ಆಪರೇಷನ್ ಸಿಂಧೂರ್ ಕಾರ್ಯಾಚರಣೆಗೆ ಶ್ಲಾಘನೆ: ಬಜೆಗುಂಡಿ ಖಿಳರಿಯಾ ಜುಮಾ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ
ಸೋಮವಾರಪೇಟೆ:ಪೆಹಲ್ಗಾಮ್ ನಲ್ಲಿ ಅಮಾಯಕ ಭಾರತೀಯರ ಮಾರಣಹೋಮ ನಡೆಸಿದ ಭಯೋತ್ಪಾದಕರ ವಿರುದ್ಧ ಕಟ್ಟುನಿಟ್ಟಿನ ಕಾರ್ಯಚರಣೆ ನಡೆಸಿ ಉಗ್ರರನ್ನು ಸದೆಬಡಿಯುತ್ತಿರುವ ಭಾರತೀಯ ಸೇನೆಯ ಕಾರ್ಯ ಶ್ಲಾಘನೀಯ, ಭಾರತೀಯ ಸೇನೆಯ ಜತೆಗೆ ಕೋಟ್ಯಾಂತರ ಭಾರತೀಯರ ಪ್ರಾರ್ಥನೆ ಇದ್ದು, ಪಾಕಿಸ್ತಾನದ ವಿರುದ್ಧದ ಭಾರತೀಯ ಸೇನೆಯ ಕಾರ್ಯಾಚರಣೆ ಉಗ್ರರಿಗೆ ತಕ್ಕ ಪಾಠವನ್ನು ಕಲಿಸಿದೆ ಎಂದು ಬಜೆಗುಂಡಿ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಕೆ.ಎ ಯಾಕುಬ್ ರವರು ತಿಳಿಸಿದರು. ಶುಕ್ರವಾರದ ಸಾಮೂಹಿಕ ಜುಮಾ ನಮಾಜ್ ನಂತರ ಭಾರತೀಯ ಸೇನೆಗಾಗಿ ಆಯೋಜಿಸಲಾಗಿದ್ದ ವಿಶೇಷ ಪ್ರಾರ್ಥನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶೇಷ ಪ್ರಾರ್ಥನೆಗೆ ನೇತೃತ್ವ ವಹಿಸಿದ್ದ ಬಜೆಗುಂಡಿ ಮುಸ್ಲಿಂ ಜಮಾಅತ್ ಖತೀಬ್ ಉಬೈದ್ ಫೈಝಿ ರವರು ಮಾತನಾಡಿ ದೇಶ ಪ್ರೇಮ ಈಮಾನಿನ ಭಾಗವಾಗಿದೆ, ನಮ್ಮ ದೇಶದ ಶತ್ರು ನಮ್ಮೆಲ್ಲರ ಶತ್ರು, ಪೆಹಲ್ಗಾಮ್ ನಲ್ಲಿ ಉಗ್ರಗಾಮಿಗಳು ನಡೆಸಿದ ಕೃತ್ಯ ಖಂಡನೀಯ ಈ ಕೃತ್ಯ ಎಸಗಿದ್ದವರ ವಿರುದ್ಧ ತಕ್ಕ ಪಾಠ ಕಲಿಸುವ ಸಮಯ ಇದಾಗಿದೆ. ಭಾರತೀಯ ಸೇನೆಯ ನಮ್ಮ ಹೆಮ್ಮೆಯ ಸೈನಿಕರು ಈ ನಿಟ್ಟಿನಲ್ಲಿ ಯಶಸ್ವಿಯಾಗಿ ಮುನ್ನುಗ್ಗಿ ಶತ್ರು ಗಳಿಗೆ ಪ್ರತ್ಯುತ್ತರ ನೀಡುತ್ತಿದ್ದಾರೆ ಎಂದರು. ನಂತರದಲ್ಲಿ ಭಾರತೀಯ ಸೇನೆಗಾಗಿ ವಿಶೇಷ ದುಆ ಪ್ರಾರ್ಥನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಜಮಾಅತ್ ಉಪಾಧ್ಯಕ್ಷರಾದ ಹನೀಫ, ಕಾರ್ಯದರ್ಶಿ ಸುಲೈಮಾನ್, ಕಮಿಟಿ ಸದಸ್ಯರಾದ ಮುಸ್ತಫ, ಮುನೀರ್ ಪ್ರಮುಖರಾದ ಅಬ್ದುಲ್ ರಜಾಕ್, ಮಹಮೂದ್,ಮಹಮದ್ ಕುಂಞ, ರಶೀದ್ ನೌಶಾದ್ ಇಸ್ಮಾಯಿಲ್ ಹಾಗೂ ಜಮಾಅತ್ ಭಾಂದವರು ಉಪಸ್ಥಿತರಿದ್ದರು.