ಆಲ್ ಸ್ಟಾರ್ ಕೊಡಗು ವರ್ಲ್ಡ್ ಕಪ್: ದ್ವಿತೀಯ ಪ್ರಿ-ಕ್ವಾಟರ್ ಫೈನಲ್ ಪಂದ್ಯ:ಚೆಲ್ಸಿ ಸ್ಪೋರ್ಟ್ಸ್ ಕ್ಲಬ್ ತಂಡಕ್ಕೆ ಪೆನಾಲ್ಟಿ ಶೂಟೌಟ್ ನಲ್ಲಿ ರೋಚಕ ಗೆಲುವು

ಆಲ್ ಸ್ಟಾರ್ ಕೊಡಗು ವರ್ಲ್ಡ್ ಕಪ್: ದ್ವಿತೀಯ ಪ್ರಿ-ಕ್ವಾಟರ್ ಫೈನಲ್ ಪಂದ್ಯ:ಚೆಲ್ಸಿ ಸ್ಪೋರ್ಟ್ಸ್ ಕ್ಲಬ್ ತಂಡಕ್ಕೆ ಪೆನಾಲ್ಟಿ  ಶೂಟೌಟ್ ನಲ್ಲಿ ರೋಚಕ ಗೆಲುವು

ಮಡಿಕೇರಿ:ಕೊಡಗು ಜಿಲ್ಲೆಯ ಫುಟ್ಬಾಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗೋಣಿಕೊಪ್ಪಲಿನ ಆಲ್ ಸ್ಟಾರ್ ಯೂತ್ ಕ್ಲಬ್ ಗೋಣಿಕೊಪ್ಪಲಿನ ಜಿಎಂಪಿ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿರುವ ಕೊಡಗು ವರ್ಲ್ಡ್ ಕಪ್ ಆಲ್ ಇಂಡಿಯಾ ಸೂಪರ್ ಫೈವ್ಸ್ ಮೂರನೇ ದಿನದ ಎರಡನೇ ಪ್ರಿ-ಕ್ವಾಟರ್ ಫೈನಲ್ ಪಂದ್ಯದಲ್ಲಿ ಚೆಲ್ಸಿ ಸ್ಪೋರ್ಟ್ಸ್ ಕ್ಲಬ್ ಗೋಣಿಕೊಪ್ಪ ತಂಡಕ್ಕೆ ಪೆನಾಲ್ಟಿ ಶೂಟೌಟ್ ನಲ್ಲಿ 3-2 ಗೋಲುಗಳ ಅಂತರದಿಂದ ಚಾಯ್ಸ್ ಇಂಟರ್ನಾಷನಲ್ ತಂಡದ ವಿರುದ್ಧ ಗೆಲುವು ಸಾಧಿಸಿದೆ.

ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಚೆಲ್ಸಿ ತಂಡವು ಮೊದಲಾರ್ಧದಲ್ಲಿ ಪಂದ್ಯದ ಸಂಪೂರ್ಣ ಹಿಡಿತ ಸಾಧಿಸಿ 2-0 ಗೋಲುಗಳ ಅಂತರದಿಂದ ಮುನ್ನಡೆ ಸಾಧಿಸಿತು‌.

ದ್ವಿತೀಯಾರ್ಧದಲ್ಲಿ ಏಟಿಗೆ-ಎದಿರೇಟು ಎಂಬಂತೆ ಚಾಯ್ಸ್ ತಂಡವು ಎರಡು ಗೋಲು ದಾಖಲಿಸಿ ಸಮಬಲ ಸಾಧಿಸಿತು.

ಆದರೆ ತನ್ನ ಆಕ್ರಮಣಕಾರಿ ಆಟವನ್ನು ಮುಂದುವರಿಸಿದ ಚೆಲ್ಸಿ ತಂಡವು ಮತ್ತೊಂದು ಗೋಲು ದಾಖಲು ಮಾಡಿ 3-2 ಗೋಲುಗಳ ಅಂತರದಿಂದ ಮುನ್ನಡೆ ಸಾಧಿಸಿತು.ಪಂದ್ಯದ ಕೊನೆಯ ನಿಮಿಷದಲ್ಲಿ ಚಾಯ್ಸ್ ತಂಡಕ್ಕೆ ದೊರೆತ ಪೆನಾಲ್ಟಿಯನ್ನು ದ್ರೋಣ ಗೋಲಾಗಿ ಪರಿವರ್ತಿಸಿ 3-3 ಗೋಲುಗಳನ್ನು ದಾಖಲಿಸಿ ಸಮಬಲ ಸಾಧಿಸಿತು.ಅಂತಿಮವಾಗಿ ಪೆನಾಲ್ಟಿ ಶೂಟೌಟ್ ನಲ್ಲಿ 3-2 ಗೋಲುಗಳ ಅಂತರದಿಂದ ಚೆಲ್ಸಿ ತಂಡಕ್ಕೆ ವಿಜಯದಮಾಲೆ ಒಲಿಯಿತು.ಚೆಲ್ಸಿ ತಂಡದ ಗೋಲ್ ಕೀಪರ್ ಚಂದನ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.ಚೆಲ್ಸಿ ತಂಡದ ಪರವಾಗಿ ಸಾಬಿತ್ ಒಂದು ಹಾಗೂ ಫಾರೂಖ್ ಎರಡು ಗೋಲು ದಾಖಲಿಸಿದರು.ಚಾಯ್ಸ್ ತಂಡದ ಪರವಾಗಿ ಜುನೈದ್ ಎರಡು ಹಾಗೂ ದ್ರೋಣ ಒಂದು ಗೋಲುಗಳಿಸಿದರು.