ಪೊಲೀಸರು ಬಂಧಿಸಿದ ಸೈಬರ್ ಕ್ರಿಮಿನಲ್ ಬಳಿಯಿತ್ತು 377 ಸಿಮ್ ಕಾರ್ಡ್ ಗಳು!

ಪೊಲೀಸರು ಬಂಧಿಸಿದ ಸೈಬರ್ ಕ್ರಿಮಿನಲ್ ಬಳಿಯಿತ್ತು 377 ಸಿಮ್ ಕಾರ್ಡ್ ಗಳು!
Photo credit: India today

ಜಮ್ತಾರಾ, ಜಾರ್ಖಂಡ್: ಸೈಬರ್ ಅಪರಾಧ ವಿರುದ್ಧದ ಪ್ರಮುಖ ಕಾರ್ಯಾಚರಣೆಯಲ್ಲಿ ಜಮ್ತಾರಾ ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿ 377 ಸಿಮ್ ಕಾರ್ಡ್‌ಗಳು ಹಾಗೂ ಹಲವಾರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತನನ್ನು ಅಕ್ಬರ್ ಹುಸೇನ್ ಎಂದು ಗುರುತಿಸಲಾಗಿದ್ದು, ಆತ ಅಸ್ಸಾಂನಿಂದ ಸಿಮ್ ಕಾರ್ಡ್‌ಗಳನ್ನು ತರಿಸಿ ಸೈಬರ್ ಅಪರಾಧಿಗಳಿಗೆ ಪೂರೈಸುತ್ತಿದ್ದನೆಂದು ತನಿಖೆಯಿಂದ ಬಹಿರಂಗವಾಗಿದೆ.

ಬರಿಯಾರ್‌ಪುರ–ಕಲಾಝರಿಯಾ ರಸ್ತೆಯ ಬಳಿ ನಡೆದ ದಾಳಿಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಆತನ ಬಳಿ ಆಧಾರ್ ಕಾರ್ಡ್ ಮತ್ತು ಇಂಡಿಗೋ ವಿಮಾನ ಟಿಕೆಟ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಹುಸೇನ್ ಸಂಘಟಿತ ಸೈಬರ್ ಅಪರಾಧ ಸಿಂಡಿಕೇಟ್‌ ನ ಸದಸ್ಯನಾಗಿದ್ದು, ನಕಲಿ ಸಿಮ್ ಮತ್ತು ಎಟಿಎಂ ಕಾರ್ಡ್‌ಗಳನ್ನು ಬಳಸಿಕೊಂಡು ವಂಚನೆ ನಡೆಸುತ್ತಿದ್ದ. ಸಿಮ್ ಕಾರ್ಡ್‌ಗಳನ್ನು ಒಂದಕ್ಕೆ 1,500 ರೂಪಾಯಿಯಿಂದ 2,500 ರೂಪಾಯಿ ದರದಲ್ಲಿ ಇತರ ಸೈಬರ್ ಅಪರಾಧಿಗಳಿಗೆ ಮಾರಾಟ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.

ಅಸ್ಸಾಂನಿಂದ ರೈಲಿನ ಮೂಲಕ ತರಲಾಗುತ್ತಿದ್ದ ಸಿಮ್ ಕಾರ್ಡ್‌ಗಳು ಜಮ್ತಾರಾಕ್ಕೆ ತಲುಪಿ, ಅಲ್ಲಿಂದ ಪಶ್ಚಿಮ ಬಂಗಾಳ ಸೇರಿದಂತೆ ಇತರ ರಾಜ್ಯಗಳಿಗೆ ವಿತರಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಅಪರಾಧ ಜಾಲವು ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದಲ್ಲಿಯೂ ಸಕ್ರಿಯವಾಗಿರುವುದು ಬಹಿರಂಗವಾಗಿದೆ.

 ಜಮ್ತಾರಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜ್‌ಕುಮಾರ್ ಮೆಹ್ತಾ ಅವರು ಪ್ರತಿಕ್ರಿಯೆ ನೀಡುತ್ತಾ, “ಈ ಬಂಧನವು ಸೈಬರ್ ಅಪರಾಧಿಗಳ ದೊಡ್ಡ ಜಾಲವನ್ನು ಬಯಲಿಗೆಳೆದಿದೆ. ಇಂತಹ ಅಪರಾಧಗಳನ್ನು ಸಂಪೂರ್ಣವಾಗಿ ನಿರ್ಮೂಲಗೊಳಿಸಲು ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.