ಮೊಬೈಲ್ ಗೆ ಬಂದ APK ಲಿಂಕ್ ಓಪನ್ ಮಾಡಿ ಹತ್ತು ಲಕ್ಷ ರೂ ಕಳೆದುಕೊಂಡ ಮಹಿಳೆ

ಚಿಕ್ಕಮಗಳೂರು: ಮಹಿಳೆಯೊಬ್ಬರು ಮೊಬೈಲ್‌ಗೆ ಬಂದ ಲಿಂಕ್ ವೊಂದನ್ನು ಕ್ಲಿಕ್ ಮಾಡಿ ಅದನ್ನು ಇನ್‌ಸ್ಟಾಲ್ ಮಾಡಿಕೊಂಡ ಪರಿಣಾಮ ಎರಡು ಬ್ಯಾಂಕ್ ಖಾತೆಯಲ್ಲಿದ್ದ ಸುಮಾರು 10ಲಕ್ಷಕ್ಕೂ ಹೆಚ್ಚು ಹಣವನ್ನು ಕಳೆದುಕೊಂಡ ಘಟನೆ ಚಿಕ್ಕಮಗಳೂರು ನಗರದಲ್ಲಿ ವರದಿಯಾಗಿದ್ದು, ಈ ಸಂಬಂಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
. ಚಿಕ್ಕಮಗಳೂರು ನಗರದ ಮಹಿಳೆಯೊಬ್ಬರ ಮೊಬೈಲ್‌ಗೆ ಸೈಬರ್ ಅಪರಾಧಿಗಳು ಅನುಮಾನಾಸ್ಪದ ಎಪಿಕೆ ಫೈಲ್ ವೊಂದನ್ನು ಕಳುಹಿಸಿದ್ದರು. ಮಹಿಳೆ ಅದನ್ನು ತಮ್ಮ ಮೊಬೈಲ್‌ಗೆ ಇನ್‌ಸ್ಟಾಲ್ ಮಾಡಿಕೊಂಡಿದ್ದರು. ನಂತರ ಮಹಿಳೆ ಹೊಂದಿದ್ದ ಎರಡು ಬ್ಯಾಂಕ್ ಖಾತೆಗಳಿಂದ 10,65,899 ರೂ. ಗಮನಕ್ಕೆ ಬಾರದಂತೆ ಕಡಿತಗೊಂಡಿದೆ. ಮಹಿಳೆ ತಮ್ಮ ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ಚೆಕ್ ಮಾಡಿದಾಗ ಹಣ ಕಡಿತಗೊಂಡಿರುವುದು ಗೊತ್ತಾಗಿದೆ ಎನ್ನಲಾಗಿದೆ. ಈ ಸಂಬಂಧ ಬ್ಯಾಂಕ್‌ನವರ ಬಳಿ ವಿಚಾರಿಸಿದಾಗ ಪೇಟಿಎಂ ಆ್ಯಪ್ ಮೂಲಕ ಯಾವುದೇ ಗೇಮಿಂಗ್ ಆ್ಯಪ್ ಗಳಿಗೆ ಹಣ ಕಡಿತವಾಗಿರುವ ಬಗ್ಗೆ ಬ್ಯಾಂಕ್‌ನವರು ಮಾಹಿತಿ ನೀಡಿದ್ದಾರೆ, ಆದರೆ ಮಹಿಳೆ ಪೇಟಿಎಂ ಆ್ಯಪ್ ಆಗಲಿ, ಗೇಮಿಂಗ್ ಆ್ಯಪ್ ಆಗಲಿ ಇನ್‌ಸ್ಟಾಲ್ ಮಾಡಿಕೊಂಡಿರಲಿಲ್ಲ, ಆದರೆ ಸೈಬರ್ ಅಪರಾಧಿಗಳು ಎಪಿಕೆ ಫೈಲ್ ಅನ್ನು ಮಹಿಳೆಯ ಮೊಬೈಲ್‌ಗೆ ಕಳುಹಿಸಿದ್ದು, ಅದನ್ನು ಮಹಿಳೆ ಇನ್‌ಸ್ಟಾಲ್ ಮಾಡಿಕೊಂಡ ಪರಿಣಾಮ ಈ ಆ್ಯಪ್ ಮೂಲಕ ಸೈಬರ್ ವಂಚಕರು ಮಹಿಳೆಯ ಬ್ಯಾಂಕ್ ಖಾತೆಗಳ ಆಕ್ಸೆಸ್ ಪಡೆದು ಪೇಟಿಎಂ ಆ್ಯಪ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಕೊಂಡು ಹಣವನ್ನು ವಂಚಿಸಿರುವುದು ಬೆಳಕಿಗೆ ಬಂದಿದೆ.