ವಿರಾಜಪೇಟೆ: ಮಳಿಗೆಗಳ ಮುಚ್ಚುವಿಕೆ ಸಮಯ ವಿಸ್ತರಿಸಬೇಕೆಂದು ನಗರ ವರ್ತಕರ ಸಂಘದಿಂದ ಮನವಿ
ವಿರಾಜಪೇಟೆ:ವಿರಾಜಪೇಟೆಯಲ್ಲಿ ಹಬ್ಬ ಹರಿದಿನಗಳ ಸಂದರ್ಭದಲ್ಲಿ ರಾತ್ರಿ ವೇಳೆ ಅಂಗಡಿ ಮುಂಗಟ್ಟುಗಳು, ವ್ಯಾಪಾರ ಮಳಿಗೆಗಳನ್ನು ಶೀಘ್ರವಾಗಿ ಮುಚ್ಚುವುದರಿಂದ ಸಾರ್ವಜನಿಕರಿಗೆ ಹಾಗೂ ವ್ಯಾಪಾರಸ್ಥರಿಗೆ ಸಮಸ್ಯೆ ಉಂಟಾಗುತ್ತಿರುವುದರಿಂದ, ವರ್ತಕರುಗಳ ಹಿತದೃಷ್ಟಿಯಿಂದ ಕಾಲಾವಧಿಯನ್ನು ವಿಸ್ತರಿಸಿಕೊಡಬೇಕೆಂದು ವಿರಾಜಪೇಟೆ ನಗರ ವರ್ತಕರ ಸಂಘದ ವತಿಯಿಂದ ಸಂಘದ ಅಧ್ಯಕ್ಷ ಪಿ.ಎ. ಮಂಜುನಾಥ್ ಅವರ ನೇತೃತ್ವದಲ್ಲಿ ವಿರಾಜಪೇಟೆಯ ಡಿವೈಎಸ್‌ಪಿ ಮಹೇಶ್ ಕುಮಾರ್ ಹಾಗೂ ನಗರ ಠಾಣಾಧಿಕಾರಿ ಹೆಚ್.ಎಸ್. ಪ್ರಮೋದ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಮಾತನಾಡಿದ ಅಧ್ಯಕ್ಷ ಪಿ.ಎ. ಮಂಜುನಾಥ್ ಅವರು, ರಾತ್ರಿ ವೇಳೆ ಸಾಮಾನು ಸಗಟುಗಳನ್ನು ಲಾರಿ ಅಥವಾ ಇನ್ನಿತರ ವಾಹನಗಳಲ್ಲಿ ತಂದು ಇಳಿಸಿ ಅದರ ನಿರ್ವಹಣೆ ಮಾಡುವ ಸಂದರ್ಭ ಕಾಲಾವಕಾಶ ಹೆಚ್ಚು ಬೇಕಾಗುತ್ತದೆ. ಅಲ್ಲದೆ ದೋರದಿಂದ ಬಂದವರಿಗೆ ಎನಾದರೂ ವಸ್ತುಗಳನ್ನು ತೆಗೆದುಕೊಳ್ಳಬೇಕೆಂದರೂ ಅಂಗಡಿಗಳು ಇರುವುದಿಲ್ಲ. ಅಲ್ಲದೆ ಕನಿಷ್ಟ ಕಾಫಿಯಾದರೂ ಕುಡಿಬೇಕೆಂದರೆ ಅದಕ್ಕೂ ಇಲ್ಲಿ ಅವಕಾಶ ಇಲ್ಲ. ಎಲ್ಲವೂ ಮುಚ್ಚಿರುತ್ತದೆ. ಇದರಿಂದ ಸಾರ್ವಜನಿಕರಿಗೂ ಸಮಸ್ಯೆ, ವ್ಯಾಪಾರಸ್ಥರಿಗೂ ನಷ್ಟವಾಗುತ್ತದೆ ಎಂದರು.
ಈ ಸಮಸ್ಯೆ ಕುರಿತು ವರ್ತಕರ ನಿರಂತರ ಬೇಡಿಕೆಯಂತೆ ಪೋಲಿಸ್ ಇಲಾಖೆಗೆ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಮಳಿಗೆಗಳನ್ನು ಮುಚ್ಚುವ ಸಮಯಾವಧಿಯನ್ನು ವಿಸ್ತರಿಸಿ ಕೊಡುವಂತೆ ವಿರಾಜಪೇಟೆಯ ವರ್ತಕರ ಸಂಘದ ವತಿಯಿಂದ ವಿರಾಜಪೇಟೆಯ ವೃತ್ತ ನಿರೀಕ್ಷಕರಿಗೆ ಮನವಿ ಮಾಡುತ್ತಿದ್ದೇವೆ ಎಂದರಲ್ಲದೆ ಕೆಲ ಸಾರ್ವಜನಿಕರು ರಾತ್ರಿ ಹೊತ್ತು ಮಧ್ಯಪಾನ ಮಾಡಿ ವರ್ತಕರಿಗೆ ತೊಂದರೆ ನೀಡುವಾಗ ತುರ್ತಾಗಿ ಆಗಮಿಸಿ, ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು.
ಈ ವಿಚಾರಗಳನ್ನು ಮನಗಂಡು ದಯವಿಟ್ಟು ಹಬ್ಬ ಹರಿದಿನಗಳ ಸಮಯದಲ್ಲಿ ಮಳಿಗೆಗಳನ್ನು ಮುಚ್ಚುವ ಸಮಯಾವಧಿಯನ್ನು ವಿಸ್ತರಿಸಿ ಕೊಡಬೇಕು ಹಾಗೂ ಸಾರ್ವಜನಿಕರಿಗೆ ಸಾಮಾನು, ಸಗಟುಗಳನ್ನು ತುಂಬಲು ನಾಲ್ಕು ಚಕ್ರ ವಾಹನಗಳ ನಿಲುಗಡೆಗೆ ಸ್ಥಳದಲ್ಲಿ ಕೆಲ ನಿಮಿಷ ಆಟೋವನ್ನು ನಿಲ್ಲಿಸಲು ಅನುವು ಮಾಡಿಕೊಟ್ಟು ಸಹಕರಿಸಬೇಕೆಂದು ಮನವಿ ಮಾಡಿದರು.
ಸಂಘದ ನಿರ್ದೇಶಕ ಕೆ.ಎಚ್ ಮೊಹಮ್ಮದ್ ರಾಫಿ ಮಾತನಾಡಿ, ಪುರಸಭೆ ವ್ಯಾಪ್ತಿಯ ಅಂಗಡಿ ಮಳಿಗೆಗಳ ಮುಚ್ಚುವಿಕೆಗೆ ಈಗಾಗಲೇ ಸಮಯವನ್ನು ನಿಗದಿ ಪಡಿಸಿರುತ್ತೀರಿ, ಆದರೆ ಹಬ್ಬ ಹರಿದಿನಗಳ ಸಮಯದಲ್ಲಿ ವ್ಯಾಪಾರ ವಹಿವಾಟು ನಡೆಸಲು ಹೆಚ್ಚುವರಿ ಸಮಯಾವಧಿಯು ಅವಶ್ಯಕವಾಗಿದೆ.
ಎಂದಿನಂತೆ ನಿಗದಿತ ಸಮಯದಲ್ಲಿ ಮಳಿಗೆಗಳನ್ನು ಮುಚ್ಚುವುದರಿಂದ ಸಾರ್ವಜನಿಕರಿಗೂ ತೊಂದರೆಯಾಗುತ್ತಿರುವುದಾಗಿದೆ ಅಲ್ಲದೆ ಸಾಮಾನು ಸಗಟುಗಳನ್ನು ಖರೀದಿಸಿ ಸ್ವಂತ ವಾಹನವಿಲ್ಲದೆ ಇರುವವರು ಬಾಡಿಗೆ ಆಟೋದಲ್ಲಿ ಸಾಗಿಸುವುದು ಅನಿವಾರ್ಯವಾಗುತ್ತದೆ. ಸ್ಥಳದಲ್ಲಿ ನಿಲ್ಲಿಸಿ ಸಗಟುಗಳನ್ನು ತುಂಬಲು ಅನುವು ಮಾಡಿಕೊಟ್ಟಲ್ಲಿ ಬಡಬಗ್ಗರಿಗೆ ತುಂಬಾ ಉಪಕಾರವಾಗುತ್ತದೆ ಎಂದರು.
ಮನವಿ ಸ್ವೀಕರಿಸಿ ಮಾತನಾಡಿದ ಡಿವೈಎಸ್‌ಪಿ ಮಹೇಶ್ ಕುಮಾರ್ ಅವರು, ಸಮಯ ಸಂದರ್ಭ ನೋಡಿಕೊಂಡು ಸೂಕ್ತ ರೀತಿಯಲ್ಲಿ ಸ್ಪಂದಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭ ಸಂಘದ ನಿರ್ದೇಶಕರುಗಳಾದ ಸುರೇಶ್ ಆರ್, ರಾಜೇಶ್ ಆರ್ ಶೇಟ್, ಶಶಿ ಕೆ.ಆರ್, ಹಾಗೂ ಎಂ.ಎಸ್ ಮೊಹಮ್ಮದ್ ಹನೀಫ್ ಉಪಸ್ಥಿತರಿದ್ದರು.
