ಗುಂಡೇಟು ಪ್ರಕರಣವನ್ನು ಅಪಘಾತವೆಂದು ಬಿಂಬಿಸಿದ ಪೊಲೀಸರು! ಮೂವರ ಅಮಾನತು

ಜಮ್ಮು: ಕಳೆದ ತಿಂಗಳು ಮಹಿಳೆಯೊಬ್ಬರ ಮೃತಪಟ್ಟ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಆರಂಭದಲ್ಲಿ ರಸ್ತೆ ಅಪಘಾತವೆಂದು ದಾಖಲಿಸಲಾಗಿದ್ದ ಈ ಘಟನೆ, ವಾಸ್ತವವಾಗಿ ಗುಂಡೇಟಿನಿಂದಾದ ಕೊಲೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ. ಪ್ರಕರಣವನ್ನು ಮುಚ್ಚಿಹಾಕಲು ನಿರ್ಲಕ್ಷ್ಯ ತೋರಿದ ಆರೋಪದ ಮೇರೆಗೆ ಮೂವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಆಗಸ್ಟ್ 21ರಂದು ಮುಂಬೈ ಮೂಲದ ಮೆಹಜಬೀನ್ ಅಕಿಲ್ ಶೇಖ್ (30), ಆಕೆಯ ಸಹೋದರಿ ಫಾತಿಮಾ (21) ಮತ್ತು ಲುಧಿಯಾನಾದ ಜಸ್ಪ್ರೀತ್ ಕೌರ್ (28) ಅವರನ್ನು ಇಬ್ಬರು ಪುರುಷರು ಜಮ್ಮುವಿನ ಖಾಸಗಿ ನರ್ಸಿಂಗ್ ಹೋಂಗೆ ಕರೆದುಕೊಂಡು ಬಂದು, ರಿಂಗ್ ರಸ್ತೆಯಲ್ಲಿ ಅಪಘಾತಕ್ಕೊಳಗಾಗಿ ಗಾಯಗೊಂಡಿದ್ದಾರೆಂದು ಹೇಳಿದ್ದರು. ನಂತರ ಅವರನ್ನು ಸರ್ಕಾರಿ ವೈದ್ಯಕೀಯ ಕಾಲೇಜು (ಜಿಎಂಸಿ) ಆಸ್ಪತ್ರೆಗೆ ದಾಖಲಿಸಲಾಯಿತು. ಆಗಸ್ಟ್ 29ರಂದು ಮೆಹಜಬೀನ್ ಮೃತಪಟ್ಟರು.
ಆದರೆ ತನಿಖೆಯಲ್ಲಿ ಮೂವರಿಗೂ ರಸ್ತೆ ಅಪಘಾತದಿಂದ ಗಾಯಗಳಾಗಿಲ್ಲ, ಅಪರಿಚಿತರಿಂದ ಗುಂಡೇಟು ತಗುಲಿದೆ ಎಂಬುದು ಪತ್ತೆಯಾಯಿತು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಜಮ್ಮುವಿನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಜೋಗಿಂದರ್ ಸಿಂಗ್ ಆದೇಶದಂತೆ, ಚನ್ನಿ ಹಿಮ್ಮತ್ ಠಾಣೆಯ ಎಸ್‌ಎಚ್‌ಒ ಇನ್ಸ್‌ಪೆಕ್ಟರ್ ದೀಪಕ್ ಪಠಾನಿಯಾ, ಸೈನಿಕ್ ಕಾಲೋನಿ ಪೊಲೀಸ್ ಪೋಸ್ಟ್ ಇನ್‌ಚಾರ್ಜ್ ಸಬ್‌ಇನ್ಸ್‌ಪೆಕ್ಟರ್ ವಾಸಿಂ ಭಟ್ಟಿ ಹಾಗೂ ಸಬ್‌ಇನ್ಸ್‌ಪೆಕ್ಟರ್ ರೋಹಿತ್ ಶರ್ಮಾ ಅವರನ್ನು ಅಮಾನತುಗೊಳಿಸಲಾಗಿದೆ.
ಮೃತರ ಮರಣೋತ್ತರ ಪರೀಕ್ಷೆಯನ್ನು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ವೀಡಿಯೊಗ್ರಾಫ್ ಮೂಲಕ ನಡೆಸಲಾಗಿದ್ದು, ಮೃತರ ಬಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಸಿಸಿಟಿವಿ ದೃಶ್ಯಾವಳಿ, ಕರೆ ವಿವರ ದಾಖಲೆಗಳು ಹಾಗೂ ಇಂಟರ್ನೆಟ್ ಚಟುವಟಿಕೆಗಳನ್ನು ಪುರಾವೆಯಾಗಿ ಸಂಗ್ರಹಿಸಲಾಗಿದೆ.
ಪೊಲೀಸರು ತಿಳಿಸಿದಂತೆ, ಬಂದೂಕಿನಿಂದ ತಗುಲಿದ ಗಾಯವೇ ಮೆಹಜಬೀನ್ ಅವರ ಸಾವಿಗೆ ನೇರ ಕಾರಣವಾಗಿದೆ. ಪ್ರಕರಣವನ್ನು ಈಗ ಬಿಎನ್ಎಸ್ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಚನ್ನಿ ಹಿಮ್ಮತ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಆಗಿ ದಾಖಲಿಸಲಾಗಿದೆ.
ಗುಂಡು ಹಾರಿಸಿದವರ ಪತ್ತೆ ಹಾಗೂ ಬಂಧನಕ್ಕಾಗಿ ತನಿಖೆ ತೀವ್ರಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.