ಗಾಂಜಾ ಮಾರಾಟಕ್ಕೆ ಯತ್ನ ಇಬ್ಬರು ಅರೆಸ್ಟ್: ಚೆಯ್ಯಂಡಾಣೆ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ ಇಬ್ಬರು ಅಸ್ಸಾಂ ಮೂಲದ ಕಾರ್ಮಿಕರು ಎಲ್ಲಿ ಸಿಕ್ಕಿಬಿದ್ದರು ಗೊತ್ತೇ!

ಸಕಲೇಶಪುರ: ಕೂಲಿ ಕೆಲಸಕ್ಕೆಂದು ಹೊರ ರಾಜ್ಯದಿಂದ ಬಂದ ಕಾರ್ಮಿಕರಿಬ್ಬರು ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಘಟನೆ ಬಾಳ್ಳುಪೇಟೆಯಲ್ಲಿ ನಡೆದಿದೆ.ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆಯಿಂದ ಜಮ್ಮನಹಳ್ಳಿ ಗ್ರಾಮದ ಕಡೆಗೆ ಹೋಗುವ ರಸ್ತೆಯಲ್ಲಿ ಇಬ್ಬರು ಅಪರಿಚಿತರು ಸಂಚರಿಸುತ್ತಿದ್ದರು ಎಂಬ ಖಚಿತ ಮಾಹಿತಿಯ ಮೇರೆಗೆ ಗ್ರಾಮಾಂತರ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಡಿಕೇರಿ ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಚೆಯ್ಯಂಡಾಣೆ ಗ್ರಾಮದ ದಯಾ ಅವರ ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಅಸ್ಸಾಂನ ಸಂಶುಲ್ ಹಕ್ (27) ಮತ್ತು ಹುರುಮುಜ್ ಆಲಿ (26) ಬಂಧಿತರು. ಬಂಧಿತರಿಂದ 36 ಸಾವಿರ ರೂ. ಮೌಲ್ಯದ 2 ಕೆ.ಜಿ. ಗಾಂಜಾ ಸೊಪ್ಪು ವಶಪಡಿಸಿಕೊಳ್ಳಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.