ಮುನ್ನಾರ್ ಪಂಚಾಯತ್‌ ಚುನಾವಣೆಯಲ್ಲಿ ಸೋನಿಯಾ ಗಾಂಧಿಗೆ ಸೋಲು

ಮುನ್ನಾರ್ ಪಂಚಾಯತ್‌ ಚುನಾವಣೆಯಲ್ಲಿ  ಸೋನಿಯಾ ಗಾಂಧಿಗೆ ಸೋಲು

ತಿರುವನಂತಪುರಂ: ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಗಳ ಭಾಗವಾಗಿ ನಡೆದ ಮುನ್ನಾರ್ ಪಂಚಾಯತ್‌ನ 16ನೇ ವಾರ್ಡ್‌ (ನಲ್ಲತನ್ನಿ) ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಸೋನಿಯಾ ಗಾಂಧಿn ಎಲ್‌ಡಿಎಫ್‌ ಅಭ್ಯರ್ಥಿ ಎದುರು ಸೋಲನುಭವಿಸಿದ್ದಾರೆ.

ಗುಡ್ಡಗಾಡು ಪ್ರದೇಶವಾಗಿರುವ ಮುನ್ನಾರ್‌ ನ ನಲ್ಲತನ್ನಿ ವಾರ್ಡ್‌ನಿಂದ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದ ಸೋನಿಯಾ ಗಾಂಧಿ, ತಮ್ಮ ಹೆಸರಿನ ಕಾರಣದಿಂದಲೇ ಚುನಾವಣಾ ಪ್ರಚಾರದ ವೇಳೆ ಗಮನ ಸೆಳೆದಿದ್ದರು. ಆದರೆ ಮತ ಎಣಿಕೆಯ ಅಂತಿಮ ಫಲಿತಾಂಶದಲ್ಲಿ ಎಲ್‌ಡಿಎಫ್‌ ಅಭ್ಯರ್ಥಿ ವಲರಮತಿ ಗೆಲುವು ಸಾಧಿಸಿದರು.

ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ನಾಯಕ ದುರೈರಾಜ್ ಅವರ ಪುತ್ರಿ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ಅಭಿಮಾನಿಯಾಗಿದ್ದ ದುರೈರಾಜ್ ಅವರು ಪುತ್ರಿಗೆ ಅದೇ ಹೆಸರನ್ನು ಇಟ್ಟಿದ್ದರು ಎನ್ನಲಾಗಿದೆ. ನಂತರ ಬಿಜೆಪಿ ಪಂಚಾಯತ್ ಪ್ರಧಾನ ಕಾರ್ಯದರ್ಶಿ ಸುಭಾಷ್ ಅವರನ್ನು ವಿವಾಹವಾದ ಬಳಿಕ ಸೋನಿಯಾ ಗಾಂಧಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

ಮುನ್ನಾರ್ ಪಂಚಾಯತ್‌ನ ಈ ಫಲಿತಾಂಶ ಸ್ಥಳೀಯ ಮಟ್ಟದಲ್ಲಿ ಎಲ್‌ಡಿಎಫ್‌ ಪಕ್ಷದ ಪ್ರಾಬಲ್ಯವನ್ನು ಮತ್ತೊಮ್ಮೆ ದೃಢಪಡಿಸಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗಿದೆ.