ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಸಕ ಡಾ.ಮಂತರ್‌ಗೌಡ ಭೇಟಿ

ಸೋಮವಾರಪೇಟೆ:ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಸಕ ಡಾ.ಮಂತರ್‌ಗೌಡ ಶನಿವಾರ ಭೇಟಿ ನೀಡಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು. ಔಷಧಿಗಳ ಸರಬರಾಜಿನ ಬಗ್ಗೆ ಡಾ.ಎಂ.ಚಿನ್ಮಯಿ ಅವರಿಂದ ಮಾಹಿತಿ ಪಡೆದರು. ಅರೋಗ್ಯಕೇಂದ್ರದ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಸುವಂತೆ ಸ್ಥಳೀಯರು ಬೇಡಿಕೆಯಿಟ್ಟರು. ಸರ್ಕಾರದ ಮಟ್ಟದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ನಂತರ ಖಾಲಿ ಹುದ್ದೆಗಳು ಭರ್ತಿಯಾಗಲಿವೆ. ನಾನು ಕೂಡ ಇಲಾಖೆಯ ಮಟ್ಟದಲ್ಲಿ ಚರ್ಚಿಸುತ್ತೇನೆ ಎಂದು ಭರವಸೆ ನೀಡಿದರು. ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ಚಿಕಿತ್ಸೆ ಸಿಗಬೇಕು.
ಆಸ್ಪತ್ರೆಯಲ್ಲಿ ಎಲ್ಲಾ ತರಹದ ಔಷಧಿ, ಮಾತ್ರೆಗಳು ಸಿಗಬೇಕು. ಈ ಬಗ್ಗೆ ವೈದ್ಯರು ಗಮನಹರಿಸಿ ಮಾತ್ರೆಗಳು ಖಾಲಿಯಾಗದಂತೆ ನೋಡಿಕೊಳ್ಳಬೇಕು ಸಲಹೆ ನೀಡಿದರು. ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ಅನುದಾನ ಕಲ್ಪಿಸುವ ಭರವಸೆ ನೀಡಿದರು. ನಂತರ ಗ್ರಾಮೀಣ ರಸ್ತೆಗಳಲ್ಲಿ ತೆರಳಿದರು. ಚನ್ನಾಪುರ ಕಾಲನಿ ರಸ್ತೆ, ಕಾರೇಕೊಪ್ಪ ಗ್ರಾಮದೊಳಗಿನ ರಸ್ತೆಗೆ ಅನುದಾನ ಕಲ್ಪಿಸುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು. ಗೌಡಳ್ಳಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಬಸವೇಶ್ವರ ದೇವಾಲಯಕ್ಕೆ ಅನುದಾನ ನೀಡುವುದಾಗಿ ತಿಳಿಸಿದರು.
ಈ ಸಂದರ್ಭ ಗೌಡಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಗಣೇಶ್, ಗೌಡಳ್ಳಿ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸನ್ನ, ಗ್ರಾಮದ ಪ್ರಮುಖರುಗಳಾದ ಜಿ.ಎ.ಮಹೇಶ್, ಗೌಡಳ್ಳಿ ಪ್ರಸಿ, ಜಿ.ಪಿ.ಸುನಿಲ್, ಕೂಗೂರು ಸುಮಂತ್, ಲೋಕೇಶ್, ಕಾಂಗ್ರೆಸ್ ಪಕ್ಷದ ಪ್ರಮುಖರುಗಳಾದ ಚೇತನ್, ಕಿರಣ್ ಉದಯಶಂಕರ್ ಇದ್ದರು.