'ದೃಶ್ಯಂ' ಸಿನಿಮಾ ಶೈಲಿಯಲ್ಲಿ ವೃದ್ಧೆಯ ಕೊಲೆ: ಮೃತ ದೇಹವನ್ನು ಬಚ್ಚಿಟ್ಟು ಪರಾರಿಯಾದ ಮಹಿಳೆಯ ಬಂಧನ | ಬಿಸಿ ಬಿಸಿ ಕಜ್ಜಾಯ ತಿನ್ನಿ ಎಂದು ಕರೆಸಿ ಚಿನ್ನಕ್ಕಾಗಿ ಕೊಲೆ!
ಬೆಂಗಳೂರು, ನ.8: ‘ದೃಶ್ಯಂ’ ಸಿನಿಮಾ ಕಥೆ ನೆನಪಿಸುವ ರೀತಿಯ ಕೊಲೆ ಪ್ರಕರಣವೊಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕೂಗೂರಿನಲ್ಲಿ ಬೆಳಕಿಗೆ ಬಂದಿದೆ. ಕಜ್ಜಾಯ ನೀಡುವ ನೆಪದಲ್ಲಿ ಮನೆಗೆ ಕರೆಯಿಸಿಕೊಂಡು ವೃದ್ಧೆಯೊಬ್ಬರ ಹತ್ಯೆ ಮಾಡಿ ಶವವನ್ನು ಬಚ್ಚಿಟ್ಟಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಹತ್ಯೆಯಾದವರನ್ನು ಕೂಗೂರು ಗ್ರಾಮದ ಭದ್ರಮ್ಮ (68) ಎಂದು ಗುರುತಿಸಲಾಗಿದೆ. ಉತ್ತಮ ಜೀವನ ನಡೆಸುತ್ತಿದ್ದ ಭದ್ರಮ್ಮ ತಮ್ಮ ಕುಟುಂಬ ಹಾಗೂ ಗ್ರಾಮದವರ ಜೊತೆ ಆತ್ಮೀಯ ಬಾಂಧವ್ಯ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅದೇ ಗ್ರಾಮದ ದೀಪಾ ಎಂಬ ಮಹಿಳೆ ಹಬ್ಬದ ಸಂದರ್ಭ ಕಜ್ಜಾಯ ಮಾಡಿರುವುದಾಗಿ ಹೇಳಿ ಅಕ್ಟೋಬರ್ 30ರಂದು ಭದ್ರಮ್ಮರನ್ನು ಮನೆಗೆ ಆಹ್ವಾನಿಸಿದ್ದಳು. “ನೀವು ಬಂದು ಕಜ್ಜಾಯ ಸ್ವೀಕರಿಸಿದರೆ ನಮಗೆ ಆಶೀರ್ವಾದ ಸಿಕ್ಕಂತೆ” ಎಂದು ಆಕೆಯನ್ನು ಮನವೊಲಿಸಿದ್ದಳು. ವಿಶ್ವಾಸದಿಂದ ದೀಪಾ ಮನೆಗೆ ತೆರಳಿದ ಭದ್ರಮ್ಮ ಬಳಿಕ ಮನೆಗೆ ಹಿಂತಿರುಗಿರಲಿಲ್ಲ.
ರಾತ್ರಿಯಾದರೂ ಮನೆಗೆ ವಾಪಸ್ ಆಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದರು. ಸಿಸಿಟಿವಿ ದೃಶ್ಯಗಳು ಹಾಗೂ ಗ್ರಾಮಸ್ಥರಿಂದ ಪಡೆದ ಮಾಹಿತಿಗಳ ಆಧಾರದ ಮೇಲೆ ಪೊಲೀಸರು ತನಿಖೆ ಮುಂದುವರೆಸಿದರು. ಈ ವೇಳೆ ದೀಪಾ ನಡೆ-ನುಡಿಗಳ ಬಗ್ಗೆ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.
ಆರಂಭದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ ದೀಪಾ ಕೊನೆಗೆ ಪೊಲೀಸರ ವಿಚಾರಣೆಯ ವೇಳೆ ಸತ್ಯ ಬಾಯ್ಬಿಟ್ಟಿದ್ದಾಳೆ. ಆಕೆ ಕಜ್ಜಾಯದ ನೆಪದಲ್ಲಿ ಮನೆಗೆ ಬಂದ ಭದ್ರಮ್ಮಳನ್ನು ಹತ್ಯೆ ಮಾಡಿ, ಎರಡು ದಿನ ಮನೆಯಲ್ಲೇ ಶವ ಬಚ್ಚಿಟ್ಟಿದ್ದಾಳೆ. ನಂತರ ದುರ್ವಾಸನೆ ಹೆಚ್ಚುತ್ತಿದ್ದಂತೆಯೇ ಶವವನ್ನು ಕಾರಿನಲ್ಲಿ ತುಂಬಿಕೊಂಡು ತಿಮ್ಮಸಂದ್ರ ಕೆರೆಯಲ್ಲಿ ಎಸೆದು ಪರಾರಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೂರ್ವನಿಯೋಜಿತವಾಗಿ ಚಿನ್ನಾಭರಣಕ್ಕಾಗಿ ದೀಪಾ ಈ ಕೃತ್ಯ ಎಸಗಿದ್ದಾಳೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಆರೋಪಿಯ ಮಾಹಿತಿ ಆಧರಿಸಿ ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು ಕೆರೆಯಿಂದ ಭದ್ರಮ್ಮಳ ಶವವನ್ನು ಕೊಳತೆ ಸ್ಥಿತಿಯಲ್ಲಿ ಪತ್ತೆಹಚ್ಚಿದ್ದಾರೆ.
ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್ಪಿ ವೆಂಕಟೇಶ್ ಪ್ರಸನ್ನ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
