ಯುವ ಜನರು ದುಶ್ಚಟಗಳಿಗೆ ತುತ್ತಾಗದೆ, ಉತ್ತಮ ಭವಿಷ್ಯ ರೂಪಿಸಿಕೊಳ್ಳುವತ್ತ ಗಮನಹರಿಸಿ: ಉಪ ಪೊಲೀಸ್ ವರಿಷ್ಠಾಧಿಕಾರಿ ಪಿ.ಎ.ಸೂರಜ್

ಯುವ ಜನರು ದುಶ್ಚಟಗಳಿಗೆ ತುತ್ತಾಗದೆ, ಉತ್ತಮ ಭವಿಷ್ಯ ರೂಪಿಸಿಕೊಳ್ಳುವತ್ತ ಗಮನಹರಿಸಿ: ಉಪ ಪೊಲೀಸ್ ವರಿಷ್ಠಾಧಿಕಾರಿ ಪಿ.ಎ.ಸೂರಜ್

ಮಡಿಕೇರಿ:ಯುವ ಜನರು ದುಶ್ಚಟಗಳಿಗೆ ತುತ್ತಾಗದೆ, ಉತ್ತಮ ಭವಿಷ್ಯ ರೂಪಿಸಿಕೊಳ್ಳುವತ್ತ ಗಮನಹರಿಸಬೇಕು ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಪಿ.ಎ.ಸೂರಜ್ ಅವರು ಕರೆ ನೀಡಿದ್ದಾರೆ. ರಾಜ್ಯ ಮದ್ಯಪಾನ ಸಂಯಮ ಮಂಡಳಿ ವತಿಯಿಂದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ, ಶಾಲಾ ಶಿಕ್ಷಣ, ಪದವಿ ಪೂರ್ವ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಸಹಕಾರದಲ್ಲಿ ನಗರದ ಸರ್ಕಾರಿ ಜೂನಿಯರ್ ಕಾಲೇಜು ಸಭಾಂಗಣದಲ್ಲಿ ಡಾ.ಮಹಾಂತ ಶಿವಯೋಗಿ ಅವರ ಜನ್ಮ ದಿನದ ಪ್ರಯುಕ್ತ ಶುಕ್ರವಾರ ನಡೆದ ‘ವ್ಯಸನ ಮುಕ್ತ ದಿನಾಚರಣೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

 ಯುವಜನರು ಮದ್ಯ ಹಾಗೂ ಮಾದಕ ವಸ್ತುಗಳಿಗೆ ದಾಸರಾದಲ್ಲಿ ಭವಿಷ್ಯವನ್ನು ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಮದ್ಯ ಹಾಗೂ ಮಾದಕ ವಸ್ತುಗಳ ಬಗ್ಗೆ ಯೋಚಿಸಲೇ ಬಾರದು ಎಂದರು. ‘ಪೊಲೀಸ್ ಇಲಾಖೆಯು ವಿವಿಧ ಇಲಾಖೆಗಳ ಸಹಕಾರದಲ್ಲಿ ಮದ್ಯ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮ ಬಗ್ಗೆ ಒಂದು ಕಡೆ ಜಾಗೃತಿ ಮೂಡಿಸುತ್ತದೆ. ಮತ್ತೊಂದು ಕಡೆ ಇಂತಹ ಪ್ರಕರಣಗಳನ್ನು ಪತ್ತೆಹಚ್ಚಲು ಪ್ರಯತ್ನಿಸಲಾಗುತ್ತದೆ. ಹಾಗೆಯೇ ಖಚಿತವಾದಲ್ಲಿ ದಂಡ ವಿಧಿಸಲಿದೆ ಎಂದು ಹೇಳಿದರು.’ ಜಿಲ್ಲೆಯಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಖಚಿತವಾದಲ್ಲಿ 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಜೊತೆಗೆ ಸಂಬಂಧಪಟ್ಟವರ ವಾಹನ ಚಾಲನಾ ಪರವಾನಿಗೆಯನ್ನು ಅಮಾನತು ಮಾಡಲಾಗುತ್ತದೆ. ಹಾಗೆಯೇ ಎರಡನೇ ಬಾರಿ ಪ್ರಕರಣ ದಾಖಲಾದಲ್ಲಿ ವಾಹನ ಚಾಲನಾ ಪರವಾನಿಗೆಯನ್ನೇ ರದ್ದು ಮಾಡಲಾಗುತ್ತದೆ ಎಂದು ಎಚ್ಚರಿಸಿದರು.

ಇತ್ತೀಚೆಗೆ ಮೈಸೂರಿನಲ್ಲಿ ಮಹಾರಾಷ್ಟ್ರ ಪೊಲೀಸರ ಕಾರ್ಯಾಚರಣೆ ಮೂಲಕ ಬೆಳಕಿಗೆ ಬಂದಿರುವ ಮಾದಕ ವಸ್ತು ತಯಾರಿಕೆ ಹಾಗೂ ಮಾರಾಟ ಜಾಲ ಒಂದು ರೀತಿ ಗಾಬರಿ ಹುಟ್ಟಿಸುವಂತಿದೆ ಎಂದು ಸೂರಜ್ ಅವರು ಹೇಳಿದರು. ಸಮಾಜದಲ್ಲಿ ಯಾವುದೇ ರೀತಿಯ ಆಗುಹೋಗುಗಳಿಗೆ ಸಂಬಂಧಿಸಿದಂತೆ ದೂರುಗಳನ್ನು 112 ಕ್ಕೆ ನೀಡಬಹುದಾಗಿದೆ ಎಂದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಚಿದಾನಂದ ಕುಮಾರ್ ಅವರು ಮಾತನಾಡಿ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಮದ್ಯ ಹಾಗೂ ಮಾದಕ ವ್ಯಸನಗಳಿಂದ ದೂರವಿರಬೇಕು ಎಂದರು. ಬಾಯಿಗೆ ರುಚಿ ಇದೆ ಎಂದು ಹಲವು ರೀತಿಯ ತಿನಿಸುಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದಲ್ಲ. ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಡಾ.ಮಹಾಂತ ಶಿವಯೋಗಿ ಸ್ವಾಮೀಜಿ ಅವರು ತುಂಬಾ ಶ್ರಮವಹಿಸಿದ್ದಾರೆ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಸನತ್ ಕುಮಾರ್ ಅವರು ಮಾತನಾಡಿ ಯುವ ಜನರಲ್ಲಿ ಚಂಚಲ ಮನಸ್ಸು ಹೆಚ್ಚು. ಆದ್ದರಿಂದ ಓದಿನ ಕಡೆ ಗಮನ ನೀಡುವಂತಾಗಬೇಕು ಎಂದು ಸಲಹೆ ನೀಡಿದರು. ಮದ್ಯ ಹಾಗೂ ಮಾದಕ ವ್ಯಸನಕ್ಕೆ ತುತ್ತಾದಲ್ಲಿ ಮೆದುಳು, ಅಂಗಾಂಗ, ಜ್ಞಾಪಕ ಶಕ್ತಿ ಕಡಿಮೆಯಾಗುತ್ತದೆ. ಆದ್ದರಿಂದ ಈ ಬಗ್ಗೆ ಎಚ್ಚರವಹಿಸಬೇಕು ಎಂದರು. ರಾಷ್ಟ್ರದ ಅಭಿವೃದ್ಧಿಗೆ ಯುವಜನರ ಪಾತ್ರ ಅತ್ಯಮೂಲ್ಯವಾಗಿದೆ. ಆದ್ದರಿಂದ ಯಾವುದೇ ರೀತಿಯ ವ್ಯಸನಕ್ಕೆ ತುತ್ತಾಗಬಾರದು. ಬದುಕಿನ ದೂರದೃಷ್ಟಿ ಚಿಂತನೆ ಒಳಗೊಂಡಿರಬೇಕು ಎಂದರು.

 ಪ್ರಾಂಶುಪಾಲರಾದ ವಿಜಯ ಅವರು ಮಾತನಾಡಿ ಜೀವ ಇದ್ದರೆ ಮಾತ್ರ ಜೀವನ, ಯುವಜನರು ಒಳ್ಳೆಯ ಕೆಲಸಗಳಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದರು. ‘ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮನೋವೈದ್ಯರಾದ ಡಾ.ಡೆವಿನ್ ಕರ್ಕಡ ಅವರು ಮಾತನಾಡಿ ಮದ್ಯ ಹಾಗೂ ಮಾದಕ ವಸ್ತುಗಳಿಗೆ ತುತ್ತಾದಲ್ಲಿ ದೈಹಿಕ ಮತ್ತು ಮಾನಸಿಕ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.’ ಮಾದಕ ವಸ್ತು ಬಳಕೆ ಮತ್ತು ಸಾಗಾಣಿಕೆಯು ಒಂದು ಶಿಕ್ಷಾರ್ಹ ಅಪರಾಧವಾಗಿದ್ದು, ಆರೋಗ್ಯ ಮತ್ತು ಮನಸ್ಸಿಗೆ ಮಾರಕವಾಗಿದೆ ಎಂದು ತಿಳಿಸಿದರು. ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ ಕಾರ್ಯಕ್ರಮದಲ್ಲಿ ಟೆಲಿ ಮನಸ್ಸು ಜಾರಿಗೊಳಿಸಿದ್ದು, ಶುಲ್ಕ ರಹಿತ ದೂರವಾಣಿ ಸಂಖ್ಯೆ 14416 ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದರು.

ಪರೀಕ್ಷಾ ಒತ್ತಡಕ್ಕೆ ಒಳಗಾದವರು, ಕೌಟುಂಬಿಕ ಸಮಸ್ಯೆಗೆ ತುತ್ತಾದವರು, ಮಾದಕ ವಸ್ತು ವ್ಯಸನದ ಸಮಸ್ಯೆಯಲ್ಲಿ ಇರುವವರು, ಜ್ಞಾಪಕ ಶಕ್ತಿ ತೊಂದರೆ ಉಳ್ಳವರು, ಇತರೆ ಯಾವುದೇ ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರು 14416 ಸಹಾಯವಾಣಿಗೆ ಕರೆ ಮಾಡಬಹುದಾಗಿದೆ ಎಂದು ತಿಳಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕರಾದ ಚಿನ್ನಸ್ವಾಮಿ ಸ್ವಾಗತಿಸಿದರು. ಉಪನ್ಯಾಸಕರಾದ ಚಿದಾನಂದ ನಿರೂಪಿಸಿದರು. ಕಾಲೇಜಿನ ವಿದ್ಯಾರ್ಥಿ ನಿಯರು ಪ್ರಾರ್ಥಿಸಿದರು. ಉಪನ್ಯಾಸಕರಾದ ಪೂರ್ಣಿಮ ವಂದಿಸಿದರು.