ಕೆಸರುಮಯವಾದ ಬೆಳ್ಳುಮಾಡು- ವಿರಾಜಪೇಟೆ ಮುಖ್ಯ ರಸ್ತೆ: ಸಂಚಾರಕ್ಕೆ ಅಡಚಣೆ:ರಸ್ತೆ ದುರಸ್ಥಿಗೆ ಆಗ್ರಹ

(ವರದಿ:ಝಕರಿಯ ನಾಪೋಕ್ಲು)
ನಾಪೋಕ್ಲು :ನಾಪೋಕ್ಲು ಕಡೆಯಿಂದ ಬಾವಲಿ, ಪಾರಾಣೆ, ಬೆಳ್ಳುಮಾಡು ಮಾರ್ಗವಾಗಿ ವಿರಾಜಪೇಟೆಗೆ ತೆರಳುವ ಮುಖ್ಯ ರಸ್ತೆಯಲ್ಲಿ ಕೆಸರು ನೀರು ಶೇಖರಣೆಗೊಂಡು ವಾಹನ ಸವಾರರು,ಸಾರ್ವಜನಿಕರು ಸಂಚರಿಸಲು ಭವಣೆ ಪಡುವಂತಾಗಿದ್ದು ಸಂಬಂಧಪಟ್ಟ ಇಲಾಖೆ ಕೂಡಲೇ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.
ವಿರಾಜಪೇಟೆಯಿಂದ ನಾಪೋಕ್ಲು,ಪಾರಾಣೆ, ಬಾವಲಿ, ಮೂರ್ನಾಡು ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದು ಕಳೆದ ಕೆಲವು ತಿಂಗಳುಗಳಿಂದ ಬೆಳ್ಳುಮಾಡು ಪಾರಾಣೆ ಸಂಪರ್ಕ ಕಲ್ಪಿಸುವ ರಸ್ತೆಯ ವಲ್ಲಂಡ ಕುಟುಂಬಸ್ಥರ ಮನೆಯ ಸಮೀಪಕ್ಕಾಗಿ ಹಾದು ಹೋಗುವ ಮುಖ್ಯ ರಸ್ತೆಯಲ್ಲಿ ಮಳೆ ನೀರು ಶೇಖರಣೆಗೊಂಡು ರಸ್ತೆಯ ಮಧ್ಯ ಭಾಗದಲ್ಲಿ ಕೆರೆಯಾಕಾರದ ಹೊಂಡಗಳು ನಿರ್ಮಾಣವಾಗಿದೆ. ಇದರಿಂದ ಪ್ರತಿನಿತ್ಯ ಈ ರಸ್ತೆಯ ಮೂಲಕ ಸಂಚರಿಸುವ ನೂರಾರು ವಾಹನಗಳು ಹಾಗೂ ಸಾರ್ವಜನಿಕರು ಸಂಚರಿಸಲು ಭವಣೆ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಕೆಸರು ತುಂಬಿರುವ ಈ ರಸ್ತೆಯಲ್ಲಿ ಹೊಂಡ ಬಿದ್ದು ದ್ವಿಚಕ್ರ ವಾಹನ ಸವಾರರು ಬಿದ್ದು ಆಸ್ಪತ್ರೆ ಸೇರಿರುವ ಘಟನೆ ಕೂಡ ನಡೆದಿದೆ. ಈ ಮುಖ್ಯ ರಸ್ತೆಯ ಸಮೀಪದಲ್ಲೇ ನೂತನವಾಗಿ ರಸ್ತೆಯನ್ನು ನಿರ್ಮಿಸಲಾಗಿದ್ದು ಮಳೆ ಬಂದ ಸಂದರ್ಭ ಈ ರಸ್ತೆಯ ಮೂಲಕ ಕೆಸರು ಮಿಶ್ರಿತ ಮಳೆನೀರು ಹರಿದು ಬಂದು ಮುಖ್ಯ ರಸ್ತೆಯ ಮಧ್ಯದಲ್ಲಿ ಶೇಖರಣೆ ಗೊಂಡು ಸಮಸ್ಯೆ ಉಂಟಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಸಂಬಂಧಪಟ್ಟ ಸ್ಥಳೀಯ ಆಡಳಿತ ವರ್ಗ ಅಥವಾ ಇಲಾಖೆಯವರು ಕೂಡಲೇ ಈ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಿ ರಸ್ತೆ ಮಧ್ಯದಲ್ಲಿ ಮಳೆ ನೀರು ಶೇಖರಣೆ ಗೊಳ್ಳದಂತೆ ಕ್ರಮ ಕೈಗೊಂಡು ಸಾರ್ವಜನಿಕರ ಹಾಗೂ ವಾಹನ ಸವಾರರ ಸುಗಮ ಸಂಚಾರಕ್ಕೆ ವ್ಯವಸ್ತೆ ಕಲ್ಪಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.