ಅನನ್ಯ ಭಟ್‌ ಹೆಸರಿನಲ್ಲಿ ಕೊಡಗಿನ‌ ಕೆದಮುಳ್ಳೂರಿನ ಮೃತ ಗೃಹಿಣಿಯ ಫೋಟೋ ದುರ್ಬಳಕೆ!? ಸುಜಾತಾ ಭಟ್ ತೋರಿಸಿದ್ದು ತನ್ನ ಮಗಳ ಫೋಟೋ ಅಲ್ಲವೇ!

ಅನನ್ಯ ಭಟ್‌ ಹೆಸರಿನಲ್ಲಿ ಕೊಡಗಿನ‌ ಕೆದಮುಳ್ಳೂರಿನ ಮೃತ ಗೃಹಿಣಿಯ ಫೋಟೋ ದುರ್ಬಳಕೆ!?  ಸುಜಾತಾ ಭಟ್ ತೋರಿಸಿದ್ದು ತನ್ನ ಮಗಳ ಫೋಟೋ ಅಲ್ಲವೇ!

(ವರದಿ: ಕೋವರ್‌ ಕೊಲ್ಲಿ ಇಂದ್ರೇಶ್‌ )

ಬೆಂಗಳೂರು ; ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಶವಗಳ ಹೂಳುವಿಕೆ ಪ್ರಕರಣವು ದೇಶಾದ್ಯಂತ ದೊಡ್ಡ ಪ್ರಮಾಣದ ಸುದ್ದಿ ಆಗಿದೆ. ಈ ನಡುವೆ ಮಣಿಪಾಲದಲ್ಲಿ ಮೊದಲ ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಆಗಿದ್ದ ತಮ್ಮ ಮಗಳು ಅನನ್ಯ ಭಟ್‌ 2003 ರಲ್ಲಿ ಧರ್ಮಸ್ಥಳಕ್ಕೆ ಸ್ನೇಹಿತೆಯರೊಂದಿಗೆ ಬಂದು ನಾಪತ್ತೆ ಆಗಿರುವುದಾಗಿ ತಾಯಿ ಸುಜಾತಾ ಭಟ್‌ ಪ್ರಕರಣ ದಾಖಲಿಸಿದ್ದಾರೆ. ಶವಗಳ ಅವಶೇಷಗಳಿಗೋಸ್ಕರ ಅಗೆಯುವಾಗ ತಮ್ಮ ಮಗಳ ಮೂಳೆ ಸಿಕ್ಕರೆ ತಮಗೆ ಕೊಡಬೇಕು ಅದನ್ನು ಹಿಂದೂ ಸಂಪ್ರದಾಯದ ಪ್ರಕಾರ ಅಂತ್ಯ ಸಂಸ್ಕಾರ ಮಾಡುವುದಾಗಿ ಎಸ್‌ಐಟಿಗೆ ಮನವಿ ಮಾಡಿಕೊಂಡಿದ್ದಾರೆ.

ಸುಜಾತಾ ಭಟ್‌ ಅವರು ಒಂದು ತಿಂಗಳ ಹಿಂದೆ ದೂರು ನೀಡಿರುವುದು ಬಿಟ್ಟರೆ ಎಸ್‌ಐಟಿಗೆ ಯಾವುದೇ ರೀತಿಯ ಫೋಟೋ , ವಿದ್ಯಾಭ್ಯಾಸದ ದಾಖಲೆ ಏನನ್ನ್ನೂ ನೀಡಿಲ್ಲ. ಇವರ ಹೇಳಿಕೆಯ ಕುರಿತು ಎಸ್‌ಐಟಿ ಹಾಗೂ ಮಾಧ್ಯಮಗಳು ಸಂಶಯ ವ್ಯಕ್ತ ಪಡಿಸಿದ ಬೆನ್ನಲ್ಲೇ ಭಾನುವಾರ ಮಾಧ್ಯಮಗಳಿಗೆ ಹುಡುಗಿಯೊಬ್ಬಳ ಫೋಟೋ ನೀಡಿ ಇವಳೇ ತನ್ನ ಮಗಳು ಎಂದು ಹೇಳಿಕೊಂಡಿದ್ದಾರೆ. ಆದರೆ ಈ ಕುರಿತು ತನಿಖೆ ನಡೆಸಿದಾಗ ಅವರು ಬಿಡುಗಡೆ ಮಾಡಿರುವ ಫೋಟೋ ವೀರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು ಗ್ರಾಮದ ಮಾಳೇಟಿರ ವಾಸಂತಿ ಎಂಬುವವರದ್ದಾಗಿದೆ ಎಂದು ತಿಳಿದು ಬಂದಿದೆ. ವಾಸಂತಿ ಅವರು ಮೊದಲು ಬೆಂಗಳೂರಿನ ಎಂ ಎಸ್‌ ರಾಮಯ್ಯ ಆಸ್ಪತ್ರೆಯಲ್ಲಿ ನರ್ಸ್‌ ಆಗಿ ಕೆಲಸ ಮಾಡುತಿದ್ದು ಇಂಟೀರಿಯರ್‌ ಡಿಸೈನರ್‌ ಶ್ರೀವತ್ಸ ಎಂಬುವವರನ್ನು ಮದುವೆ ಆಗಿದ್ದರು. ಬೆಂಗಳೂರಿನಲ್ಲಿಯೇ ಇದ್ದ ವಾಸಂತಿ 5-9-2007 ರಂದು ಕಾಣೆಯಾಗಿದ್ದಾರೆ ಎಂದು ವೀರಾಜಪೇಟೆ ನಗರ ಪೋಲೀಸ್‌ ಠಾಣೆಯಲ್ಲಿ ಕುಟುಂಬದವರು ದೂರು ದಾಖಲಿಸಿದ್ದರು. ಈ ಕುರಿತು ಮಾಹಿತಿ ನೀಡಿದ ವೀರಾಜಪೇಟೆಯ ನಿವಾಸಿ ವಾಸಂತಿ ಅವರ ಸಹೋದರ ವಿಜಯ್‌ ಪೊನ್ನಪ್ಪ ಅವರು ಸಾಮಾಜಿಕ ತಾಣ ಹಾಗೂ ಮಾಧ್ಯಮಗಳಲ್ಲಿ ಬಳಕೆ ಆಗುತ್ತಿರುವ ಫೋಟೋ ತಮ್ಮ ಸಹೋದರಿಯದ್ದೇ ಎಂದು ಖಚಿತ ಪಡಿಸಿದ್ದಾರೆ.

 ವಾಸಂತಿ ಕಾಣೆಯಾದ 25 ದಿನಗಳ ನಂತರ ವೀರಾಜಪೇಟೆ ಸಮೀಪದ ಕೆಟೋಳಿ ಹೊಳೆಯಲ್ಲಿ ಮೃತದೇಹ ಪತ್ತೆ ಆಗಿತ್ತು. ವಿಜಯ್‌ ಅವರು ಆಗ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು.ಆ ಶವವನ್ನು ಪೋಲೀಸರೇ ಅಂತ್ಯ ಸಂಸ್ಕಾರ ಮಾಡಿದ್ದರು. ನಂತರ ಬಟ್ಟೆಗಳ ಹಾಗೂ ಶವದ ಚಿತ್ರದ ಆಧಾರದಲ್ಲಿ ಕುಟುಂಬಸ್ಥರು ಮೃತ ದೇಹವನ್ನು ಗುರುತಿಸಿದ್ದರು. ಇದೀಗ ಸುಜಾತಾ ಭಟ್‌ ಅವರು ತಮ್ಮ ಸಹೋದರಿಯನ್ನು ತಮಗೆ ಮೊದಲೇ ಹುಟ್ಟಿದ ಮಗಳು ಎಂದು ಹೇಳಿಕೊಳ್ಳುತ್ತಿರುವುದಕ್ಕೆ ವಿಜಯ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಾರೇ ಆಗಲಿ ತಮ್ಮ ಸ್ವಾರ್ಥ ಸಾಧನೆಗಾಗಿ ಫೋಟೋದ ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಹೇಳಿದ್ದಾರೆ. ಈ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಅವರು ತಿಳಿಸಿದ್ದಾರೆ. ವಾಸಂತಿ ಅವರ ಇನ್ನೂ ಹತ್ತಾರು ಫೋಟೋಗಳು ತಮ್ಮ ಬಳಿ ಇದ್ದು ಈಗ ಸುಜಾತಾ ಬಿಡುಗಡೆ ಮಾಡಿರುವ ಫೋಟೋ ಬೆಂಗಳೂರಿನ ಗಂಡನ ಮನೆಯಿಂದ ತೆಗೆದುಕೊಂಡಿರಬಹುದೆಂದು ಅವರು ಸಂಶಯ ವ್ಯಕ್ತಪಡಿಸಿದರು. ಆದರೆ ಸಿಬಿಐ ನಲ್ಲಿ ಸ್ಟೆನೋ ಆಗಿ ಕೆಲಸ ಮಾಡಿದ್ದೆ ಎಂದು ಹೇಳಿಕೊಳ್ಳುವ ಸುಜಾತಾ ಭಟ್‌ ಅವರ ಮಗಳ ನಾಪತ್ತೆ ಪ್ರಕರಣದ ಘಟನೆಗಳು ಒಂದಕ್ಕೊಂದು ತಾಳೆಯೇ ಆಗುವುದಿಲ್ಲ. ಮೇಲ್ನೋಟಕ್ಕೆಯೇ ಈ ಘಟನೆ ಕಾಲ್ಪನಿಕ ಎಂದು ತೋರುತ್ತಿದೆ.

ಅನನ್ಯಾ ಅವರು 10 ನೇ ಹಾಗೂ 12 ನೇ ತರಗತಿಯವರೆಗೆ ವ್ಯಾಸಂಗ ಮಾಡಿದ ಶಾಲೆ ಅಥವಾ ಕಾಲೇಜಿನ ಮಾಹಿತಿ ನೀಡಿಲ್ಲ. ಮಣಿಪಾಲ್‌ ಕಾಲೇಜಿನಲ್ಲಿ ಎಂಬಿಬಿಎಸ್‌ ಸೀಟು ಸಿಗಬೇಕಾದರೆ ಸಿಇಟಿ ಮೂಲಕ ಸಿಗಬೇಕು ಆದರೆ ಇವರ ಬಳಿ ಯಾವುದೇ ದಾಖಲೆಯೇ ಇಲ್ಲ , ತಾನು ಕೋಮಾದಲ್ಲಿರುವಾಗ ಮನೆ ಬೀಗ ಒಡೆದು ಎಲ್ಲವನ್ನೂ ದೋಚಿಕೊಂಡು ಹೋದರು ಎನ್ನುತ್ತಾರೆ. 2003 ರಲ್ಲಿ ಅನನ್ಯ ಮಣಿಪಾಲದಲ್ಲಿ ಓದುತ್ತಿರುವಾಗ ಅವರ ಇತರ ಇಬ್ಬರು ಸ್ನೇಹಿತೆಯರೊಂದಿಗೆ ಧರ್ಮಸ್ಥಳಕ್ಕೆ ಬಂದಿದ್ದರು. ಅಲ್ಲಿ ಅನನ್ಯಾ ಅವರನ್ನು ಕೂರಿಸಿ ಇತರ ಇಬ್ಬರು ಸ್ನೇಹಿತೆಯರು ಮನೆಗೆ ಹೋಗಿ ಬಟ್ಟೆ ತೆಗೆದುಕೊಂಡು ಬರುವುದಾಗಿ ಹೇಳಿ ಹೋಗಿ ಬಂದು ನೋಡುವಾಗ ಅನನ್ಯ ಇರಲಿಲ್ಲ. ರಶ್ಮಿ ಎಂಬ ಸ್ನೇಹಿತೆ ಅನನ್ಯಾ ನಾಪತ್ತೆ ಆಗಿರುವ ಕುರಿತು ಕೋಲ್ಕತಾ ಸಿಬಿಐ ಕಛೇರಿಯನ್ನು ಸಂಪರ್ಕಿಸಿ ತನಗೆ ಮಾಹಿತಿ ನೀಡಿದರು ಎನ್ನುತ್ತಾರೆ. 2003 ರಲ್ಲಿ ಮೊಬೈಲ್‌ ಬಂದಿತ್ತಾದರೂ ಜನಸಾಮಾನ್ಯರ ಬಳಿ ಮೊಬೈಲ್‌ ಬಳಕೆ ಇರಲಿಲ್ಲ ಮತ್ತು ಇದ್ದುದೆಲ್ಲವೂ ಬೇಸಿಕ್‌ ಸೆಟ್‌ ಗಳು. ಆಗ ಇಂಟರ್‌ ನೆಟ್‌ ಬಳಕೆ ಕೂಡ ವ್ಯಾಪಕ ಆಗಿರಲಿಲ್ಲ. ರಶ್ಮಿಗೆ ಅದೇ ದಿನವೇ ಸಿಬಿಐ ಕಚೇರಿಯ ನಂಬರ್‌ ಸಿಕ್ಕಿದ್ದು ಹೇಗೆ ಎಂಬ ಪ್ರಶ್ನೆ ಮೂಡುತ್ತದೆ. ಹೋಗಲಿ ಇಷ್ಟೆಲ್ಲ ದೊಡ್ಡ ಪ್ರಮಾಣದಲ್ಲಿ ಪ್ರಚಾರ , ಪ್ರತಿಭಟನೆ ನಡೆಯುವಾಗಲೂ ಧರ್ಮಸ್ಥಳದ ಸಮೀಪದಲ್ಲೇ ಮನೆ ಇರುವ ಅನನ್ಯ ಭಟ್‌ ಸ್ನೇಹಿತೆ ರಶ್ಮಿ ಯಾಕೆ ಇನ್ನೂ ಎಸ್‌ಐಟಿ ಮುಂದೆ ಬಂದಿಲ್ಲ ? ಸುಜಾತಾ ಭಟ್‌ ಅವರು 9 ವರ್ಷ ಸಿಬಿಐ ನಲ್ಲಿ ಸ್ಟೆನೋ ಆಗಿ ಕೆಲಸ ಮಾಡಿದ್ದರೂ ಅವರಿಗೆ ಡಿಕ್ಟೇಷನ್‌ ನೀಡುತಿದ್ದ ಮೇಲಧಿಕಾರಿಯ ಹೆಸರು ಗೊತ್ತಿಲ್ಲ. ನಾನು ಅವರನ್ನು ಈ ಕುರಿತು ಪ್ರಶ್ನಿಸಿದಾಗ ಮರೆತು ಹೋಗಿದೆ ಎನ್ನುತ್ತಾರೆ. ಕೋಲ್ಕತಾದಲ್ಲಿ ವರ್ಷಗಳ ಕಾಲ ಇದ್ದವರಿಗೆ ಕನಿಷ್ಟ ಪಕ್ಷ ಊಟ ಆಯಿತಾ , ಟೀ ಕುಡಿಯುತ್ತೀರ ಎಂಬುದಕ್ಕೆ ಬೆಂಗಾಲಿ ಪದವಾದರೂ ಗೊತ್ತಿರಬೇಕು ಆದರೆ ಇವರಿಗೆ ಒಂದೇ ಒಂದು ಬೆಂಗಾಲಿ ಭಾಷೆಯ ಪದ ಗೊತ್ತಿಲ್ಲ. ಕೋಮಾದಲ್ಲಿದ್ದುದರಿಂದ ಮರೆತು ಹೋಯ್ತು ಎಂದರು. ಸುಜಾತಾ ಅವರು ಪೋಲೀಸರಿಗೆ ನೀಡಿರುವ ದೂರಿನ ಪ್ರಕಾರ 2003 ರಲ್ಲಿ ತಾವು ಫೋನ್‌ ಕರೆ ಸ್ವೀಕರಿಸಿ ಎರಡು ದಿನ ಬಿಟ್ಟು ಧರ್ಮಸ್ಥಳಕ್ಕೆ ಬಂದು ಪೋಲೀಸರಿಗೆ ಅನನ್ಯ ಮಿಸ್ಸಿಂಗ್‌ ದೂರು ದಾಖಲಿಸಲು ಹೋದಾಗ ಅವರು ಆಕೆ ಬರುತ್ತಾಳೆ ಬಿಡು ಎಂದು ಉಡಾಫೆ ಮಾತನಾಡಿ ದೂರು ಸ್ವೀಕರಿಸದೆ ಕಳಿಸಿದ್ದರು.

ನಂತರ ಇವರು ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರನ್ನು ಭೇಟಿ ಮಾಡಿ ಈ ವಿಷಯ ಹೇಳಿದಾಗ ಅವರೂ ಅಸಡ್ಡೆಯಿಂದ ಮಾತನಾಡಿ ಕಳಿಸಿದರು. ಆಗ ಅವರು ದುಃಖಿತರಾಗಿ ದೇವಾಲಯದ ಬಳಿ ಕುಳಿತಿರುವಾಗ ಧರ್ಮಸ್ಥಳ ದೇವಾಲಯದಲ್ಲಿ ಕೆಲಸ ಮಾಡುವ ನಾಲ್ವರು ಬಂದು ಅವರನ್ನು ಸಮೀಪದಲ್ಲೇ ಇದ್ದ ಕಟ್ಟಡವೊಂದಕ್ಕೆ ಕರೆದುಕೊಂಡು ಹೋಗಿ ಈ ವಿಷಯವನ್ನು ಬಾಯಿ ಬಿಡಬೇಡ ಎಂದು ಬೆದರಿಸಿ ಕುರ್ಚಿಗೆ ಕಟ್ಟಿ ತೀವ್ರವಾಗಿ ಥಳಿಸಿದರು , ನಂತರ ತನ್ನನ್ನು ಯಾರೋ ಆಸ್ಪತ್ರೆಗೆ ಸೇರಿಸಿದರು , ನಾನು ಮೂರು ತಿಂಗಳು ಬೆಂಗಳೂರಿನ ಅಗಡಿ ಆಸ್ಪತ್ರೆಯಲ್ಲಿ ಕೋಮಾದಲ್ಲಿ ಇದ್ದೆ ಎಂದು ಹೇಳಿಕೊಂಡಿದ್ದಾರೆ. ಆದರೆ ಇವರ ಹೇಳಿಕೆಯಲ್ಲೇ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿವೆ. ಇವರನ್ನು ಕುರ್ಚಿಗೆ ಕಟ್ಟಿ ಥಳಿಸಿ ಗಾಯಗೊಂಡಾಗ ಆಸ್ಪತ್ರೆಗೆ ಸೇರಿಸಿದ್ದು ಯಾರು ಎಂದರೆ ಗೊತ್ತಿಲ್ಲ ಎನ್ನುತ್ತಾರೆ.

 ಧರ್ಮಸ್ಥಳದಿಂದ 70 ಕಿಮಿ ದೂರದ ಮಂಗಳೂರಿನಲ್ಲಿ ಉತ್ತಮ ಆಸ್ಪತ್ರೆಗಳಿವೆ. ಅಲ್ಲಿಗೆ ಸೇರಿಸುವುದು ಬಿಟ್ಟು ದುಬಾರಿ ವೆಚ್ಚದ ಆಂಬುಲೆನ್ಸ್‌ ನಲ್ಲಿ 300 ಕಿಮಿ ದೂರದ ಬೆಂಗಳೂರಿಗೆ ಕರೆದೊಯ್ಯುವ ಅವಶ್ಯಕತೆ ಏನಿತ್ತು ? ಅವರ ಹೇಳಿಕೆಯ ಸತ್ಯಾಸತ್ಯತೆ ಪರೀಕ್ಷಿಸಲು ಈ ವರದಿಗಾರ ವಿಲ್ಸನ್‌ ಗಾರ್ಡನ್‌ ನಲ್ಲಿರುವ ಅಗಡಿ ಆಸ್ಪತ್ರೆಯಲ್ಲಿ ವಿಚಾರಿಸಿದಾಗ 2023 ರಲ್ಲಿ ಸುಜಾತಾ ಭಟ್‌ ಹೆಸರಿನ ಯಾವುದೇ ರೋಗಿ ಐಸಿಯುನಲ್ಲಿ ಮೂರು ತಿಂಗಳ ಕಾಲ ಚಿಕಿತ್ಸೆ ಪಡೆದ ದಾಖಲೆ ಇಲ್ಲವೇ ಇಲ್ಲ ಎಂದು ಹೇಳಿದ್ದಾರೆ. ಈ ವರದಿಗಾರ ಕೋಲ್ಕತಾದ ಸಿಬಿಐ ಕಚೇರಿಗೆ ದೂರವಾಣಿ ಕರೆ ಮಾಡಿ ವಿಚಾರಿಸಿದಾಗ ಸುಜಾತಾ ಭಟ್‌ ಎನ್ನುವವರು ಯಾರೂ ಅಲ್ಲಿ ಸ್ಟೆನೋ ಆಗಿರಲೇ ಇಲ್ಲ , ಇವರು ಹೇಳುವ ಅವಧಿಯಲ್ಲಿ ದೇಬಶಿಶ್‌ ಮತ್ತು ಮೌಮಿತಾ ಮುಖರ್ಜಿ ಎನ್ನುವವರು ಸ್ಟೆನೋಗಳಾಗಿ ಕೆಲಸ ನಿರ್ವಹಿಸಿದ್ದರು ಎಂದು ತಿಳಿಸಿದ್ದಾರೆ. ತಾನು 9 ವರ್ಷ ಕೆಲಸ ಮಾಡಿ ತನಗೆ ಬರಬೇಕಾದ ಬಾಕಿ ಹಣ ಪಿಎಫ್‌ ಇತ್ಯಾದಿ ಎಲ್ಲವನ್ನೂ ಬಿಟ್ಟು ಬಂದೆ ಪುನಃ ಕೋಲ್ಕತಾಗೆ ಹೋಗಲಿಲ್ಲ ಎಂದು ಸುಜಾತಾ ಹೇಳುತ್ತಾರೆ. ಇವರ ಹೇಳಿಕೆಯು ಮೇಲ್ನೋಟಕ್ಕೆ ಕಟ್ಟು ಕಥೆ ಎಂಬಂತೆ ತೋರುತ್ತಿದೆ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ತಿಳಿಸಿದರು. ಇದಲ್ಲದೆ ಧರ್ಮಸ್ಥಳದ ಹೆಗಡೆ ಅವರು ತಮ್ಮ ತಂದೆಯ ಪಿತ್ತಾರ್ಜಿತ ಆಸ್ತಿಯನ್ನು ತನ್ನ ಒಪ್ಪಿಗೆ ಇಲ್ಲದೆ ಖರೀದಿಸಿದ್ದಾರೆ ತನಗೆ ಸೂಕ್ತ ಪಾಲು ಸಿಕ್ಕಿಲ್ಲ ಎಂದೂ ಆರೋಪಿಸುತಿದ್ದಾರೆ.

ಫೋಟೋ ವಿಷಯ ಬಯಲಾದ ನಂತರ ನಾನು ಹೇಳುವುದು ಸತ್ಯ , ನನ್ನ ಪುತ್ರಿ ಅನನ್ಯ ಕೋಲ್ಕತಾದಲ್ಲೇ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಮಾಡಿರುವುದಾಗಿಯೂ ಹೇಳಿಕೆ ನೀಡಿದ್ದಾರೆ. ಮಗಳ ಫೋಟೋ ಗೂ ಕೊಡಗಿನ ವಾಸಂತಿ ಅವರ ಫೋಟೋಗೂ ಹೋಲಿಕೆ ಆಕಸ್ಮಿಕ ಆಗಿರಬಹುದು ಎನ್ನುತಿದ್ದಾರೆ. ಒಂದು ವೇಳೆ ಅನನ್ಯ ಹೆಸರನ್ನು ಹೇಳಿಕೊಂಡು ಸುಳ್ಳು ಪ್ರಕರಣ ದಾಖಲಿಸಿದ್ದರೆ ಎಸ್‌ಐಟಿ ದೂರುದಾರರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.