ಪ್ರಿಯತಮೆಯ ಮಗನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ವ್ಯಕ್ತಿಯ ಬಂಧನ

ಲಕ್ನೋ: ಪ್ರಿಯತಮೆಯ 12 ವರ್ಷದ ಮಗನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಠಾಕೂರ್‌ಗಂಜ್ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ. ಮಗುವಿನ ಖಾಸಗಿ ಅಂಗಗಳಿಗೆ ಶಸ್ತ್ರಚಿಕಿತ್ಸೆ ಮಾಡಿಸಲು ಒತ್ತಾಯಿಸಿರುವ ಗಂಭೀರ ಆರೋಪವೂ ಅವನ ಮೇಲಿದೆ.
ಸಂತ್ರಸ್ತ ಬಾಲಕನ ತಂದೆ ನೀಡಿದ ದೂರಿನಂತೆ, ಅವನ ಪತ್ನಿ ಸಾದತ್‌ಗಂಜ್ ಪ್ರದೇಶದಲ್ಲಿ ಬಟ್ಟೆ ಅಂಗಡಿ ನಡೆಸುತ್ತಿದ್ದಳು. ಅಲ್ಲಿ ಮಂಜೂರ್ ಹಸನ್ ಅಲಿಯಾಸ್ ಸೈಫಿ ಎಂಬ ವ್ಯಾಪಾರಿಯೊಂದಿಗೆ ಆಕೆಗೆ ಪರಿಚಯ ಬೆಳೆದಿತ್ತು. ನಂತರ ಅವರಿಬ್ಬರ ನಡುವೆ ಪ್ರೇಮಸಂಬಂಧ ಗಾಢವಾಯಿತು. ಬಳಿಕ ಆಕೆ ತನ್ನ ಮಗನೊಂದಿಗೆ ಸೈಫಿಯ ಬಳಿ ವಾಸಿಸಲು ಮನೆ ಬಿಟ್ಟು ತೆರಳಿದಳು.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿಯು ಬಾಲಕನ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಅಲ್ಲದೆ, ಮಗುವಿನ ಜನನಾಂಗಗಳಿಗೆ ಶಸ್ತ್ರಚಿಕಿತ್ಸೆ ಮಾಡಿಸಲು ಒತ್ತಾಯಿಸಿದ್ದಾನೆ. ಬಳಿಕ ಬಾಲಕ ತನ್ನ ತಂದೆಯ ವಾಪಸ್ ತೆರಳಿ ನಡೆದ ಘಟನೆ ವಿವರಿಸಿದಾಗ ಪ್ರಕರಣ ಬಹಿರಂಗವಾಗಿದೆ.
ಈ ಹಿನ್ನೆಲೆಯಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆ ಮತ್ತು ಇತರ ಸಂಬಂಧಿತ ಕಾನೂನುಗಳಡಿ ಎಫ್‌ಐಆರ್ ದಾಖಲಿಸಲಾಗಿದೆ.
ಠಾಕೂರ್‌ಗಂಜ್ ಠಾಣೆಯ ಎಸ್‌ಎಚ್‌ಒ ಓಂವೀರ್ ಸಿಂಗ್ ಅವರು, “ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ,” ಎಂದು ತಿಳಿಸಿದ್ದಾರೆ.