ವಿದ್ಯಾರ್ಥಿಗಳ ಶಿಕ್ಷಣದಲ್ಲಿ ಗುರುಗಳ ಪಾತ್ರ ಅಮೂಲ್ಯ : ಶಾಸಕ ಮಂತರ್ ಗೌಡ :ಸಾಧಕ ವಿದ್ಯಾರ್ಥಿಗಳಿಗೆ ಕೊಡಗು ಪತ್ರಕರ್ತರ ಸಂಘದಿಂದ ಸನ್ಮಾನ

ಸೋಮವಾರಪೇಟೆ:“ವಿದ್ಯಾರ್ಥಿಗಳ ಶಿಕ್ಷಣದಲ್ಲಿ ಗುರುಗಳ ಪಾತ್ರ ಅಮೂಲ್ಯವಾದದ್ದು. ಬಾಲ್ಯದಲ್ಲಿ ತಂದೆ-ತಾಯಿಗಳು ಮೊದಲ ಗುರುಗಳು; ನಂತರ ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು ದಾರಿ ತೋರಿಸುವ ದೀಪದಂತೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗುತ್ತಾರೆ,” ಎಂದು ಶಾಸಕ ಮಂತರ್ ಗೌಡ ಅಭಿಪ್ರಾಯಪಟ್ಟರು.
ಕೊಡಗು ಪತ್ರಕರ್ತರ ಸಂಘದ ಸೋಮವಾರಪೇಟೆ ಘಟಕದ ವತಿಯಿಂದ ಇಲ್ಲಿ ನಡೆದ 2024-25ನೇ ಸಾಲಿನ ಸಾಧಕ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿವಿಧ ಸಂಸ್ಥೆಗಳು ಏರ್ಪಡಿಸುವ ಸಾಧಕರ ಸನ್ಮಾನ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿ ಬಲ ನೀಡಬೇಕು ಎಂದೂ ಹೇಳಿದರು. “ಧೈರ್ಯ ಮತ್ತು ದೃಢ ನಿರ್ಧಾರದಿಂದ ಯಾವುದೇ ಗುರಿಯನ್ನು ಸಾಧಿಸಬಹುದು. ಆಸೆ ಮತ್ತು ಕನಸುಗಳಿಲ್ಲದೆ ಯಶಸ್ಸು ಸಾಧ್ಯವಿಲ್ಲ. ಪತ್ರಿಕೆಗಳು ಮತ್ತು ಮಾಧ್ಯಮಗಳ ಮೂಲಕ ಸ್ಥಳೀಯ ಸಮಸ್ಯೆಗಳನ್ನು ಬಿಂಬಿಸಿದರೆ, ನಾವು ಅವುಗಳ ಪರಿಹಾರಕ್ಕೆ ಬದ್ಧರಾಗಿದ್ದೇವೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಿದ್ಧಲಿಂಗಪುರದ ಶ್ರೀ ಮಂಜುನಾಥ ಸ್ವಾಮಿ ಕ್ಷೇತ್ರದ ಪ್ರಧಾನ ಗುರು ರಾಜೇಶ್ ನಾಥ್ ಜೀ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು. “ಪತ್ರಿಕಾ ಮಾಧ್ಯಮಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳನ್ನು ಕಟ್ಟುವ ಜವಾಬ್ದಾರಿ ಹೊತ್ತಿವೆ. ಮಾಧ್ಯಮಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕು,” ಎಂದು ಸಲಹೆ ನೀಡಿದರು.
“ಸನ್ಮಾನ ವ್ಯಕ್ತಿಗೆ ಹೆಚ್ಚಿನ ಜವಾಬ್ದಾರಿ ಒಡ್ಡುತ್ತದೆ. ವಿದ್ಯಾರ್ಥಿಗಳಿಗೆ ಗುರಿ ಇರಬೇಕು. ಪೋಷಕರ ಇಷ್ಟಕ್ಕಷ್ಟೇ ಬೆಳೆದರೆ ಸಾಕಾಗದು; ಮಕ್ಕಳ ಆಸೆ-ಆಕಾಂಕ್ಷೆಗಳಿಗೆ ತಕ್ಕಂತೆ ಶಿಕ್ಷಣ ನೀಡಬೇಕು. ಪ್ರತಿಯೊಬ್ಬರೂ ಕನಿಷ್ಠ ಒಂದು ಸಸಿ ನೆಟ್ಟು ಪರಿಸರ ಉಳಿಸುವ ಜವಾಬ್ದಾರಿ ವಹಿಸಿಕೊಳ್ಳಬೇಕು,” ಎಂಬ ಸಂದೇಶವನ್ನು ಅವರು ನೀಡಿದರು.
ಕೊಡಗು ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷ ಎಸ್.ಎ. ಮುರುಳಿದೇವ ಅವರು ಮಾತನಾಡಿ, “ಸತತ ಶ್ರಮ ಮತ್ತು ನಿಷ್ಠೆಯೇ ಯಶಸ್ಸಿಗೆ ಮೂಲ. ವಿದ್ಯಾರ್ಥಿಗಳು ಓದು ಮತ್ತು ಅಧ್ಯಯನದಲ್ಲಿ ತೊಡಗಿದರೆ ಭವಿಷ್ಯದಲ್ಲಿ ಉತ್ತಮ ಉದ್ಯೋಗ ಹಾಗೂ ನೈತಿಕ ಬದುಕು ಸಾಧ್ಯ,” ಎಂದರು. ಐಎಎಸ್, ಐಪಿಎಸ್, ಬ್ಯಾಂಕಿಂಗ್ ಹಥಾಯಿಗಳ ಪರೀಕ್ಷೆಗಳಿಗೆ ಸ್ಪರ್ಧೆ ಮಾಡಬಯಸುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಗುವುದು ಎಂದು ತಿಳಿಸಿದರು.
ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ:
ಅಖಿಲ ಭಾರತ ಮಟ್ಟದ ನೀಟ್ ಪರೀಕ್ಷೆಯಲ್ಲಿ 84ನೇ ರ‍್ಯಾಂಕ್ ಹಾಗೂ ರಾಜ್ಯದಲ್ಲಿ 7ನೇ ರ‍್ಯಾಂಕ್ ಪಡೆದ ಚೌಡ್ಲು ಗ್ರಾಮದ ಕೆ.ಜಿ. ನಿಧಿ ಅವರನ್ನು ಸನ್ಮಾನಿಸಲಾಯಿತು.ಎಸ್‌ಎಸ್‌ಎಲ್‌ಸಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ಎಸ್. ಆದ್ವಿ, ಸೋಮವಾರಪೇಟೆ ಸೆಂಟ್ ಜೋಸೆಫ್ ಶಾಲೆಯ ಲಿಸ್ಮ ಡಯಾಸ್, ದ್ವಿತೀಯ ಪಿಯುಸಿಯಲ್ಲಿ ಶನಿವಾರಸಂತೆಯ ಸೆಕ್ರೆಟ್ ಹಾರ್ಟ್ ಪಿಯು ಕಾಲೇಜಿನ ಡಿ. ತೇಜಸ್ವಿನಿ, ಗರಗಂದೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಎನ್.ಎಂ. ದರ್ಶನ್ ಅವರನ್ನು ಗೌರವಿಸಲಾಯಿತು.ವಾಣಿಜ್ಯ ವಿಭಾಗದಲ್ಲಿ ಸೋಮವಾರಪೇಟೆ ಸೆಂಟ್ ಜೋಸೆಫ್ ಕಾಲೇಜಿನ ಎಸ್.ಎಂ. ಧನ್ಯ, ಶನಿವಾರಸಂತೆಯ ವಿಘ್ನೇಶ್ವರ ಪಿಯು ಕಾಲೇಜಿನ ಸಿ.ಎಲ್. ಸುಚಿತ್ರ, ಕಲಾ ವಿಭಾಗದಲ್ಲಿ ಶನಿವಾರಸಂತೆಯ ವಿಘ್ನೇಶ್ವರ ಪಿಯು ಕಾಲೇಜಿನ ನಾಸಿಯಾ, ಮಾದಾಪುರದ ಶ್ರೀಮತಿ ಚೆನ್ನಮ್ಮ ಪಿಯು ಕಾಲೇಜಿನ ದಿಲ್ಸಾನ ಅವರಿಗೆ ಸನ್ಮಾನ ಸಲ್ಲಿಸಲಾಯಿತು.
ಅಧ್ಯಕ್ಷತೆ ಹಾಗೂ ಉಪಸ್ಥಿತಿ:
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಚ್.ಆರ್. ಹರೀಶ್ ವಹಿಸಿದ್ದರು.ಕೊಡಗು ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಅನಿಲ್ ಎಚ್.ಟಿ ಪ್ರಾಸ್ತಾವಿಕ ನುಡಿಯಲ್ಲಿ ಮಾನವ ಸಮುದಾಯದ ಪ್ರಗತಿಯ ಪಥದಲ್ಲಿ ಶಿಕ್ಷಣವೇ ಅತ್ಯಂತ ಶಕ್ತಿಯುತ ಹತ್ತಿರದ ಆಸ್ತಿಯಾಗಿದ್ದು, ಅದನ್ನು ಧ್ಯೇಯವಾಗಿ ಧರಿಸಿಕೊಂಡ ಯುವ ಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸುವ ಕಾರ್ಯವು ನಿಜವಾದ ಸಮಾಜ ಸೇವೆಯ ಪ್ರತಿಬಿಂಬವಾಗಿದೆ. ಈ ನಿಟ್ಟಿನಲ್ಲಿ ಇಂದು ಆಯೋಜನೆಯಾದ ತಾಲ್ಲೂಕು ಮಟ್ಟದ ಸಾಧಕ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭವು ಅಪೂರ್ವ ನಿರ್ವಹಣೆಯ ಉದಾಹರಣೆ ಆಗಿದೆ.
ಎಸ್.ಎಸ್.ಎಲ್.ಸಿ., ಪಿ.ಯು.ಸಿ., ಮತ್ತು ನೀಟ್ ಪರೀಕ್ಷೆಗಳಲ್ಲಿ ಜಿಲ್ಲೆಯ ಹೆಮ್ಮೆಗೊಂದು ಸಾಧನೆಗೈದ ಒಂಬತ್ತು ಮಂದಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಮೂಲಕ, ನಾವು ಮುಂದಿನ ಪೀಳಿಗೆಗೆ ಪ್ರೋತ್ಸಾಹದ ಬೆಳಕು ಬೆಳಗಿಸುತ್ತಿದ್ದೇವೆ. ವಿಶೇಷವೆಂದರೆ ಈ ಸಾಧಕರ ಪೈಕಿ ಎಂಟು ಮಂದಿ ಯುವತಿಯರು ಎಂಬುದು ಸಮಾಜದ ಒಳಗಿನ ಸ್ಥಿತಿಗತಿಯ ಅರಿವನ್ನು ಕೊಡುವ, ಹೆಮ್ಮೆಪಡುವಂಥ ಸಂಗತಿಯಾಗಿದೆ.
ನಮ್ಮ ಕೊಡಗು ಜಿಲ್ಲಾ ಪತ್ರಕರ್ತರ ಸಂಘವು ತನ್ನ ಸ್ಥಾಪನೆಯ ಮೂರನೇ ವರ್ಷವನ್ನು ಪೂರೈಸುತ್ತಿದೆ. ಕೊಡಗಿನ ಮೊದಲ ಪತ್ರಿಕೆ ‘ಕೊಡಗು ಚಂದ್ರಿಕೆ’ ಹುಟ್ಟಿದ್ದು ಸೋಮವಾರಪೇಟೆ ತಾಲೂಕಿನ ಶನಿವಾರ ಸಂತೆಯ ಮಣ್ಣಿನಲ್ಲಿ ಉದಯವಾದ ನಮ್ಮ ಸಂಘವು ಪ್ರಸ್ತುತ ಶ್ರದ್ಧೆಯಿಂದ ಸಮಾಜಮುಖಿ ಚಟುವಟಿಕೆಗಳನ್ನೆಸಗುತ್ತಿದೆ. ಸ್ಥಾಪಕ ಅಧ್ಯಕ್ಷ ಮುರಳೀಧರ್ ಅವರ ದೃಢವಾದ ದೃಷ್ಟಿಕೋನದ ಫಲವಾಗಿ ಹುಟ್ಟಿದ ಈ ಸಂಘವನ್ನು ನಾನು ಅಧ್ಯಕ್ಷನಾಗಿ ಮೂರು ತಿಂಗಳ ಹಿಂದೆ ಉಸ್ತುವಾರಿ ಹೊತ್ತಿದ್ದೇನೆ.
ಇಂದು ಸೋಮವಾರಪೇಟೆಯಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮವು ತಾಲ್ಲೂಕು ಮಟ್ಟದಲ್ಲಿ ನಡೆಯುತ್ತಿರುವ ನಾಲ್ಕನೇ ವಿಶಿಷ್ಟ ಕಾರ್ಯಕ್ರಮವಾಗಿದೆ. ಕ್ಷೇತ್ರದ ಅಧ್ಯಕ್ಷರಾದ ಹರೀಶ್ ಮತ್ತು ತಂಡದವರು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವುದು ಗಮನಾರ್ಹ. ಇತ್ತೀಚೆಗಷ್ಟೇ 1,200 ವಿದ್ಯಾರ್ಥಿಗಳು ಭಾಗವಹಿಸಿದ ಐ.ಎ.ಎಸ್., ಐ.ಪಿ.ಎಸ್., ಮತ್ತು ಬ್ಯಾಂಕಿಂಗ್ ಕ್ಷೇತ್ರದ ತರಬೇತಿ ಶಿಬಿರವೂ ಇದಕ್ಕೆ ಸಾಕ್ಷಿಯಾಗಿದೆ.
ಇಂತಹ ಪ್ರಯತ್ನಗಳಿಗೆ ಶಾಸಕರ ಜವಾಬ್ದಾರಿತನದ ಬೆಂಬಲವೂ ವಿಶೇಷವಾಗಿದ್ದು, ಅವರು ದೂರದ ಪಾಲೆಮಾಡು ಪ್ರದೇಶದಿಂದಲೇ ತಮ್ಮ ತೀವ್ರ ಸಮಯದ ಅಭ್ಯಂತರದಲ್ಲೂ, ಕೇವಲ 30-40 ನಿಮಿಷಗಳಲ್ಲಿ ಮಡಿಕೇರಿಯಿಂದ ಆಗಮಿಸಿ ವಿದ್ಯಾರ್ಥಿಗಳ ಸಾಧನೆಯನ್ನು ಗೌರವಿಸಿದುದು ನಿಜಕ್ಕೂ ಶ್ಲಾಘನೀಯ. ಇದು ರಾಜಕೀಯ ವ್ಯಕ್ತಿತ್ವದ ಮೌಲ್ಯಮಾಪನದಲ್ಲಿ ಮಾನವೀಯತೆಯ ಸ್ಥಾನ ಎಷ್ಟು ಉನ್ನತವಿದೆ ಎಂಬುದನ್ನು ತೋರಿಸುತ್ತದೆ.
ಈ ಸಾಧಕರಿಗೆ ಅಭಿನಂದನೆ ಸಲ್ಲಿಸುವ ಮೂಲಕ ನಾವು ಕೇವಲ ಸನ್ಮಾನವನ್ನೇ ಮಾಡುವುದಿಲ್ಲ. ಅವರೊಳಗಿನ ಕನಸುಗಳಿಗೆ ಪಾರಿತೋಷಿಕ ನೀಡುವ ಮೂಲಕ, ಸಮಾಜದ ಭವಿಷ್ಯಕ್ಕೆ ಹೊತ್ತುಕೊಡುವ ಕಾರ್ಯವನ್ನು ಮಾಡುತ್ತಿದ್ದೇವೆ. ಇದು ಪತ್ರಕರ್ತರ ಸಂಘದ ಕೇವಲ ಕಾರ್ಯವಲ್ಲ, ನಾಗರಿಕ ಸಮಾಜದ ಸಾಂಸ್ಕೃತಿಕ ಕರ್ತವ್ಯವೂ ಹೌದು ಎಂದು ಹೇಳಿದರು.
ಕವನ್ ಕಾರ್ಯಪ್ಪ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದಲ್ಲಿಕರವೇ ಜಿಲ್ಲಾ ಅಧ್ಯಕ್ಷ ಕೆ.ಎನ್. ದೀಪಕ್, ಸೋಮವಾರಪೇಟೆ ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಚಕ್ರವರ್ತಿ ಸುರೇಶ್, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ತಾಲೂಕು ಘಟಕದ ಅಧ್ಯಕ್ಷ ಶರ್ಮಿಳಾ ರಮೇಶ್, ಚುಟುಕು ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷೆ ರುಬಿನಾ,ವಿವಿಧ ಸಂಘ ಸಂಸ್ಥೆಯ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ಡಿ.ಪಿ. ಲೋಕೇಶ್, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿ ಸುರೇಶ್ ಬಿಳಿಗೇರಿ, ತಾಲೂಕು ಪತ್ರಕರ್ತ ಸಂಘದ ಖಜಾಂಜಿ ದುಷ್ಯಂತ್, ತಾಲೂಕು ಪತ್ರಕರ್ತರ ಸಂಘದ ನಿರ್ದೇಶಕ ಎಸ್.ಆರ್. ವಸಂತ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.