ಅಮ್ಮತ್ತಿ; ಕಳೆದ 46 ದಿನಗಳಿಂದ ನಡೆದ ನಿವೇಶನ ರಹಿತರ ಅಹೋರಾತ್ರಿ ಪ್ರತಿಭಟನೆ ಅಂತ್ಯ: ಅಧಿಕಾರಿಗಳ ಭರವಸೆ ಹಿನ್ನೆಲೆಯಲ್ಲಿ ಧರಣಿ ಕೈ ಬಿಟ್ಟ ನಿವೇಶನ ರಹಿತರು
ಅಮ್ಮತ್ತಿ:ತಲೆ ಮೇಲೊಂದು ಸೂರಿಗಾಗಿ ಆಗ್ರಹಿಸಿ ಭೂಮಿ ಮತ್ತು ವಸತಿ ಹೋರಾಟ ಸಮಿತಿ ನೇತೃತ್ವದಲ್ಲಿ ಅಮ್ಮತ್ತಿಯ ನಾಡ ಕಚೇರಿ ಎದುರು ಕಳೆದ 46 ದಿನಗಳಿಂದ ನಡೆಯುತ್ತಿದ್ದ ಅಹೋರಾತ್ರಿ ಪ್ರತಿಭಟನೆ ಅಧಿಕಾರಿಗಳ ಭರವಸೆ ಮೇರೆಗೆ ಅಂತ್ಯಕಂಡಿದೆ. ಮಳೆ-ಗಾಳಿಯ ಅಬ್ಬರದ ನಡುವೆಯೂ ಅಂಗೈಯಗಲದ ಜಾಗಕ್ಕಾಗಿ ಮಹಿಳೆಯರು, ಪುಟ್ಟ ಮಕ್ಕಳು, ವಯೋವೃದ್ಧರು ಕಳೆದ 46 ದಿನಗಳಿಂದ ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡು ನಿವೇಶನ ನೀಡುವವರೆಗೂ ಹೋರಾಟವನ್ನು ಕೈಬಿಡುವುದಿಲ್ಲವೆಂದು ಪಟ್ಟು ಹಿಡಿದಿದ್ದರು. ವಿರಾಜಪೇಟೆ ತಾಲೂಕು ತಹಶೀಲ್ದಾರ್ ಅನಂತ ಶಂಕರ್ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೋಣಿಯಂಡ ಅಪ್ಪಣ್ಣ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಧರಣಿ ನಿರತರ ಅಹವಾಲು ಆಲಿಸಿದರು. ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗುರುತಿಸಲ್ಪಟ್ಟ ಜಾಗದಲ್ಲಿ ಮೂಲಭೂತ ಸೌಕರ್ಯಗಳು ಕಲ್ಪಿಸಿ ನಿವೇಶನ ಒದಗಿಸಬೇಕಿದ್ದು, ಈ ಹಿನ್ನೆಲೆಯಲ್ಲಿ ಧರಣಿಯನ್ನು ಕೈಬಿಡುವಂತೆ ಮನವಿ ಮಾಡಿದರು. ಮೂರು ತಿಂಗಳ ಕಾಲಾವಕಾಶದೊಳಗೆ ನಿವೇಶನ ವಿತರಿಸುವ ಅಧಿಕಾರಿಗಳ ಭರವಸೆ ಮೇರೆಗೆ ಹೋರಾಟಗಾರರು ಪ್ರತಿಭಟನೆಯನ್ನು ಕೈಬಿಟ್ಟರು.
ಈ ಸಂದರ್ಭ ತಹಶೀಲ್ದಾರ್ ಅನಂತ ಶಂಕರ್ ಅವರು ಮಾತನಾಡಿ, ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ವೇ ನಂಬರ್ 350/1 ರಲ್ಲಿ 5 ಎಕರೆ ತಾಲೂಕು ಪಂಚಾಯಿತಿಯ ಅಧೀನದಲ್ಲಿದೆ. ನಿವೇಶನ ರಹಿತರಿಗೆ ಸ್ಥಳ ಗುರುತಿಸಲು ಪಾರದರ್ಶಕವಾಗಿ ದಾಖಲಾತಿಗಳನ್ನು ಸಿದ್ಧಪಡಿಸಿ ಸ್ಥಳವನ್ನು ವಿಂಗಡಿಸಬೇಕಾಗಿದೆ. ಗುರುತಿಸಲ್ಪಟ್ಟ ಸ್ಥಳದಲ್ಲಿ ಮೂಲಭೂತ ಸೌಕರ್ಯಗಳು ಹಾಗೂ ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ನಿರ್ಮಿಸಬೇಕಾಗಿದೆ. ಈ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ನಿವೇಶನ ನಿರ್ಮಿಸಿ ಕೊಡಬೇಕಾಗಿದೆ. ಆದ್ದರಿಂದ ಹೋರಾಟವನ್ನು ಕೈ ಬಿಟ್ಟು ಸಹಕರಿಸಬೇಕೆಂದು ಮನವಿ ಮಾಡಿಕೊಂಡರು.
ವಿರಾಜಪೇಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೋಣಿಯಂಡ ಅಪ್ಪಣ್ಣ ಅವರು ಮಾತನಾಡಿ, ಜಿಲ್ಲಾಧಿಕಾರಿ ಅವರ ಸೂಚನೆ ಮೇರೆಗೆ ನಿವೇಶನ ರಹಿತರ ಪಟ್ಟಿಯನ್ನು ತಯಾರಿಸಿ ನಿವೇಶನ ರಹಿತರಿಗೆ ಸ್ಥಳ ಗುರುತಿಸಲಾಗುವುದು. ಸುಮಾರು 112 ಕುಟುಂಬಗಳು ಪ್ರತಿಭಟನೆಯಲ್ಲಿ ಭಾಗಿಯಾಗಿವೆ ಎಂದು ದಾಖಲಾತಿ ನೀಡಲಾಗಿದೆ. ಈ ಕುರಿತು ಜಿಲ್ಲಾಧಿಕಾರಿಯವರಿಗೆ ಮಾಹಿತಿ ನೀಡಿದ್ದು, 48 ಕುಟುಂಬಗಳನ್ನು ಐಟಿಡಿಪಿ ಇಲಾಖೆಗೆ ಹಸ್ತಾಂತರಿಸಿ ಅವರ ಮುಖಾಂತರ ನಿವೇಶನ ನೀಡಲು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಹಾಗೆಯೇ ಉಳಿದ 68 ಕುಟುಂಬಗಳಿಗೆ ಬೇರೆ ಸ್ಥಳವನ್ನು ಗುರುತಿಸಲು ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದ್ದಾರೆಂದು ಮಾಹಿತಿ ನೀಡಿದರು.
ಬಹುಜನ ಕಾರ್ಮಿಕ ಸಂಘಟನೆಯ ಜಿಲ್ಲಾಧ್ಯಕ್ಷ ಕೆ. ಮೊಣ್ಣಪ್ಪ ಅವರು ಮಾತನಾಡಿ ಕಾರ್ಯನಿರ್ವಹಣಾಧಿಕಾರಿ ಹಾಗೂ ತಹಶೀಲ್ದಾರ್ ಅವರ ಸಮ್ಮುಖದಲ್ಲಿ ಜಿಲ್ಲಾಧಿಕಾರಿಯವರು ಸಭೆ ನಡೆಸಿ ನಿರ್ದೇಶನ ನೀಡಿದ ಮೇರೆಗೆ ಪತ್ರದ ಮುಖಾಂತರ ಭರವಸೆಗಳನ್ನು ನೀಡಿದ್ದು, ಮೂರು ತಿಂಗಳ ಕಾಲಮಿತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಗುರುತಿಸಲ್ಪಟ್ಟ ಸ್ಥಳದಲ್ಲಿ ನಿರ್ಮಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಕೈಬಿಡಲಾಗಿದೆ ಎಂದರಲ್ಲದೇ, ತಪ್ಪಿದ್ದಲ್ಲಿ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದರು.
ಈ ಸಂದರ್ಭ ಬಹುಜನ ಕಾರ್ಮಿಕ ಸಂಘಟನೆಯ ಪದಾಧಿಕಾರಿ ಕಿರಣ್ ಜಗದೀಶ್, ಅಮ್ಮತ್ತಿ ಹೋರಾಟ ಸಮಿತಿಯ ಉಸ್ತುವಾರಿ ಮಾದೇಶ್, ಕಾರ್ಯದರ್ಶಿ ಹೊನ್ನಪ್ಪ, ಮತ್ತೆ ಹೋರಾಟ ಸಮಿತಿಯ ಅಧ್ಯಕ್ಷ ಪಾಪಣ್ಣ, ಕೊಡಗು ಜಿಲ್ಲಾ ಸಮಿತಿ ಸದಸ್ಯ ಎಚ್. ಜೆ. ಪ್ರಕಾಶ್, ಸಮಿತಿಯ ಉಪಾಧ್ಯಕ್ಷ ವಿಶ್ವ, ಸದಸ್ಯರಾದ ಯಶೋಧ , ಕುಸುಮ, ಗಣೇಶ್, ಕುಮಾರ್, ಭವ್ಯ, ಮಂಜುನಾಥ್, ಅಮ್ಮತ್ತಿ ಹೋಬಳಿಯ ಆರ್.ಐ ಅನಿಲ್ ಕುಮಾರ್ ಹಾಜರಿದ್ದರು.
ವರದಿ: ಚೆಪ್ಪುಡಿರ ರೋಷನ್, ಪೊನ್ನಂಪೇಟೆ.