ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ:ಅಪರಾಧಿಗೆ 3 ವರ್ಷ ಸಜೆ

ಅಪ್ರಾಪ್ತ ಬಾಲಕಿ ಮೇಲೆ  ಲೈಂಗಿಕ ದೌರ್ಜನ್ಯ:ಅಪರಾಧಿಗೆ 3  ವರ್ಷ  ಸಜೆ

ಮಡಿಕೇರಿ:ಅಪ್ರಾಪ್ತೆ ಬಾಲಕಿ ಮೇಲೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಸಂಬಂಧ ಮಡಿಕೇರಿ ತಾಲೂಕಿನ ಮೂರ್ನಾಡಿನ ಕುಂಬಳದಾಳು ಗ್ರಾಮದ ನಿವಾಸಿ ಡಿ ನಂದಕುಮಾರ್ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಕೊಡಗು, ಮಡಿಕೇರಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಘಟನೆಯ ಹಿನ್ನೆಲೆ :

ದಿನಾಂಕ 13.8.2021.ರಂದು ಅಪ್ರಾಪ್ತ ನೊಂದಬಾಲಕಿಯು ಲೈನ್ ಮನೆಯಲ್ಲಿ ಒಬ್ಬಳೇ ಇದ್ದಾಗ ಆರೋಪಿಯು ನೊಂದಬಾಲಕಿಯ ಮನೆಯ ಹತ್ತಿರ ಹೋಗಿ ನೀರು ಕೇಳಿ ಕುಡಿದು, ಆಕೆಯ ಅಪ್ಪನ ಮೊಬೈಲ್ ನಂಬರ್ ಇದೆಯಾ ಎಂದು ಕೇಳಿದ್ದು, ನೊಂದಬಾಲಕಿಯು ಮನೆಯ ಮುಂದಿನ ಕೋಣೆಯಲ್ಲಿ ತನ್ನ ಮೊಬೈಲ್ ನಲ್ಲಿ ಅಪ್ಪನ ಮೊಬೈಲ್ ನಂಬರ್ ಅನ್ನು ಹುಡುಕುತ್ತಿದ್ದಾಗ ಆರೋಪಿ ನಂದಕುಮಾರ್ ಏಕಾಏಕಿ ಮನೆಯೊಳಗೇ ಅಕ್ರಮ ಪ್ರವೇಶ ಮಾಡಿ ನುಗ್ಗಿ ಆಕೆಯನ್ನು ತಬ್ಬಿ ಹಿಡಿದಿದ್ದು ಆಕೆಯು ಆರೋಪಿಯಿಂದ ತಪ್ಪಿಸಿಕೊಳ್ಳುವಾಗ ಆಕೆಯ ಎರಡು ಕೈಗಳನ್ನು ಗಟ್ಟಿಯಾಗಿ ಹಿಡಿದು ಆಕೆಯ ದೇಹದ ಭಾಗಕ್ಕೆ ಕೈ ಹಾಕಿ ಆಕೆಯ ಮಾನಕ್ಕೆ ಕುಂದು ಉಂಟು ಮಾಡಿದ್ದೂ ಆತನಿಂದ ತಪ್ಪಿಸಿಕೊಂಡು ನೊಂದಬಾಲಕಿ ಬೊಬ್ಬೆ ಹಾಕಿ ಓಡಿಹೋಗುವಾಗ ಬಿದ್ದು ಬಲ ಕೈ ನ ಮೊಣಕೈ ಗೆ ಗಾಯವಾಗಿದೆ ಎಂದು ನೊಂದಬಾಲಕಿಯ ತಂದೆ ನೀಡಿದ ದೂರಿನ ಸಂಬಂಧ ಮಡಿಕೇರಿಯ ಕೊಡಗು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಪ್ರಕರಣದ ತನಿಖೆಯನ್ನು ಕೊಡಗು ಮಹಿಳಾ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೊಲೀಸ್ ಉಪ ನಿರೀಕ್ಷಕರಾದ ಕೆ ಬಿ ಅಚ್ಚಮ್ಮ ಇವರು ನಡೆಸಿ ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಪೋಕ್ಸೋ ಕಾಯ್ದೆ ಅಡಿಯ ಅಪರಾಧಕ್ಕಾಗಿ ದೋಷಾರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಗೌII ಹೊಸಮನಿ ಪುಂಡಲೀಕ ಇವರು ವಿಚಾರಣೆ ಕೈಗೊಂಡು ಆರೋಪ ಸಾಬೀತಾದ ಹಿನ್ನೆಲೆ ಆರೋಪಿಗೆ ಶಿಕ್ಷೆ ವಿಧಿಸಿದ್ದಾರೆ.ಲೈಂಗಿಕ ಕಿರುಕುಳ ಅಪರಾಧಕ್ಕೆ ಭಾರತೀಯ ದಂಡ ಸಂಹಿತೆ ಅಡಿಯಲ್ಲಿ 1 ವರ್ಷ ಸಜೆ, ಪೋಕ್ಸೋ ಕಾಯ್ದೆ ಅಡಿಯಲ್ಲಿ 3 ವರ್ಷ ಸಜೆ ಮತ್ತು Rs.3000/- ದಂಡ, ಹಾಗು ನೊಂದಬಾಲಕಿಗೆ ಒಂದು ಲಕ್ಷ ಪರಿಹಾರ ನೀಡಬೇಕೆಂದು ತೀರ್ಪು ನೀಡಿ ಆದೇಶಿಸಿದ್ದಾರೆ. ಸರಕಾರದ ಪರ ವಿಶೇಷ ಅಭಿಯೋಜಕರಾದ ಬಿಎಸ್ ರುದ್ರ ಪ್ರಸನ್ನ ವಾದ ಮಂಡಿಸಿದ್ದರು.