ಪ್ರೇಮ ಸಂಬಂಧದ ದಾರುಣ ಅಂತ್ಯ | ಪ್ರಿಯಕರನಿಂದಲೇ ಮಹಿಳೆ ಹತ್ಯೆ : ಪ್ರಿಯಕರನನ್ನು ನೋಡಲು 600 ಕೀ.ಮೀ. ಕಾರಿನಲ್ಲಿ ಪ್ರಯಾಣಿಸಿದ್ದ ಮಹಿಳೆ!

ಪ್ರೇಮ ಸಂಬಂಧದ ದಾರುಣ ಅಂತ್ಯ | ಪ್ರಿಯಕರನಿಂದಲೇ ಮಹಿಳೆ ಹತ್ಯೆ : ಪ್ರಿಯಕರನನ್ನು ನೋಡಲು 600 ಕೀ.ಮೀ. ಕಾರಿನಲ್ಲಿ ಪ್ರಯಾಣಿಸಿದ್ದ ಮಹಿಳೆ!
Photo credit: NDTV

ಬಾರ್ಮರ್ (ರಾಜಸ್ಥಾನ): ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಪ್ರೇಮ ಸಂಬಂಧವು ದಾರುಣ ಅಂತ್ಯ ಕಂಡಿದ್ದು, ಜುನ್ಜುನುವಿನ 37 ವರ್ಷದ ಅಂಗನವಾಡಿ ಮೇಲ್ವಿಚಾರಕಿ ಮುಖೇಶ್ ಕುಮಾರಿ ಅವರನ್ನು ಅವರ ಪ್ರಿಯಕರ, ಬಾರ್ಮರ್‌ನ ಶಾಲಾ ಶಿಕ್ಷಕ ಮನರಾಮ್ ಕೊಲೆಗೈದಿರುವ ಘಟನೆ ಬೆಳಕಿಗೆ ಬಂದಿದೆ.

 ಸುಮಾರು ಹತ್ತು ವರ್ಷಗಳ ಹಿಂದೆ ಪತಿಯಿಂದ ಬೇರ್ಪಟ್ಟಿದ್ದ ಮುಖೇಶ್ ಕುಮಾರಿ, ಕಳೆದ ಅಕ್ಟೋಬರ್‌ನಲ್ಲಿ ಫೇಸ್‌ಬುಕ್ ಮೂಲಕ ಮನರಾಮ್ ಪರಿಚಯಿಸಿಕೊಂಡಿದ್ದರು. ಬಳಿಕ ಇಬ್ಬರ ನಡುವೆ ಸಂಬಂಧ ಬೆಳೆದು ಗಾಢವಾಯಿತು. ಮುಖೇಶ್ ಆಗಾಗ್ಗೆ ತನ್ನ ಆಲ್ಟೋ ಕಾರಿನಲ್ಲಿ ಜುನ್ಜುನುವಿನಿಂದ ಬಾರ್ಮರ್‌ವರೆಗೆ 600 ಕಿಲೋಮೀಟರ್ ದೂರ ಪ್ರಯಾಣ ಮಾಡಿ ಮನರಾಮ್‌ರನ್ನು ಭೇಟಿಯಾಗುತ್ತಿದ್ದರು.

ಮುಖೇಶ್ ವಿಚ್ಛೇದನ ಪಡೆದಿದ್ದರೂ, ಮನರಾಮ್ ಅವರ ವಿಚ್ಛೇದನ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ಬಾಕಿ ಇತ್ತು. ಈ ಕಾರಣದಿಂದ ಮದುವೆಯ ವಿಷಯದಲ್ಲಿ ಉದ್ಭವಿಸಿದ ಒತ್ತಡ ಇಬ್ಬರ ನಡುವೆ ಹೆಚ್ಚಾಗಿ ಜಗಳಕ್ಕೆ ಕಾರಣವಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಸೆಪ್ಟೆಂಬರ್ 10ರಂದು ಮುಖೇಶ್ ಬಾರ್ಮರ್ ಜಿಲ್ಲೆಯ ಮನರಾಮ್ ಅವರ ಗ್ರಾಮಕ್ಕೆ ಕಾರಿನಲ್ಲಿ ತಲುಪಿದರು. ಅಲ್ಲಿನವರ ಸಹಾಯದಿಂದ ಮನೆಗೆ ತೆರಳಿ, ಮನರಾಮ್ ಕುಟುಂಬಕ್ಕೆ ಅವರ ಸಂಬಂಧದ ಬಗ್ಗೆ ವಿವರಿಸಿದರು. ಇದರಿಂದ ಮನರಾಮ್ ಅಸಮಾಧಾನಗೊಂಡಿದ್ದ. ಸ್ಥಳೀಯ ಪೊಲೀಸರೂ ಮನೆಗೆ ಬಂದಿದ್ದರು. ಪೊಲೀಸರು ಇಬ್ಬರಿಗೂ ಸಲಹೆ ನೀಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತೆ ಸೂಚಿಸಿದ್ದರು.

 ಆದರೆ ಸಂಜೆ ಮನರಾಮ್ ಮತ್ತು ಮುಖೇಶ್ ನಡುವೆ ವಾಗ್ವಾದ ತೀವ್ರಗೊಂಡಾಗ, ಮನರಾಮ್ ಕೋಪಗೊಂಡು ಕಬ್ಬಿಣದ ರಾಡ್‌ ನಿಂದ ಮುಖೇಶ್ ಅವರ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ನಂತರ ಶವವನ್ನು ಕಾರಿನ ಡ್ರೈವರ್ ಸೀಟಿನಲ್ಲಿ ಇರಿಸಿ, ಅಪಘಾತವೆಂದು ತೋರಿಸಲು ಕಾರನ್ನು ರಸ್ತೆ ಬದಿಯಿಂದ ಉರುಳಿಸಿದ್ದಾನೆ ಎಂದು ತಿಳಿದು ಬಂದಿದೆ.

ಮರುದಿನ ಬೆಳಿಗ್ಗೆ ಮನರಾಮ್ ತನ್ನ ವಕೀಲರ ಮೂಲಕ ಪೊಲೀಸರಿಗೆ ಘಟನೆಯ ಬಗ್ಗೆ ತಿಳಿಸಿದ್ದಾನೆ. ತನಿಖೆಯ ಸಮಯದಲ್ಲಿ ಮುಕೇಶ್ ಸಾವಿನ ಸಮಯದಲ್ಲಿ ಇಬ್ಬರ ಮೊಬೈಲ್ ಫೋನ್‌ಗಳ ಸ್ಥಳ ಮಾಹಿತಿ ಒಂದೇ ಪ್ರದೇಶದಲ್ಲಿದ್ದವು ಎಂಬುದು ಪತ್ತೆಯಾಯಿತು. ವಿಚಾರಣೆ ವೇಳೆ ಮನರಾಮ್ ತಪ್ಪೊಪ್ಪಿಕೊಂಡಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.

“ಆರೋಪಿ ಮನರಾಮ್ ಮುಖೇಶ್ ಅವರನ್ನು ಕೊಂದು, ಶವವನ್ನು ಕಾರಿನಲ್ಲಿ ಇಟ್ಟಿರುವುದು ದೃಢಪಟ್ಟಿದೆ. ಪ್ರಕರಣವನ್ನು ಎಲ್ಲಾ ಆಯಾಮಗಳಿಂದ ತನಿಖೆ ಮಾಡಲಾಗುತ್ತಿದೆ. ವಿಧಿವಿಜ್ಞಾನ ತಂಡ ಮತ್ತು ಶ್ವಾನ ದಳವನ್ನು ಸ್ಥಳಕ್ಕೆ ಕರೆಸಲಾಗಿದೆ,” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನರೇಂದ್ರ ಸಿಂಗ್ ಹೇಳಿದ್ದಾರೆ.