ಕಾರ್ಮಿಕರೇ ದೇಶದ ಶಕ್ತಿ: ದೇಶವು ಯಶಸ್ಸು ಸಾಧಿಸಬೇಕೆಂದರೆ ಕಾರ್ಮಿಕರ ಪಾತ್ರ ಬಹುಮುಖ್ಯ:ಎ.ಎಸ್ ಪೊನ್ನಣ್ಣ
ಗೋಣಿಕೊಪ್ಪ:ಇಲ್ಲಿನ ಹೋಟೆಲ್ ಪ್ರಕಾಶ್ ಸಭಾಂಗಣದಲ್ಲಿ, ಬುಡಕಟ್ಟು ಕಾರ್ಮಿಕರ ಸಂಘ ಕೊಡಗು ಜಿಲ್ಲೆ ಹಾಗೂ ಕಾಫಿ ತೋಟಗಳ ಕಾರ್ಮಿಕರ ಯೂನಿಯನ್, ಗೋಣಿಕೊಪ್ಪ ಇವರ ಜಂಟಿ ಸಹಯೋಗದಲ್ಲಿ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣನವರು ಭಾಗವಹಿಸಿದರು. ಎಲ್ಲರಿಗೂ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು ಕೋರುತ್ತಾ ಮಾತನಾಡಿದ ಮಾನ್ಯ ಶಾಸಕರು, ಕಾರ್ಮಿಕರೇ ಒಂದು ದೇಶದ ಶಕ್ತಿ. ಒಂದು ದೇಶವು ಯಶಸ್ಸು ಸಾಧಿಸಬೇಕೆಂದರೆ ಅದರಲ್ಲಿ ಕಾರ್ಮಿಕರ ಪಾತ್ರ ಮಹತ್ವದ್ದಾಗಿರುತ್ತದೆ. ನಮ್ಮ ಸರಕಾರ ಕಾರ್ಮಿಕರ ಏಳಿಗೆಗೆ ಹಲವಾರು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಇದರ ಸದುಪಯೋಗವನ್ನು ಎಲ್ಲಾ ಕಾರ್ಮಿಕರು ಪಡೆದುಕೊಳ್ಳಬೇಕೆಂದು ಇದೇ ಸಂದರ್ಭದಲ್ಲಿ ಮಾನ್ಯ ಶಾಸಕರು ಕರೆ ನೀಡಿದರು. ಕಾರ್ಮಿಕರ ಯಾವುದೇ ಸಮಸ್ಯೆ ಇದ್ದರೂ ತನ್ನ ಬಳಿಗೆ ಬಂದು ತಿಳಿಸಬೇಕೆಂದು ಹೇಳಿದರು.
