“ನನ್ನ ಮೆದುಳು ತಿಂಗಳಿಗೆ 200 ಕೋಟಿ ರೂಪಾಯಿ ಮೌಲ್ಯದ್ದು, ನಾನು ಪ್ರಾಮಾಣಿಕವಾಗಿ ಸಂಪಾದಿಸುತ್ತೇನೆ”: ಕೇಂದ್ರ ಸಚಿವ ನಿತಿನ್ ಗಡ್ಕರಿ : E20 ಪೆಟ್ರೋಲ್ ವಿವಾದದ ನಡುವೆ ಗಡ್ಕರಿ ಹೇಳಿಕೆ

“ನನ್ನ ಮೆದುಳು ತಿಂಗಳಿಗೆ 200 ಕೋಟಿ ರೂಪಾಯಿ ಮೌಲ್ಯದ್ದು, ನಾನು ಪ್ರಾಮಾಣಿಕವಾಗಿ ಸಂಪಾದಿಸುತ್ತೇನೆ”: ಕೇಂದ್ರ ಸಚಿವ ನಿತಿನ್ ಗಡ್ಕರಿ   : E20 ಪೆಟ್ರೋಲ್ ವಿವಾದದ ನಡುವೆ  ಗಡ್ಕರಿ ಹೇಳಿಕೆ
(Photo: Screengrab/India Today)

ನಾಗ್ಪುರ: ಎಥೆನಾಲ್ ಮಿಶ್ರಿತ ಪೆಟ್ರೋಲ್ (E20) ಕುರಿತ ವಿವಾದ ತೀವ್ರಗೊಂಡಿರುವ ಸಂದರ್ಭದಲ್ಲಿ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಮ್ಮ ಮೇಲೆ ಕೇಳಿಬಂದಿರುವ ವೈಯಕ್ತಿಕ ಲಾಭದ ಆರೋಪಗಳನ್ನು ತಳ್ಳಿಹಾಕಿದ್ದಾರೆ.

ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗಡ್ಕರಿ, “ನನ್ನ ಮೆದುಳು ತಿಂಗಳಿಗೆ 200 ಕೋಟಿ ರೂಪಾಯಿ ಮೌಲ್ಯದ್ದು. ನನಗೆ ಪ್ರಾಮಾಣಿಕವಾಗಿ ಹೇಗೆ ಸಂಪಾದಿಸಬೇಕೆಂದು ತಿಳಿದಿದೆ. ನನಗೆ ಹಣದ ಕೊರತೆಯೇ ಇಲ್ಲ” ಎಂದು ಅವರು ಸ್ಪಷ್ಟಪಡಿಸಿದರು.

ಸರ್ಕಾರ ಎಥೆನಾಲ್ ಬಳಕೆಯನ್ನು ಸ್ವಚ್ಛ ಮತ್ತು ಅಗ್ಗದ ಪರ್ಯಾಯ ಇಂಧನವೆಂದು ಪ್ರಚಾರ ಮಾಡುತ್ತಿರುವಾಗ, ಆಹಾರ-ನೀರಿನ ಸುರಕ್ಷತೆ, ವಾಹನಗಳ ಭದ್ರತೆ ಹಾಗೂ ಗ್ರಾಹಕರ ಆಯ್ಕೆ ಕುರಿತ ಪ್ರಶ್ನೆಗಳು ಕೇಳಿಬರುತ್ತಿದೆ. ಇದಲ್ಲದೆ, ಗಡ್ಕರಿ ಅವರ ಪುತ್ರರು ಪ್ರಮುಖ ಎಥೆನಾಲ್ ಕಂಪೆನಿಗಳನ್ನು ನಡೆಸುತ್ತಿದ್ದಾರೆ ಎಂಬ ಟೀಕೆಗಳು ಎದುರಾಗಿವೆ.

ಈ ಹಿನ್ನೆಲೆಯಲ್ಲಿ ಗಡ್ಕರಿ, “ನಾನು ಮಕ್ಕಳಿಗೆ ಕಲ್ಪನೆಗಳನ್ನು ನೀಡುತ್ತೇನೆ. ಆದರೆ ವಂಚನೆ ಮಾಡುವುದಿಲ್ಲ. ನನ್ನ ಪುತ್ರ ಇತ್ತೀಚೆಗೆ ಇರಾನ್‌ ನಿಂದ ಸೇಬುಗಳನ್ನು ಆಮದು ಮಾಡಿ, ಭಾರತದಿಂದ ಬಾಳೆಹಣ್ಣುಗಳನ್ನು ರಫ್ತು ಮಾಡಿದ್ದಾರೆ” ಎಂದು ಉದಾಹರಣೆ ನೀಡಿದರು. ತಮ್ಮ ಸ್ವಂತ ವ್ಯವಹಾರಗಳ ವಿವರಗಳನ್ನು ಹಂಚಿಕೊಂಡ ಅವರು, ಸಕ್ಕರೆ ಕಾರ್ಖಾನೆ, ಡಿಸ್ಟಿಲರಿ ಹಾಗೂ ವಿದ್ಯುತ್ ಸ್ಥಾವರಗಳನ್ನು ಹೊಂದಿರುವುದಾಗಿ ತಿಳಿಸಿದರು.

 ಸ್ಥಳೀಯ ಉದ್ಯಮಶೀಲತೆಯನ್ನು ಉತ್ತೇಜಿಸುವ ದೃಷ್ಟಿಯಿಂದ ನಾಗ್ಪುರದಲ್ಲಿ ಹಣ್ಣು-ತರಕಾರಿ ಮಾರಾಟಗಾರರಿಗೆ “ಫ್ರೂಟ್ ಮಾಲ್”ಗಳ ಕಲ್ಪನೆ ನೀಡಿರುವುದನ್ನು ಗಡ್ಕರಿ ಉಲ್ಲೇಖಿಸಿದರು. ಇದರಿಂದ ರೈತರಿಗೂ ವ್ಯಾಪಾರಿಗಳಿಗೊ ಸಹಾಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಪE20 ಪೆಟ್ರೋಲ್ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ವಿರುದ್ಧ ನಡೆಯುತ್ತಿರುವ ಅಭಿಯಾನವನ್ನು ಪ್ರಾಯೋಜಿತ ಹಾಗೂ “ರಾಜಕೀಯ ಪ್ರೇರಿತ” ಎಂದು ವರ್ಣಿಸಿದ ಗಡ್ಕರಿ, ಇಂಧನವು ಸುರಕ್ಷಿತವಾಗಿದ್ದು, ವೆಚ್ಚ-ಪರಿಣಾಮಕಾರಿ ಹಾಗೂ ಮಾಲಿನ್ಯ ನಿಯಂತ್ರಣಕ್ಕೆ ಸಹಾಯಕವಾಗಿದೆ ಎಂದರು.

ಇದಲ್ಲದೆ, ಮೆಕ್ಕೆಜೋಳ ಮತ್ತು ಕಬ್ಬಿನಂತಹ ಬೆಳೆಗಳಿಗೆ ಬೇಡಿಕೆ ಹೆಚ್ಚುವ ಮೂಲಕ ರೈತರಿಗೆ ನೇರ ಪ್ರಯೋಜನ ಸಿಗುತ್ತದೆ ಎಂದು ಅವರು ಉಲ್ಲೇಖಿಸಿದರು.