ಆಸ್ತಿ ಆಸೆಗೆ ಸಾಕು ತಾಯಿಯ ಕೊಲೆ: ಚಿಕ್ಕಮಗಳೂರಿನಲ್ಲಿ ಮಗಳ ಕ್ರೂರ ಕೃತ್ಯ

ಆಸ್ತಿ ಆಸೆಗೆ ಸಾಕು ತಾಯಿಯ ಕೊಲೆ: ಚಿಕ್ಕಮಗಳೂರಿನಲ್ಲಿ ಮಗಳ ಕ್ರೂರ ಕೃತ್ಯ

ಚಿಕ್ಕಮಗಳೂರು, ನ. 12:ಆಸ್ತಿ ಮತ್ತು ಹಣದ ಆಸೆ ಮಾನವೀಯತೆಯನ್ನೇ ನುಂಗಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಂಡಿಮಠ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಸಾಕು ತಾಯಿಯನ್ನೇ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ ಸಾಕು ಮಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೃತರನ್ನು ಕುಸುಮ (62) ಎಂದು ಗುರುತಿಸಲಾಗಿದೆ. ಆರೋಪಿ ಸುಧಾ. ಆಸ್ತಿ ವಿವಾದವೇ ಈ ಹತ್ಯೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಮೂಲತಃ ಎನ್.ಆರ್.ಪುರದ ನಿವಾಸಿಯಾದ ಕುಸುಮ ಬಾಳೆಹೊನ್ನೂರಿನ ಬಂಡಿಮಠದಲ್ಲಿ ಕೂಲಿ ಕೆಲಸ ಮಾಡಿಕೊಂಡುಡಿದ್ದರು. ಗಂಡ ಬಿಟ್ಟುಹೋದ ಬಳಿಕ ಒಂಟಿಯಾಗಿ ಜೀವನ ನಡೆಸುತ್ತಿದ್ದ ಅವರು ತಮ್ಮ ತಂಗಿಯ ಮಗಳು ಸುಧಾಳನ್ನು ಸಾಕುಮಗಳಾಗಿ ಬೆಳೆಸಿ, ಮೈಸೂರಿನಲ್ಲಿ ಮದುವೆ ಮಾಡಿಕೊಟ್ಟಿದ್ದರು. ತನ್ನ ಸಣ್ಣ ಕಾಫಿ ತೋಟದ ಆಸ್ತಿಯನ್ನು ಕೂಡ ಸುಧಾಳ ಹೆಸರಿಗೆ ವಿಲ್ ಮಾಡಿದ್ದರು.

ಆದರೆ ಬಳಿಕ ಕುಸುಮ ಆ ಆಸ್ತಿಯನ್ನು ಹಿಂಪಡೆದಿದ್ದರು. ಈ ನಿರ್ಧಾರಕ್ಕೆ ಬೇಸರಗೊಂಡ ಸುಧಾ, ಆಸ್ತಿಯ ಮೇಲಿನ ಆಸೆಯಿಂದ ಹಾಗೂ ಹಣಕ್ಕಾಗಿ ಸಾಕು ತಾಯಿಯ ಜೀವವನ್ನೇ ತೆಗೆಯಲು ಯತ್ನಿಸಿದ್ದಾಳೆ ಎಂದು ತನಿಖೆಯಿಂದ ಬಹಿರಂಗವಾಗಿದೆ.

ನವೆಂಬರ್ 10ರ ರಾತ್ರಿ ಮೈಸೂರಿನಿಂದ ಬಂಡಿಮಠಕ್ಕೆ ಬಂದ ಸುಧಾ, ಮಲಗಿದ್ದ ಕುಸುಮಾ ತಲೆಯ ಮೇಲೆ ತಲೆದಿಂಬು ಒತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ. ನಂತರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ನಾಟಕವಾಡಿ, ತಾನೇ ಅಂತ್ಯಕ್ರಿಯೆಯನ್ನೂ ನೆರವೇರಿಸಿದ್ದಾಳೆ.

ಆದರೆ ಕುಸುಮಾ ಮುಖದ ಮೇಲಿನ ಗಾಯದ ಗುರುತು ಹಾಗೂ ಅನುಮಾನಾಸ್ಪದ ಸ್ಥಿತಿಯನ್ನು ಗಮನಿಸಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದರು. ತನಿಖೆ ನಡೆಸಿದ ಬಾಳೆಹೊನ್ನೂರು ಪೊಲೀಸರು ಸುಧಾಳ ಕೃತ್ಯವನ್ನು ಬಯಲಿಗೆಳೆದಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿ, ಆರೋಪಿ ಸುಧಾಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.