ಅರ್ವತ್ತೋಕ್ಲು ಎ.ಕೆ.ಸಿ ವತಿಯಿಂದ ಕೈಲ್ ಪೋಳ್ದ್ ಕ್ರೀಡಾ ಕೂಟ
ಮಡಿಕೇರಿ; ತಾಲೂಕಿನ ಅರ್ವತ್ತೋಕ್ಲು ಗ್ರಾಮದ ಎ.ಕೆ.ಸಿ ಸಂಸ್ಥೆಯ ವತಿಯಿಂದ ಕೈಲ್ ಪೋಳ್ದ್ ವಾರ್ಷಿಕ ಕ್ರೀಡಾ ಕೂಟ ಜಬ್ಬಂಡ ವಾಡೆ ಮಂದ್ ನಲ್ಲಿ ಜರುಗಿತು. ಬೆಳಿಗ್ಗೆ ಸಾಂಪ್ರದಾಯಿಕ ಮಂದ್ ಮರಿಯುವ ಕಾರ್ಯಕ್ರಮದೊಂದಿಗೆ ಕ್ರೀಡಾ ಕೂಟಕ್ಕೆ ಚಾಲನೆ ನೀಡಲಾಯಿತು. ಸುಮಾರು 40 ಕ್ಕೂ ಹೆಚ್ಚು ವಿಭಾಗಗಳಲ್ಲಿ ಸ್ಪರ್ಧೆ ಇದ್ದು ಹಿರಿಯರು ಕಿರಿಯರು ಮಹಿಳೆಯರು ಸ್ಪರ್ಧಿಗಳಾಗಿ ಭಾಗವಹಿಸಿ ಸಂಭ್ರಮಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೋಳುಮಾಡಂಡ ರಘು ಪೂವಪ್ಪ ನವರು ಪಾರಂಪರಿಕ ಕೈಲ್ ಪೋಳ್ದ್ ಕ್ರೀಡಾ ಕೂಟವನ್ನು ಪ್ರತಿವರ್ಷ ಆಚರಿಸಿಕೊಂಡು ಬರುತ್ತಿರುವ ಎ.ಕೆ.ಸಿ ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ತೆನ್ನಿರ ಮೈನಾ ರವರು ನಮ್ಮ ಪೂರ್ವಿಕರು ಸಹಬಾಳ್ವೆಯ ದೃಷ್ಟಿ ಕೋನದಿಂದ ಕೈಲ್ ಪೊಳ್ದ್ ಕ್ರೀಡಾ ಕೂಟದಂತಹ ಕಾರ್ಯಕ್ರಮವನ್ನು ರೂಪಿಸಿದ್ದು ಅದರ ಮಹತ್ವದ ಅರಿವು ಮುಂದಿನ ಪೀಳಿಗೆಗೂ ಅರ್ಥೈಸುವ ಅಗತ್ಯತೆ ಇದೆ ಎಂದು ತಿಳಿಸಿದರು.
ಕಾರ್ಯಕ್ರಮ ನಿರೂಪಿಸಿ ಮಾತನಾಡಿದ ಸಂಸ್ಥೆಯ ಮುಖ್ಯಸ್ಥರಾದ ಚೆರುಮಾಡಂಡ ಸತೀಶ್ ಸೋಮಣ್ಣ ನವರು ಹೆಚ್ಚಿನ ಸಂಖ್ಯೆಯಲ್ಲಿ ಊರಿನವರು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಮೂಲಕ ಸಂಸ್ಥೆಯ ಉದ್ದೇಶವನ್ನು ಈಡೇರಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಸಂಸ್ಥೆಯ ಅಧ್ಯಕ್ಷರಾದ ಮುಕ್ಕಾಟಿರ ಡಾಲಿ ಕುಂಞಪ್ಪ ನವರು ವಾರ್ಷಿಕ ವರದಿ ಒಪ್ಪಿಸಿದರು. ಪ್ರಮುಖರಾದ ಮುಂಜಾಂದಿರ ಸತ್ಯ ಬೋಪಯ್ಯ, ಕೋಳುಮಾಡಂಡ ಕಿರಣ್,ಮುಂಜಾಂದಿರ ಅಜಿತ್,ಜಬ್ಬಂಡ ತಿಮ್ಮಯ್ಯ ಮತ್ತು ಇತರರು ಸ್ಪರ್ಧೆಗಳನ್ನು ನಿರ್ವಹಿಸಿದರು.
