ನಾಪೋಕ್ಲು: ಬಿದ್ದಾಟಂಡ ವಾಡೆಯ ನೂರಂಬಡ ನಾಡ್ ಮಂದ್ ನಲ್ಲಿ ಸಂಭ್ರಮದಿಂದ ಜರುಗಿದ ಪುತ್ತರಿ ಕೋಲಾಟ
ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು :ನಾಪೋಕ್ಲು ಬಳಿಯ ಬಿದ್ದಾಟಂಡ ವಾಡೆಯ ಐತಿಹಾಸಿಕ ನೂರಂಬಡ ನಾಡ್ ಮಂದ್ ನಲ್ಲಿ ಪುತ್ತರಿ ಹಬ್ಬದ ಪ್ರಯುಕ್ತ ನಡೆದ ಕೋಲಾಟ ಕಾರ್ಯಕ್ರಮವು ಸಂಭ್ರಮದಿಂದ ನಡೆಯಿತು.
ಬೇತು ಗ್ರಾಮದ ಪ್ರಸಿದ್ಧ ಶ್ರೀ ಮಕ್ಕಿ ಶಾಸ್ತಾವು ದೇವಾಲಯದಿಂದ ಊರಿನ ಮುಖ್ಯಸ್ಥರು ದೇವರ ಕೋಲು, ವಸ್ತ್ರ ಹಾಗೂ ಬೆಳ್ಳಿಯ ಖಡ್ಗದೊಂದಿಗೆ ದೈವಾಧೀನವಾಗಿ ಸಾಂಪ್ರದಾಯಿಕ ಕಾಪಳಕಳಿ,ಕೊಂಬು,ಕೊಟ್ಟು ವಾಲಗ, ದುಡಿ ಕೊಟ್ಟ್ ಪಾಟ್ ನೊಂದಿಗೆ ಬೇತು ಗ್ರಾಮದ ಕುರುಂಬರಾಟ್ ಎಂಬ ಸ್ಥಳದಿಂದ ಬಿದ್ದಾಟಂಡ ವಾಡೆಗೆ ಗ್ರಾಮಸ್ಥರು ಮೆರವಣಿಗೆಯ ಮೂಲಕ ಬರುತ್ತಿದ್ದಂತೆ ನೂರಂಬಡ ಮಂದ್ ನಲ್ಲಿ ಬಿದ್ದಾಟಂಡ ಕುಟುಂಬದ ಹಿರಿಯರು ಸಾಂಪ್ರದಾಯಿಕ ಉಡುಪು ಧರಿಸಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುವುದರ ಮೂಲಕ ದೇವರ ಕೋಲನ್ನು ಬರಮಾಡಿಕೊಳ್ಳಲಾಯಿತು.
ನೂರಂಬಡ ನಾಡಿಗೆ ಸಂಬಂಧಿಸಿದಂತೆ ಬೇತು ಗ್ರಾಮದ ಶ್ರೀ ಮಕ್ಕಿ ಶಾಸ್ತಾವು ದೇವಾಲಯದಿಂದ ಪುತ್ತರಿ ಹಬ್ಬಕ್ಕೆ ಚಾಲನೆ ನೀಡಲಾಗುತ್ತದೆ. ಅದರಂತೆ ನಾಲ್ಕು ಗ್ರಾಮದವರು ದುಡಿಕೊಟ್ಟ್ ಪಾಟ್ ನೊಂದಿಗೆ ಬಿದ್ದಾಟಂಡ ವಾಡೆಗೆ ಬರುತ್ತಾರೆ.ಅದರಂತೆ ಮೂಟೇರಿ,ಕೊಳಕೇರಿಯ ಗ್ರಾಮಸ್ಥರು ಬರುತ್ತಿದ್ದಂತೆ ಅವರನ್ನು ಬಿದ್ದಾಟಂಡ ವಾಡೆಗೆ ಬರಮಾಡಿಕೊಳ್ಳಲಾಯಿತು.
ಬಳಿಕ ಕೋಲಾಟ ನಡೆಸುವ ಮರದ ಕೆಳಗೆ ದೇವರ ಕೋಲನ್ನು ಇಟ್ಟು ಪ್ರಾರ್ಥನೆ ಸಲ್ಲಿಸಿದ ಬಳಿಕ ಸಾಂಪ್ರದಾಯಿಕ ಪುತ್ತರಿ ಕೋಲಾಟಕ್ಕೆ ಚಾಲನೆ ನೀಡಲಾಗಿ ಬಿದ್ದಾಟಂಡ ವಾಡೆಯ ಮಂದ್ ನಲ್ಲಿ ಮೂರು ಗ್ರಾಮಸ್ಥರು ಸೇರಿ ಕೋಲಾಟವನ್ನು ದೇವರ ಉದ್ಘೋಷದೊಂದಿಗೆ ನಡೆಸಿದರು.j ಗ್ರಾಮಸ್ಥರ ಉತ್ಸಾಹ ಹರ್ಷೋದ್ಗಾರಗಳ ನಡುವೆ ನೂರಂಬಡ ಮಂದ್ ನ ಪುತ್ತರಿ ಕೋಲಾಟದ ಸಂಭ್ರಮವನ್ನು ನೆರೆದ ಜನರು ಕಣ್ತುಂಬಿಕೊಂಡರು.
ಇದೇ ವಾಡೆಯಲ್ಲಿ ಎರಡನೇ ದಿನ ಚಿಕ್ಕ ಕೋಲಾಟವನ್ನು ಇದೇ ಮೂರು ಗ್ರಾಮಸ್ಥರು ಸೇರಿ ನಡೆಸಿದ ಬಳಿಕ ಕೋಲನ್ನು ಮಕ್ಕಿಶಾಸ್ತಾವು ದೇವಾಲಯಕ್ಕೆ ಒಪ್ಪಿಸುವುದರೊಂದಿಗೆ ಹಬ್ಬ ಸಂಭ್ರಮದಿಂದ ಸಂಪನ್ನಗೊಳ್ಳಲಿದೆ.
:ಕಾಪಳಕಳಿ ಪುತ್ತರಿಹಬ್ಬದಲ್ಲಿ ಕಾಪಳಕಳಿಗೆ ಹೆಚ್ಚು ಪ್ರಾಮುಖ್ಯತೆ ಇದೆ. ಪುತ್ತರಿ ಹಬ್ಬದಂದು ಬೇತು ಗ್ರಾಮದ ಮಕ್ಕಿಶಾಸ್ತಾವು ದೇವಾಲಯಕ್ಕೆ ಅಡಗಿದ ಕೆಂಬಟ್ಟಿ ಜನಾಂಗದವರು ಕಾಪಳ ವೇಷವನ್ನು ಧರಿಸುತ್ತಾರೆ.ಮೈಗೆ ಕಪ್ಪು ಬಣ್ಣದ ಮಸಿಯನ್ನು ಬಳಿದು ಕೈಯಲ್ಲಿ ಅಂಗರೆ ಕೋಲು ಹಿಡಿದು ವಾದ್ಯಕ್ಕೆ ತಕ್ಕಂತೆ ಕುಣಿಯುತ್ತಾರೆ. ಈ ವೇಷ ಎರಡು ಮೂರು ದಿನಗಳ ಕಾಲ ಇದ್ದು, ಊರಿನ ಎಲ್ಲಾ ಮನೆಗಳಿಗೆ ತೆರಳುವುದು ಸಾಂಪ್ರದಾಯಿಕವಾಗಿ ನಡೆದು ಬಂದಿರುತ್ತದೆ.
ಕೋಲಾಟ ಕಾರ್ಯಕ್ರಮದಲ್ಲಿ ಊರಿನ ಪರ ಊರಿನ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡು ಕೋಲಾಟ ಕಾರ್ಯಕ್ರಮಕ್ಕೆ ಮೆರಗು ನೀಡಿದರು.ಕಾರ್ಯಕ್ರಮದಲ್ಲಿ ಬಿದ್ದಾಟಂಡ ಕುಟುಂಬದ ಪ್ರಮುಖರಾದ ರಮೇಶ್ ಚಂಗಪ್ಪ ಹಾಗೂ ಬೇತು ಗ್ರಾಮದ ಕೊಂಡಿರ ಕುಟುಂಬದ ಗಣೇಶ್ ಅವರು ನಾಡ್ ಮಂದ್ ನಲ್ಲಿ ನಡೆಯುವ ಕೋಲಾಟದ ಇತಿಹಾಸದ ಕುರಿತು ಮಾಹಿತಿ ನೀಡಿದರು.
