ಮೊಗೇರ ದುಡಿ ಆಯನ 2026; ಸುಳ್ಯದಲ್ಲಿ ಫೆ.28 ಮತ್ತು ಮಾ.1 ರಂದು ಸಮಾವೇಶ
ಮಡಿಕೇರಿ: ಕರ್ನಾಟಕ ರಾಜ್ಯ ಮೊಗೇರ ಸಂಘದ ಐವತ್ತನೇ ವರ್ಷದ ಸುವರ್ಣ ಸಂಭ್ರಮದ ಅಂಗವಾಗಿ ಆಯೋಜಿಸಲಾಗಿರುವ ಐತಿಹಾಸಿಕ ಮೊಗೇರ ದುಡಿ ಆಯನ 2026 ಸಮಾವೇಶ ಸುಳ್ಯದಲ್ಲಿ ಫೆ.28 ಮತ್ತು ಮಾ.1 ರಂದು ಹಮ್ಮಿಕೊಳ್ಳಲಾಗಿದೆ ಎಂದು ಮೊಗೇರ ಸಂಘದ ರಾಜ್ಯಾಧ್ಯಕ್ಷ ನಂದರಾಜ ಸಂಕೇಶ ತಿಳಿಸಿದ್ದಾರೆ.
ಫೆ.೨೮ರ ಶನಿವಾರ ಬೆಳಿಗ್ಗೆ ೯:೦೦ ಗಂಟೆಗೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಮೊಗೇರ ಸಂಘದ ರಾಜ್ಯಾಧ್ಯಕ್ಷ ನಂದರಾಜ್ ಸಂಕೇಶ್ ಅವರು ವಹಿಸಲಿದ್ದು, ಸಂಘದ ಸ್ಥಾಪಕ ಸದಸ್ಯ ಗಣಪ ಕೆ.ಮೂಡುಶೆಡ್ಡೆ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಮತ್ತೊಬ್ಬ ಸ್ಥಾಪಕ ಸದಸ್ಯ ಶುಭೋದಯ ಕೂಡ್ಲು ಅವರು ಸುವರ್ಣ ಸಂಭ್ರಮವನ್ನು ಉದ್ಘಾಟಿಸಲಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ.ಅಭಯಕುಮಾರ್ ಅವರು ಪ್ರಸ್ತಾವಿಕ ಭಾಷಣದ ಮೂಲಕ ಸಮಾಜದ ಹಿನ್ನೆಲೆ ಮತ್ತು ಸಾಂಸ್ಕೃತಿಕ ಮಹತ್ವವನ್ನು ವಿವರಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಬೆಳಿಗ್ಗೆ ೧೦ ಗಂಟೆಗೆ ಸುಳ್ಯದ ಜ್ಯೋತಿ ವೃತ್ತದಿಂದ ಶ್ರೀ ಚೆನ್ನಕೇಶವ ದೇವಸ್ಥಾನದವರೆಗೆ ಸಹಸ್ರಾರು ಸಂಖ್ಯೆಯ ಮೊಗೇರ ಬಾಂಧವರು ಪಾಲ್ಗೊಳ್ಳುವ ಬೃಹತ್ ಮೆರವಣಿಗೆ ನಡೆಯಲಿದೆ.
ನಂತರ ೧೧ ಗಂಟೆಗೆ ಬಹಿರಂಗ ಸಭೆ ನಡೆಯಲಿದ್ದು ಸ್ಪೀಕರ್ ಯು.ಟಿ.ಖಾದರ್, ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ದಿನೇಶ್ ಗುಂಡೂರಾವ್, ಸಂಸದರಾದ ಬ್ರಿಜೇಶ್ ಚೌಟ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮೊಗೇರ ಸಂಘದ ರಾಜ್ಯಾ ಉಪಾಧ್ಯಕ್ಷ ಪಿ.ಕೆ.ಚಂದ್ರು, ಮೊಗೇರ ಸೇವಾ ಸಮಾಜದ ಅಧ್ಯಕ್ಷ ಪಿ.ಬಿ.ಜನಾರ್ಧನ, ಮೊಗೇರ ಸೇವಾ ಸಮಾಜದ ಗೌರವಾಧ್ಯಕ್ಷ ಪಿ.ಎಂ.ರವಿ, ಪ್ರಮುಖರಾದ ಕರುಣಾಕರ ಪಲ್ಲತಡ್ಕ, ಅಚ್ಯುತ ಮಲ್ಕಜೆ ಇದ್ದರು.