ವೈದ್ಯಕೀಯ ಕಾಲೇಜಿನ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಹಾವು ಪತ್ತೆ!

ಝಾನ್ಸಿ (ಉತ್ತರ ಪ್ರದೇಶ): ಮಹಾರಾಣಿ ಲಕ್ಷ್ಮಿಬಾಯಿ ವೈದ್ಯಕೀಯ ಕಾಲೇಜಿನ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ (OT) ಹಾವು ಪತ್ತೆಯಾದ ಘಟನೆ ಆಸ್ಪತ್ರೆ ವಲಯದಲ್ಲಿ ಆತಂಕ ಮೂಡಿಸಿದೆ.
ಬುಧವಾರ ಶಸ್ತ್ರಚಿಕಿತ್ಸಾ ಕೇಂದ್ರದ ಉಸ್ತುವಾರಿ ಕನಕ್ ಶ್ರೀವಾಸ್ತವ ಅವರು ಹಾವನ್ನು ಗಮನಿಸಿ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಬಳಿಕ ಸಿಬ್ಬಂದಿ ಸರೀಸೃಪವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟರು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈ ಬೆಳವಣಿಗೆಯ ನಂತರ ಕಾಲೇಜು ಆಡಳಿತವು ಆಸ್ಪತ್ರೆ ಆವರಣದಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಸಿಬ್ಬಂದಿ ಎಚ್ಚರಿಕೆಯಿಂದ ಇರಲು ನಿರ್ದೇಶನ ನೀಡಿದೆ.
“ಮಳೆಗಾಲದಲ್ಲಿ ಸರೀಸೃಪಗಳು ಮತ್ತು ಇತರ ಜೀವಿಗಳು ಆಸ್ಪತ್ರೆ ಆವರಣಕ್ಕೆ ಪ್ರವೇಶಿಸುವ ಅಪಾಯ ಹೆಚ್ಚಾಗುತ್ತದೆ. ಹಾವು ಪತ್ತೆಯಾದ ಬಳಿಕ ಸಿಬ್ಬಂದಿಗೆ ಹೆಚ್ಚುವರಿ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ” ಎಂದು ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ. ಸಚಿನ್ ಮಹೌರ್ ಅವರು ಹೇಳಿದ್ದಾರೆ.
ಈ ವೈದ್ಯಕೀಯ ಕಾಲೇಜು ಹಿಂದೆ ಹಲವು ಬಾರಿ ಅವಘಡಗಳಿಂದ ಸುದ್ದಿಯಲ್ಲಿತ್ತು. ಕಳೆದ ವರ್ಷ ನವೆಂಬರ್ 15ರಂದು ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ 18 ಮಕ್ಕಳು ಸಾವನ್ನಪ್ಪಿದ್ದರು. ಇದೇ ವರ್ಷದ ಆಗಸ್ಟ್ 29ರಂದು ಆಸ್ಪತ್ರೆಯ ವಿದ್ಯುತ್ ಫಲಕದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.