ನವಜಾತ ಶಿಶುವನ್ನು ಫ್ರಿಡ್ಜ್‌ನಲ್ಲಿ ಇಟ್ಟ ಮಹಿಳೆ! ಪ್ರಸವಾನಂತರದ ಮನೋರೋಗ ಎಂದ ಮನೋವೈದ್ಯರು

ಮೊರಾದಾಬಾದ್: ಉತ್ತರ ಪ್ರದೇಶದ ಮೊರಾದಾಬಾದ್‌ನ ಕರುಲಾ ಪ್ರದೇಶದಲ್ಲಿ ನಡೆದ ವಿಚಿತ್ರ ಹಾಗೂ ಆತಂಕಕಾರಿ ಘಟನೆ ಜನರನ್ನು ಬೆಚ್ಚಿಬೀಳಿಸಿದೆ. ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ 23 ವರ್ಷದ ಬಾಣಂತಿ ತನ್ನ 15 ದಿನದ ಶಿಶುವನ್ನು ಫ್ರಿಡ್ಜ್‌ನಲ್ಲಿ ಇಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಕಳೆದ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಶಿಶುವಿನ ಅಳುವ ಶಬ್ದವನ್ನು ಕೇಳಿದ ಅಜ್ಜಿ ತಕ್ಷಣ ಅಡುಗೆಮನೆಗೆ ಧಾವಿಸಿ, ಫ್ರಿಡ್ಜ್ ಒಳಗಿದ್ದ ಮಗುವನ್ನು ಪತ್ತೆಹಚ್ಚಿ ರಕ್ಷಿಸಿದರು. ತಕ್ಷಣವೇ ವೈದ್ಯರ ಬಳಿಗೆ ಮಗುವನ್ನು ಕರೆದೊಯ್ಯಲಾಗಿದ್ದು, ಶಿಶುವಿನ ಆರೋಗ್ಯ ಸ್ಥಿರವಾಗಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ಮಹಿಳೆಯ ಗುರುತನ್ನು ವೈದ್ಯರು ಬಹಿರಂಗಪಡಿಸಿಲ್ಲ.
ಆರಂಭದಲ್ಲಿ ಕುಟುಂಬವು ಆಕೆ ದುಷ್ಟ ಶಕ್ತಿಗಳ ಪ್ರಭಾವಕ್ಕೆ ಒಳಗಾಗಿದ್ದಾಳೆಂದು ನಂಬಿ ಸಾಂಪ್ರದಾಯಿಕ ವಿಧಿ-ವಿಧಾನಗಳನ್ನು ಮಾಡಿತು. ಆದರೆ ಸ್ಥಿತಿ ಸುಧಾರಿಸದ ಹಿನ್ನೆಲೆಯಲ್ಲಿ ಅರ್ಚನಾ ರಾಜ್ ಮನೋವೈದ್ಯಶಾಸ್ತ್ರ ಮತ್ತು ಆರೈಕೆ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಮನೋವೈದ್ಯ ಡಾ. ಕಾರ್ತಿಕೇಯ ಗುಪ್ತಾ ಅವರು ಮಹಿಳೆಗೆ ಪ್ರಸವಾನಂತರದ ಮನೋರೋಗ (Postpartum Psychosis) ಇದೆ ಎಂದು ದೃಢಪಡಿಸಿದರು. ಪ್ರಸ್ತುತ ಬಾಣಂತಿ ಮಹಿಳೆಯು ಸಮಾಲೋಚನೆ ಹಾಗೂ ತಜ್ಞರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಮನೋವೈದ್ಯರ ಪ್ರಕಾರ, ಪ್ರಸವಾನಂತರದ ಮನೋರೋಗವು ಹೆರಿಗೆಯ ನಂತರ ಕಂಡುಬರುವ ಅಪರೂಪದ ಹಾಗೂ ಗಂಭೀರ ಮಾನಸಿಕ ಸ್ಥಿತಿ. ಇದರಲ್ಲಿ ಭ್ರಮೆ, ಗೊಂದಲ ಹಾಗೂ ಅಸಹಜ ವರ್ತನೆ ಕಾಣಿಸಿಕೊಳ್ಳುವುದು ಸಾಮಾನ್ಯ. ಡಾ. ಮೇಘನಾ ಗುಪ್ತಾ ಅವರು ಹೇಳುವಂತೆ, “ಹೆರಿಗೆಯ ನಂತರ ಮಹಿಳೆಯರಿಗೆ ಸಮರ್ಪಕ ಭಾವನಾತ್ಮಕ ಬೆಂಬಲದ ಕೊರತೆ ಇದ್ದರೆ, ಖಿನ್ನತೆ ಹಾಗೂ ಮನೋರೋಗದ ಸಮಸ್ಯೆಗಳು ಎದುರಾಗಬಹುದು. ಇಂತಹ ಸಂದರ್ಭಗಳಲ್ಲಿ ಮೂಢನಂಬಿಕೆಗಳನ್ನು ಅವಲಂಬಿಸದೆ ತಕ್ಷಣ ತಜ್ಞ ವೈದ್ಯರ ಸಲಹೆ ಪಡೆಯುವುದು ಅಗತ್ಯ” ಎಂದು ಅವರು ಸಲಹೆ ನೀಡಿದ್ದಾರೆ.