ಬೆಳಗಾವಿಯಲ್ಲಿ ಅಂತರಾಷ್ಟ್ರೀಯ ಸೈಬರ್ ವಂಚನೆ ಜಾಲ ಭೇದಿಸಿದ ಪೊಲೀಸರು; ಅಮೆರಿಕದ ನಾಗರಿಕರೇ ಗುರಿಯಾಗಿಸಿದ್ದ 33 ಮಂದಿಯ ತಂಡದ ಬಂಧನ
ಬೆಳಗಾವಿ, ನ. 15: ಅಮೆರಿಕದ ನಾಗರಿಕರನ್ನು ಗುರಿಯಾಗಿಸಿಕೊಂಡು ಸೈಬರ್ ವಂಚನೆ ನಡೆಸುತ್ತಿದ್ದ ಬೃಹತ್ ಜಾಲವೊಂದನ್ನು ನಗರ ಪೊಲೀಸರು ಭೇದಿಸಿದ್ದಾರೆ. ನಗರದ ವಾಣಿಜ್ಯ ಪ್ರದೇಶದಲ್ಲಿರುವ ಒಂದು ಕಟ್ಟಡದಲ್ಲಿ ಕಾಲ್ ಸೆಂಟರ್ ರೂಪದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ಜಾಲದಲ್ಲಿ 33 ಮಂದಿ ಕಾರ್ಯನಿರ್ವಹಿಸುತ್ತಿದ್ದರೆಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಮಾಹಿತಿ ನೀಡಿದರು.
ಕಳೆದ ಆರು–ಏಳು ತಿಂಗಳಿನಿಂದ ಈ ಗ್ಯಾಂಗ್ ಸಕ್ರಿಯವಾಗಿದ್ದು, ಪ್ರತಿದಿನ ನೂರಾರು ಕರೆಗಳ ಮೂಲಕ ಅಮೆರಿಕದ ನಾಗರಿಕರ ಬ್ಯಾಂಕಿಂಗ್ ಮಾಹಿತಿಯನ್ನು ಪಡೆದು ವಂಚನೆ ಮಾಡುತ್ತಿದ್ದರು. ಸದಸ್ಯರಿಗೆ ತಿಂಗಳಿಗೆ ₹18,000–₹45,000 ಸಂಬಳ ನೀಡಲಾಗುತ್ತಿತ್ತು. ಗುರಿ ಮೀರಿಸಿದವರಿಗೆ ಪ್ರೋತ್ಸಾಹ ಧನವನ್ನೂ ಒದಗಿಸಲಾಗುತ್ತಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದರು.
ವಶಪಡಿಸಿಕೊಂಡ ಲ್ಯಾಪ್‌ಟಾಪ್ ಹಾಗೂ ಮೊಬೈಲ್‌ಗಳಲ್ಲಿ ವಂಚನೆಗೆ ಬಳಸಿದ ಕರೆ ರೆಕಾರ್ಡ್‌ಗಳು ಹಾಗೂ ಅಮೆರಿಕದ ನಾಗರಿಕರ ವೈಯಕ್ತಿಕ ಮಾಹಿತಿಗಳ ಸುಳಿವುಗಳು ಪತ್ತೆಯಾಗಿವೆ. ಡಾರ್ಕ್‌ನೆಟ್‌ನಲ್ಲಿ ಸೋರಿಕೆಯಾದ ಡೇಟಾವನ್ನು ಬಳಸಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ವಂಚನೆ ಮೂಲಕ ಸಂಗ್ರಹಿಸಿದ ಹಣವನ್ನು ಹವಾಲಾ ಮೂಲಕ ದೇಶಕ್ಕೆ ತರಲಾಗುತ್ತಿತ್ತು.
ಆರಂಭಿಕವಾಗಿ ಐಟಿ ಕಾಯ್ದೆಯ ಸೆಕ್ಷನ್ 66C (ಐಡೆಂಟಿಟಿ ಥೆಫ್ಟ್) ಮತ್ತು 66D (ವೈಖರಿ ಬದಲಿಸಿ ನಡೆಸಿದ ವಂಚನೆ) ಅಡಿ ಪ್ರಕರಣ ದಾಖಲಿಸಲಾಗಿತ್ತು. ಅಪರಾಧ ಅಂತರಾಷ್ಟ್ರೀಯ ಸ್ವರೂಪದ್ದಾಗಿರುವುದರಿಂದ ಐಟಿ ಕಾಯ್ದೆ 75 (ಭಾರತದ ಹೊರಗೆ ನಡೆದ ಅಪರಾಧ), ಭಾರತೀಯ ನ್ಯಾಯ ಸಂಹಿತೆ 48 ಮತ್ತು 49 (ವಿದೇಶಿ ಅಪರಾಧಗಳಿಗೆ ಸಹಕಾರ), ಟೆಲಿಕಮ್ಯುನಿಕೇಶನ್ ಆ್ಯಕ್ಟ್ 42 (ಅನಧಿಕೃತ ನೆಟ್‌ವರ್ಕ್ ಸ್ಥಾಪನೆ) ಸೆಕ್ಷನ್‌ಗಳನ್ನು ಸೇರಿಸಲಾಗಿದೆ. ಟೆಲಿಕಾಂ ಕಾಯ್ದೆಯನ್ವಯ ₹50 ಲಕ್ಷದವರೆಗೆ ದಂಡ ವಿಧಿಸುವ ಅವಕಾಶವಿದೆ. ಪ್ರಕರಣವನ್ನು ಸಂಘಟಿತ ಅಪರಾಧವೆಂದು ಪರಿಗಣಿಸಿ ಬಿಎನ್‌ಎಸ್‌ನ ಸಂಬಂಧಿತ ಸೆಕ್ಷನ್‌ಗಳನ್ನೂ ಅನ್ವಯಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಡಿಸಿಪಿ (ಲಾ & ಆರ್ಡರ್) ನಾರಾಯಣ್ ಭರಮನಿ, ಎಸಿಪಿ ರಘು, ಇನ್‌ಸ್ಪೆಕ್ಟರ್‌ಗಳು ಗಡೇಕರ್, ಉಸ್ಮಾನ್ ಅವಟಿ ಹಾಗೂ ಅವರ ತಂಡ ಪ್ರಮುಖ ಪಾತ್ರ ವಹಿಸಿದೆ. ಇವರಿಗೆ ಶೀಘ್ರದಲ್ಲೇ ವಿಶೇಷ ಬಹುಮಾನ ಘೋಷಿಸಲಾಗುವುದು ಎಂದು ಆಯುಕ್ತರು ಹೇಳಿದರು.
ವಂಚನೆ ಜಾಲ ನಡೆಯುತ್ತಿದ್ದ ಕುಮಾರ್ ಹಾಲ್ ಕಟ್ಟಡದ ಮಾಲೀಕರನ್ನೂ ವಿಚಾರಣೆ ಮಾಡಲಾಗುತ್ತಿದ್ದು, ಬಾಡಿಗೆ ಒಪ್ಪಂದ ಹಾಗೂ ಹಣಕಾಸು ವ್ಯವಹಾರಗಳ ಪರಿಶೀಲನೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.
