ಉತ್ತರ ಪ್ರದೇಶ: ರಾಂಗ್ ನಂಬರ್‌ನಿಂದ ಪ್ರಾರಂಭವಾದ ಪ್ರೇಮ ಕೊಲೆಯಲ್ಲಿ ಅಂತ್ಯ
ಹರ್ದೋಯಿ (ಲಕ್ನೋ) : ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯಲ್ಲಿ ರಾಂಗ್ ನಂಬರ್‌ನಿಂದ ಪ್ರಾರಂಭವಾದ ಪ್ರೇಮಸಂಬಂಧವು ಕೊಲೆಯಲ್ಲಿ ಅಂತ್ಯಗೊಂಡಿರುವ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ.
30 ವರ್ಷದ ವಿವಾಹಿತ ಮಹಿಳೆ ಸೋನಮ್ ಅವರ ಹತ್ಯೆ ಪ್ರಕರಣದಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಪ್ರಮುಖ ಆರೋಪಿ ಪರಾರಿಯಾಗಿದ್ದಾನೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, 2023ರ ಫೆಬ್ರವರಿಯಲ್ಲಿ ಸೋನಮ್ ಅವರು ರಾಂಗ್ ನಂಬರ್‌ಗೆ ಕರೆ ಮಾಡಿದಾಗ, ಅದಕ್ಕೆ ಮಸೀದುಲ್ ಎಂಬಾತ ಪ್ರತಿಕ್ರಿಯಿಸಿದ್ದ. ಈ ಸಂಭಾಷಣೆ ಇಬ್ಬರ ನಡುವೆ ಪರಿಚಯಕ್ಕೆ ನಾಂದಿಯಾಯಿತು. ಬಳಿಕ ಇಬ್ಬರೂ ನಿಯಮಿತವಾಗಿ ಮಾತನಾಡುತ್ತಾ ಹತ್ತಿರವಾದರು. ವಿವಾಹಿತರಾಗಿದ್ದರೂ ಅವರ ಸ್ನೇಹ ಕ್ರಮೇಣ ರಹಸ್ಯ ಪ್ರೇಮಸಂಬಂಧವಾಗಿ ಬೆಳೆಯಿತು.
ಮಸೀದುಲ್ ಹರ್ದೋಯಿ ಮೂಲದವರಾಗಿದ್ದು, ಸೋನಮ್ ಅವರ ಪತಿ ಉದ್ಯೋಗದ ನಿಮಿತ್ತ ಉತ್ತರ ಪ್ರದೇಶದ ಹೊರವಲಯದಲ್ಲಿ ವಾಸಿಸುತ್ತಿದ್ದರು. 2023ರ ಆಗಸ್ಟ್ 6ರಂದು ಸೋನಮ್ ಕಾಣೆಯಾಗಿದ್ದು, ಆಕೆಯ ಮಾವ ಅಪಹರಣ ಪ್ರಕರಣ ದಾಖಲಿಸಿದ್ದರು. ಪ್ರಾಥಮಿಕ ತನಿಖೆಯಲ್ಲಿ ಯಾವುದೇ ಸುಳಿವು ದೊರಕದೆ ಪ್ರಕರಣ ಹಾಗೇ ಉಳಿದಿತ್ತು.
ಈ ವರ್ಷದ ಜೂನ್‌ನಲ್ಲಿ ಪೂರ್ವ ಎಸಿಪಿ ನೃಪೇಂದ್ರ ಅವರ ನಿರ್ದೇಶನದ ಮೇರೆಗೆ ಸ್ಥಳೀಯ ವೃತ್ತಾಧಿಕಾರಿ ಸಂತೋಷ್ ಸಿಂಗ್ ಅವರು ಪ್ರಕರಣದ ಮರು ತನಿಖೆ ಕೈಗೊಂಡರು. ಅವರು ಸುಮಾರು 3,000 ಕರೆ ದಾಖಲೆಗಳನ್ನು ಪರಿಶೀಲಿಸಿ, ಸೋನಮ್ ಸಂಪರ್ಕಿಸಿದ ಒಂದು ಅಪರಿಚಿತ ಸಂಖ್ಯೆಯನ್ನು ಪತ್ತೆ ಹಚ್ಚಿದರು. ಆ ಸಂಖ್ಯೆಯ ಹಾದಿ ಹಿಡಿದ ಪೊಲೀಸರು ತನಿಖೆ ನಡೆಸಿ, ಅದು ಆರಂಭದಲ್ಲಿ ಮಸೀದುಲ್ ಬಳಕೆ ಮಾಡುತ್ತಿದ್ದ ಸಂಖ್ಯೆಯೇ ಎಂದು ದೃಢಪಡಿಸಿದರು.
ಕಾಣೆಯಾದ ನಂತರ ಸೋನಮ್ ದೆಹಲಿಗೆ ತೆರಳಿ ಬಳಿಕ ಮಸೀದುಲ್ ನಿವಾಸದಲ್ಲಿ ವಾಸಿಸುತ್ತಿದ್ದರು. 2023ರ ಆಗಸ್ಟ್ 8ರಂದು ಇಬ್ಬರ ನಡುವೆ ಉಂಟಾದ ವೈಮನಸ್ಯದ ಹಿನ್ನೆಲೆ, ಮಸೀದುಲ್ ತನ್ನ ಸಹೋದರ ಶಂಶೀದುಲ್ ಹಾಗೂ ತಂದೆ ಅಯೂಬ್ ಅವರ ಸಹಾಯದಿಂದ ಸೋನಮ್ ಅವರನ್ನು ಕೊಲೆಮಾಡಿ ಮೃತದೇಹವನ್ನು ಬಾವಿಗೆ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಪೊಲೀಸರು ಬಾವಿಯಿಂದ ಅಸ್ಥಿಪಂಜರವನ್ನು ವಶಪಡಿಸಿಕೊಂಡು ಪ್ರಕರಣವನ್ನು ಬಹಿರಂಗಪಡಿಸಿದರು. ಶಂಶೀದುಲ್ ಹಾಗೂ ಅಯೂಬ್ ಬಂಧಿತರಾಗಿದ್ದು, ಮಸೀದುಲ್ ಪರಾರಿಯಾಗಿದ್ದಾನೆ. ಆರೋಪಿಯನ್ನು ಪತ್ತೆಹಚ್ಚಲು ಶೋಧ ಕಾರ್ಯ ತೀವ್ರಗೊಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.