ಏಕವಚನ ಬಳಕೆ, ಸಿಎಂ ನಡೆಗೆ ಕೊಡಗು ಬಿಜೆಪಿ ಮಹಿಳಾ ಮೋರ್ಚಾ ಆಕ್ಷೇಪ

ಏಕವಚನ ಬಳಕೆ, ಸಿಎಂ ನಡೆಗೆ ಕೊಡಗು ಬಿಜೆಪಿ ಮಹಿಳಾ ಮೋರ್ಚಾ ಆಕ್ಷೇಪ
ಅನಿತಾ ಪೂವಯ್ಯ

ಮಡಿಕೇರಿ : ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರ ಕುರಿತು ಏಕವಚನ ಪ್ರಯೋಗ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆ ಖಂಡನೀಯವೆಂದು ಕೊಡಗು ಜಿಲ್ಲಾ ಬಿಜೆಪಿಯ ಮಹಿಳಾ ಮೋರ್ಚಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಪತ್ರಿಕಾ ಪ್ರಕಟಣೆ ನೀಡಿರುವ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಅನಿತಾ ಪೂವಯ್ಯ ಅವರು ಮುಖ್ಯಮಂತ್ರಿಗಳು ಕೇಂದ್ರದ ಮಹಿಳಾ ಸಚಿವರ ಕುರಿತು ಏಕವಚನ ಬಳಕೆ ಮಾಡುವ ಮೂಲಕ ಸಚಿವ ಸ್ಥಾನಕ್ಕೆ ಮತ್ತು ಸಚಿವರ ಹಿರಿತನಕ್ಕೆ ಅಗೌರವ ತೋರಿದ್ದಾರೆ.

ಮಹಿಳೆಯರನ್ನು ದೇವತೆಗಳೆಂದು ಪರಿಗಣಿಸಿ ಗೌರವಿಸುವ ಈ ನಾಡಿನಲ್ಲಿ ಮುಖ್ಯಮಂತ್ರಿಯೊಬ್ಬರು ತಮ್ಮ ಘನತೆಗೆ ಮತ್ತು ನಾಡಿನ ಸಂಸ್ಕೃತಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ. ತಾವು ಅಧಿಕಾರದಲ್ಲಿದ್ದ ಅವಧಿಯಲ್ಲೆಲ್ಲ ಹಲವು ಬಾರಿ ಏಕವಚನ ಪ್ರಯೋಗಿಸಿ ಹಿರಿಯರು ಹಾಗೂ ಮಹಿಳೆಯರಿಗೆ ಮುಜುಗರ ಉಂಟು ಮಾಡಿದ್ದಾರೆ.

ಇವರ ನಡೆಯ ಕುರಿತು ಆಕ್ಷೇಪಗಳು ವ್ಯಕ್ತವಾದರೂ ತಪ್ಪನ್ನು ತಿದ್ದಿಕೊಳ್ಳುವ ಬದಲು ‘ನಾನು ಗ್ರಾಮೀಣ ಸೊಗಡಿನವನು’ ಎಂದು ಸಮರ್ಥಿಸಿಕೊಳ್ಳುತ್ತಲೇ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿಗಳು ಗ್ರಾಮೀಣ ಸೊಗಡಿನವರೇ ಆಗಿದ್ದರೆ ತಮ್ಮ ಪಕ್ಷದ ಅಧಿನಾಯಕ ಹಾಗೂ ನಾಯಕಿಯ ಕುರಿತು ಕೂಡ ಏಕವಚನ ಬಳಸಲಿ ಎಂದು ಅನಿತಾ ಪೂವಯ್ಯ ಸವಾಲು ಹಾಕಿದ್ದಾರೆ.

ಇನ್ನು ಮುಂದಾದರೂ ಮಹಿಳೆಯರಿಗೆ ಮತ್ತು ಅವರು ಹೊಂದಿರುವ ಹುದ್ದೆಗೆ ಗೌರವ ನೀಡುವ ಮೂಲಕ ಮುಖ್ಯಮಂತ್ರಿಗಳು ತಮ್ಮ ಘನತೆಯನ್ನು ಉಳಿಸಿಕೊಳ್ಳಲಿ. ಇದೇ ವರ್ತನೆ ಮುಂದುವರೆದಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.