ವಿರಾಜಪೇಟೆ:ಎರಡು ಪ್ರತ್ಯೇಕ ಕೊಲೆ ಪ್ರಕರಣ,ಇಬ್ಬರಿಗೆ ಜೀವಾವಧಿ ಶಿಕ್ಷೆ
ವಿರಾಜಪೇಟೆ:ನಿಟ್ಟೂರು ಹಾಗೂ ಬೇತ್ರಿ ಸಮೀಪದ ನಾಲ್ಕೇರಿಯಲ್ಲಿ ನಡೆದಿದ್ದ ಪ್ರತ್ಯೇಕ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟ ಮಾಡಿದೆ.
ತಾ. 14.06.2022ರಲ್ಲಿ ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ನಿಟ್ಟೂರು ಗ್ರಾಮದಲ್ಲಿ ತನ್ನ ಪತ್ನಿ ಮುತ್ತಕ್ಕಿಯನ್ನು ಕತ್ತಿಯಿಂದ ಕಡಿದು ಹತ್ಯೆಗೈದಿದ್ದ ಜೇನು ಕುರುಬರ ರಾಜು ಎಂಬಾತನಿಗೆ ವೀರಾಜಪೇಟೆಯ 2ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ನ್ಯಾಯಾಧೀಶರಾದ ಎಸ್. ನಟರಾಜು ವಾದ ಪ್ರತಿವಾದ ಆಲಿಸಿ ಆರೋಪಿ ಜೇನುಕುರುಬರ ರಾಜು ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆ ಬಿಎನ್‌ಎಸ್ ಕಲಂ 302, ಅಡಿಯಲ್ಲಿ ಅಪರಾಧಕ್ಕೆ ಕಠಿಣ ಜೀವಾವಧಿ ಶಿಕ್ಷೆ ಮತ್ತು ರೂ. 25,೦೦೦ ದಂಡ ವಿಧಿಸಿದ್ದು, ದಂಡ ಕಟ್ಟಲು ತಪ್ಪಿದಲ್ಲಿ 6ತಿಂಗಳ ಸಾದಾ ಶಿಕ್ಷೆ ಅನುಭವಿಸುವಂತೆ ತೀರ್ಪು ನೀಡಿದ್ದಾರೆ. ಅಂದಿನ ವೃತ್ತನಿರೀಕ್ಷಕ ಎಂ.ವಿ. ಗೋವಿಂದರಾಜು ಅವರು ಪ್ರಕರಣದ ತನಿಖೆ ಮಾಡಿ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
28.04.2022 ರಂದು ವೀರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬೇತ್ರಿ ಸಮೀಪದ ನಾಲ್ಕೇರಿ ಗ್ರಾಮದ ತೋಟವೊಂದರ ಲೈನ್‌ಮನೆಯಲ್ಲಿ ವಾಸವಿದ್ದ ಚೋಮಚ್ಚೀರ ಲವ (ಮುತ್ತಣ್ಣ) ತನ್ನ ಪತ್ನಿ ಸುಮಿತ್ರಳನ್ನು ಪೈಪ್‌ನಿಂದ ಹಲ್ಲೆಗೈದು ಕೊಲೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಈ ಕುರಿತು ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ವೀರಾಜಪೇಟೆಯ ಅಂದಿನ ಡಿವೈಎಸ್‌ಪಿ ನಿರಂಜನ್ ರಾಜ್ ಅರಸ್ ಆರೋಪಿ ವಿರುದ್ಧ ಐಪಿಸಿ ೩೦೨, ಎಸ್.ಸಿ., ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಅಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ನಟರಾಜು ಅವರು ಕೊಲೆ ಅಪರಾಧಕ್ಕೆ ಜೀವಾವಧಿ ಶಿಕ್ಷೆ, ರೂ 25ಸಾವಿರ ರೂ. ದಂಡ, ಪಾವತಿಸುವುದು ತಪ್ಪಿದಲ್ಲಿ 6 ತಿಂಗಳ ಸಾದಾ ಶಿಕ್ಷೆ ನೀಡಿ ತೀರ್ಪು ನೀಡಿದ್ದಾರೆ. ಇವೆಲ್ಲ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಯಾಸಿನ್ ಅಹಮದ್ ವಾದ ಮಂಡಿಸಿದರು.
