ ಉನ್ನತ ಶಿಕ್ಷಣ ಪಡೆದವರ ಸಂಖ್ಯೆಯೂ ಅತ್ಯಂತ ಕಡಿಮೆ ಇದೆ ಎಂದು ಡಾ.ಪುಟ್ಟರಾಜು ವಿಷಾದಿಸಿದರು.
ಪದವಿ ಪೂರ್ವ ಕಾಲೇಜು ವಿಭಾಗದ ಪ್ರಾಂಶುಪಾಲ ಶಾಂತಕುಮಾರ್ ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು. ಮೈಸೂರು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಬೈಲಕೊಪ್ಪದ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಬಿ.ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು. ಪ್ರಧಾನ್ ಗೌತಮ್ ವಿದ್ಯಾ ಟ್ರಸ್ಟ್ ಕಾರ್ಯದರ್ಶಿ ಬಿ.ರಾಮಕೃಷ್ಣಯ್ಯ, ಆಡಳಿತಾಧಿಕಾರಿ ಜೈವರ್ಧನ್, ಪದವಿ ಕಾಲೇಜು ವಿಭಾಗದ ಪ್ರಾಂಶುಪಾಲ ಕೆ.ಎಸ್.ರುದ್ರಪ್ಪ, ಹಿರಿಯ ಉಪನ್ಯಾಸಕರಾದ ಡಾ.ನಾಗೇಂದ್ರ ಸ್ವಾಮಿ, ಸೌಮ್ಯ, ರಶ್ಮಿತಾ ಪಾಲ್ಗೊಂಡಿದ್ದರು.
ಉಪನ್ಯಾಸಕಿ ವಿನೀತಾ ಸ್ವಾಗತಿಸಿದರು.ವಿದ್ಯಾರ್ಥಿಗಳಾದ ರಶ್ಮಿ ಹಾಗೂ ಸಚಿನ್ ಗಾನ ಹಾಗೂ ಚೈತ್ರ ಪ್ರಾರ್ಥಿಸಿದರು. ರಶ್ಮಿ ನಿರೂಪಿಸಿದರು.ಸ್ಮಿತಾ ವಂದಿಸಿದರು.ನಂತರ ವಿದ್ಯಾರ್ಥಿಗಳು ಸಾಂಸ್ಕೃತಿಕ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದರು.
