ಮಡಿಕೇರಿ: ಹನಿಟ್ರ್ಯಾಪ್ ಪ್ರಕರಣ, ಮತ್ತಿಬ್ಬರು ಆರೋಪಿಗಳ ಬಂಧನ
ಮಡಿಕೇರಿ:ಫೇಸ್‌ಬುಕ್‌ನಲ್ಲಿ ಪರಿಚಯವಾದ' ಮದ್ದೂರಿನ ವ್ಯಕ್ತಿಯಿಂದ ಹಣ ವಸೂಲಾತಿ ಮಾಡಿ, ಆತನನ್ನು ಮಡಿಕೇರಿಗೆ ಕರೆಯಿಸಿ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್,ರವಿ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ದೇಚೂರು ಹೌಸಿಂಗ್ ಬೋರ್ಡ್ ಕಾಲೋನಿ ನಿವಾಸಿ ಬಿ.ಎ. ದರ್ಶನ್ ರೈ. ದೇಚೂರು ನಿವಾಸಿ ಎಸ್. ರವಿ ಬಂಧಿತ ಆರೋಪಿಗಳಾಗಿದ್ದಾರೆ.
ಮದ್ದೂರಿನ ಮಹದೇವ ಹೆಚ್.ಪಿ. (39) ಎಂಬಾತನಿಗೆ ಮಡಿಕೇರಿಯ ರಚನಾ ಎಂಬಾಕೆ ಯೊಂದಿಗೆ ಫೇಸ್‌ಬುಕ್‌ನಲ್ಲಿ ಪರಿಚಯವಾಗಿತ್ತು. ನಂತರ ಹಣದ ಅವಶ್ಯಕತೆ ಇದೆ ಎಂದು ಹೇಳಿ ರಚನಾ 5 ಸಾವಿರ ರೂ.ಗಳನ್ನು ಗೂಗಲ್ ಪೇ ಮತ್ತು 5 ಸಾವಿರ ರೂ.ಗಳನ್ನು ಮಹದೇವನಿಂದ ಫೋನ್ ಪೇ ಮಾಡಿಸಿಕೊಂಡಿದ್ದಳು. ಬಳಿಕ ಮಹದೇವ ಹಣವನ್ನು ವಾಪಾಸು ಕೇಳಿದಾಗ ರಚನಾ ತಾ. 12 ರಂದು ಮಡಿಕೇರಿಗೆ ಮಹದೇವನನ್ನು ಬರಮಾಡಿಕೊಂಡು ರಾತ್ರಿ 10.30 ವೇಳೆಗೆ ಮಡಿಕೇರಿಯ ನಕ್ಷತ್ರ ಸೂಪರ್ ಮಾರ್ಕೆಟ್ ಬಳಿಗೆ ಕರೆಸಿಕೊಂಡು ಅಲ್ಲಿಂದ ಜೊತೆಯಲ್ಲಿ ಮನೆಗೆ ಕರೆದುಕೊಂಡು ಹೋಗಿದ್ದಳು. ಮನೆಯಲ್ಲಿ ಇಬ್ಬರೇ ಇದ್ದಾಗ ರಾತ್ರಿ 11.45 ಗಂಟೆಗೆ ರಚನಾಳ ತಾಯಿ ಮಾಲತಿ ಮತ್ತು ದಿನೇಶ್ ಎಂಬವರುಗಳು ಆಟೋದಲ್ಲಿ ಮನೆಗೆ ಬಂದಿದ್ದು,
ರಚನಾ ಮತ್ತು ಆಕೆಯ ತಾಯಿಯನ್ನು ಮನೆಯಿಂದ ಕಳುಹಿಸಿದ ದಿನೇಶ್ ಫೋನ್ ಮೂಲಕ ಸುಜಿತ್ ಮತ್ತು ದರ್ಶನ್ ಎಂಬವರುಗಳನ್ನು ಮನೆಗೆ ಕರೆಸಿಕೊಂಡು ಮೂವರು ಸೇರಿ ಮಹದೇವನ ಮೇಲೆ ಹಲ್ಲೆ ಮಾಡಿದ್ದರು. ಬಳಿಕ ಮನೆಯಲ್ಲಿ ಬಲವಂತವಾಗಿ ಕೂಡಿ ಹಾಕಿ ಮೊಬೈಲ್ ಫೋನ್ ಕಿತ್ತುಕೊಂಡು ಮಹದೇವ ಧರಿಸಿದ್ದ ಬಟ್ಟೆಯನ್ನು ಬಲವಂತವಾಗಿ ಬಿಚ್ಚಿಸಿ ಬೆತ್ತಲೆಯನ್ನಾಗಿಸಿ ತಮ್ಮ ಮೊಬೈಲ್‌ಗಳಿಂದ ವೀಡಿಯೋ ಮಾಡಿಕೊಂಡಿದ್ದರು.
ನಂತರ ಸುಜಿತ್ ಎಂಬಾತ ಏರ್‌ಗನ್‌ನನ್ನು ಮಹದೇವನ ತಲೆಗೆ ಇಟ್ಟು ಬೆದರಿಸಿ ರೂ. 50 ಲಕ್ಷ ಹಣ ನೀಡುವಂತೆಯೂ ಇಲ್ಲದಿದ್ದರೆ, ನಿನ್ನ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಹೇಳಿ ಬೆದರಿಕೆ ಹಾಕಿ ಮನೆಯಲ್ಲೇ ಬೆಳಗ್ಗಿನವರೆಗೆ ಬಲವಂತವಾಗಿ ಕೂಡಿ ಹಾಕಿದ್ದರು.
ರಕ್ತವಾಗಿದ್ದ ಮಹದೇವನ ಶರ್ಟ್, ಬನಿಯನ್ ಹಾಗೂ ಖರ್ಚಿಫ್‌ನ್ನು ಮನೆಯೊಳಗೆ ಸುಟ್ಟು ಹಾಕಿದ್ದರು. ಬಾತ್ ರೂಮ್‌ಗೆ ಹೋಗುವುದಾಗಿ ಹೇಳಿ ಮನೆಯಿಂದ ತಪ್ಪಿಸಿಕೊಂಡ ಮಹದೇವ ಅರೆಬೆತ್ತಲಾಗಿ ಮಡಿಕೇರಿ ನಗರ ಠಾಣೆಗೆ ಓಡಿ ಬಂದು ಘಟನೆ ಬಗ್ಗೆ ದೂರು ನೀಡಿದ್ದ. ಆತನ ದೂರಿನನ್ವಯ ಆರೋಪಿಗಳಾದ ಮಡಿಕೇರಿಯ ರಚನಾ, ಆಕೆಯ ತಾಯಿ ಮಾಲತಿ, ದಿನೇಶ್, ಸುಜಿತ್ ಮತ್ತು ದರ್ಶನ್ ಹಾಗೂ ಮತ್ತೋರ್ವನ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ರಚನಾ, ಆಕೆಯ ತಾಯಿ ಮಾಲತಿಯನ್ನು ಶನಿವಾರ ದಿನ ಬಂಧಿಸಿದ್ದರು.
ಬಳಿಕ ಉಳಿದ ಆರೋಪಿಗಳಿಗಾಗಿ ತನಿಖೆ ಮುಂದುವರೆಸಿದ ಪೊಲೀಸರು ಭಾನು ದರ್ಶನ್ ರೈ ಮತ್ತು ರವಿ ಎಂಬವರುಗಳನ್ನು ಬಂಧಿಸಿದ್ದು, ತನಿಖೆ ಮುಂದುವರಿದಿದೆ.
