ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಆರು ಸರ್ಕಾರಿ ಶಾಲೆಗಳಿಗೆ ಬೀಗ! : ಐದು ವರ್ಷಗಳಲ್ಲಿ ಕೊಡಗಿನಲ್ಲಿ ಎಷ್ಟು ಸರ್ಕಾರಿ ಶಾಲೆಗಳು ಬಂದ್ ಆಗಿದೆ ಗೊತ್ತೇ!
(ವಿಶೇಷ ವರದಿಕೆ.ಎಂ ಇಸ್ಮಾಯಿಲ್ ಕಂಡಕರೆ)
ಮಡಿಕೇರಿ:ಸರ್ಕಾರಿ ಶಾಲೆಗಳನ್ನು ಉಳಿಸಿ-ಬೆಳೆಸಲು ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ವಿಭಾಗವನ್ನು(ದ್ವಿ-ಭಾಷಾ ಶಾಲೆ) ತೆರೆದರು ಕೂಡ ವರ್ಷದಿಂದ ವರ್ಷಕ್ಕೆ ಕೊಡಗು ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿದೆ.ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಶೂನ್ಯ ದಾಖಲಾತಿಯಿಂದ ಆರು ಸರ್ಕಾರಿ ಶಾಲೆಗಳು ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿದೆ.ಒಂದು ಬಾರಿ ಸರ್ಕಾರಿ ಶಾಲೆಗಳಿಗೆ ಬೀಗ ಬಿದ್ದರೆ ಪುನಃ ಆ ಶಾಲೆಗಳಿಗೆ ಮಕ್ಕಳನ್ನು ಪೋಷಕರು ದಾಖಲಿಸುವುದು ಅನುಮಾನ. ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಚೇರಂಬಾಣೆ ಸಮೀಪದ ಯರವನಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸೋಮವಾರಪೇಟೆ ತಾಲ್ಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ,ಶನಿವಾರಸಂತೆ ಸಮೀಪದ ದುಂಡಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಂಡ್ಲಿ ಸಮೀಪದ ಮೂದ್ರವಳ್ಳಿ ಬಿ. ಕಿರಿಯ ಪ್ರಾಥಮಿಕ ಶಾಲೆ,ಶಾಂತಳ್ಳಿ ಸಮೀಪದ ಮಲ್ಲಿಕಾರ್ಜುನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕುಶಾಲನಗರ ತಾಲ್ಲೂಕಿನ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದಲಿಂಗಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶೂನ್ಯ ದಾಖಲಾತಿಯಿಂದ ಶಾಲೆಗಳನ್ನು ಮುಚ್ಚಲ್ಪಟ್ಟಿದೆ.
ಐದು ವರ್ಷಗಳಲ್ಲಿ ಕೊಡಗಿನಲ್ಲಿ 27 ಸರ್ಕಾರಿ ಶಾಲೆಗಳಿಗೆ ಬೀಗ!
ಕೊಡಗು ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ 27 ಸರ್ಕಾರಿ ಶಾಲೆಗಳಿಗೆ ಬೀಗ ಬಿದ್ದಿದೆ.ಇಂಗ್ಲಿಷ್ ವ್ಯಾಮೋಹ ಹಾಗೂ ಖಾಸಗಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಎಂಬಿತ್ಯಾದಿ ಕಾರಣಗಳಿಂದ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಇಂಗ್ಲಿಷ್ ಮೀಡಿಯಂ ಶಾಲೆಗಳಿಗೆ ದಾಖಲು ಮಾಡುತ್ತಿದ್ದಾರೆ. ಕೊಡಗು ಜಿಲ್ಲೆಯಲ್ಲಿ 2019ರಲ್ಲಿ 02, 2022ರಲ್ಲಿ 09, 2023ರಲ್ಲಿ 04 ,2024 ರಲ್ಲಿ 06 ಹಾಗೂ ಪ್ರಸಕ್ತ 2025-26ನೇ ಸಾಲಿನಲ್ಲಿ 06 ಸರ್ಕಾರಿ ಶಾಲೆಗಳಿಗೆ ಬೀಗ ಬಿದ್ದಿದೆ. 2019ರಿಂದ 2025ರವರೆಗೆ ಕೊಡಗು ಜಿಲ್ಲೆಯಲ್ಲಿ 27 ಸರ್ಕಾರಿ ಶಾಲೆಗಳು ಮುಚ್ಚಲ್ಪಟ್ಟಿದೆ. 2019ರಿಂದ 2025ರವರೆಗೆ ಮುಚ್ಚಲ್ಪಟ್ಟಿರುವ ಸರ್ಕಾರಿ ಶಾಲೆಗಳಲ್ಲಿ 18ಹಿರಿಯ ಪ್ರಾಥಮಿಕ ಹಾಗೂ 09 ಕಿರಿಯ ಪ್ರಾಥಮಿಕ ಶಾಲೆಗಳು ಸೇರಿಕೊಂಡಿವೆ. 2019ರಿಂದ 2025ರವರೆಗೆ ಮಡಿಕೇರಿ ತಾಲ್ಲೂಕಿನಲ್ಲಿ 07 ಸೋಮವಾರಪೇಟೆ ತಾಲ್ಲೂಕಿನ 17 ಹಾಗೂ ವಿರಾಜಪೇಟೆ ತಾಲ್ಲೂಕಿನಲ್ಲಿ 03 ಸರ್ಕಾರಿ ಶಾಲೆಗಳಿಗೆ ಶೂನ್ಯ ದಾಖಲಾತಿಯಿಂದ ಬೀಗ ಜಡಿಯಲಾಗಿದೆ.
ಕೊಡಗು ಜಿಲ್ಲೆಯಲ್ಲಿ ಪ್ರತೀ ವರ್ಷ ಶಾಲೆಗಳಲ್ಲಿ ದಾಖಲಾತಿ ಕಡಿಮೆಯಾಗುತ್ತಿದೆ. ಶೂನ್ಯ ದಾಖಲಾತಿಯಾಗಿರುವ ಕಾರಣದಿಂದ ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿದೆ. ವಿದ್ಯಾರ್ಥಿಗಳು ದಾಖಲಾದರೆ ಶಾಲೆಗಳನ್ನು ರೀ ಓಪನ್ ಮಾಡಲಾಗುವುದು. ಈ ಹಿಂದೆ ಮುಚ್ಚಲ್ಪಟ್ಟಿದ್ದ ಭಾಗಮಂಡಲ ಸಮೀಪದ ಸರ್ಕಾರಿ ಶಾಲೆಗಳಿಗೆ ಐದು ವಿದ್ಯಾರ್ಥಿಗಳು ದಾಖಲಾಗಿದ್ದು,ಶಾಲೆಯನ್ನು ಮತ್ತೆ ಓಪನ್ ಮಾಡಿದ್ದೇವೆ. ರಂಗಧಾಮಪ್ಪ ಸಿ, ಡಿಡಿಪಿಐ ಕೊಡಗು ಜಿಲ್ಲೆ
------------------------------------------------------------------------
2025-26ನೇ ಸಾಲಿನಲ್ಲಿ ಸೋಮವಾರಪೇಟೆ ತಾಲ್ಲೂಕಿನ ಮೋದೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ,ಸ.ಹಿ.ಪ್ರಾ ಶಾಲೆ ದುಂಡಳ್ಳಿ ಹಾಗೂ ಸ.ಕಿ.ಪ್ರಾ ಶಾಲೆ ಮಲ್ಲಿಕಾರ್ಜುನ ಶಾಲೆಗಳಲ್ಲಿ ಶೂನ್ಯ ದಾಖಲಾತಿ ಇರುವ ಪ್ರತಿ ಶಾಲೆಯಲ್ಲಿರುವ ಶಿಕ್ಷಕರನ್ನು ಅವಶ್ಯಕತೆಯಿರುವ ಶಾಲೆಗಳಿಗೆ ನಿಯೋಜನೆ ಮಾಡಲಾಗಿದ್ದು,ತಾತ್ಕಾಲಿಕವಾಗಿ ಸೋಮವಾರಪೇಟೆ ತಾಲ್ಲೂಕಿನ ಆರು ಸರ್ಕಾರಿ ಶಾಲೆಗಳನ್ನು ಮುಚ್ಚಲ್ಪಟ್ಟಿದೆ. ಶೂನ್ಯ ದಾಖಲಾತಿಯಿಂದ ಶಾಲೆಗಳನ್ನು ಮುಚ್ಚಲ್ಪಟ್ಟಿದ್ದು ಕನಿಷ್ಠ ಒಂದು ಶಾಲೆಗೆ ಐದು ವಿದ್ಯಾರ್ಥಿಗಳು ದಾಖಲಾದರೆ ಇಂದಿನಿಂದಲೇ ಶಾಲೆ ತೆರೆಯಲಾಗುವುದು. ಭಾಗ್ಯಮ್ಮ,ಸೋಮವಾರಪೇಟೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ.