ಮಡಿಕೇರಿ;ಸಮರ್ಥ ಕನ್ನಡಿಗರು ಸಂಸ್ಥೆ ವತಿಯಿಂದ ಮಕ್ಕಳ ಕಥೆ ಹೇಳುವ ಸ್ಫರ್ಧೆ ಕಾರ್ಯಕ್ರಮ

Feb 5, 2026 - 17:53
Feb 5, 2026 - 18:14
 0  205
ಮಡಿಕೇರಿ;ಸಮರ್ಥ ಕನ್ನಡಿಗರು ಸಂಸ್ಥೆ ವತಿಯಿಂದ ಮಕ್ಕಳ ಕಥೆ ಹೇಳುವ ಸ್ಫರ್ಧೆ ಕಾರ್ಯಕ್ರಮ

ವಿರಾಜಪೇಟೆ:ಕನ್ನಡದ ನೆಲ ಮಡಿಕೇರಿಯಲ್ಲಿ ಕನ್ನಡದ ಮನಸ್ಸುಗಳನ್ನು ಒಗ್ಗೂಡಿಸಿ, ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹಾಕುವ ಕಾಯಕವೊಂದಕ್ಕೆ ಕೊಡಗಿನ 'ಸಮರ್ಥ ಕನ್ನಡಿಗರು' ಸಂಸ್ಥೆಯ ಘಟಕ ಇತ್ತೀಚೆಗೆ ನಾಂದಿ ಹಾಡಿತು. 

ಮಡಿಕೇರಿಯ ಲಯನ್ಸ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾಡಿದ ಆಕಾಶವಾಣಿ ನಿವೃತ್ತ ಉದ್ಘೋಷಕ ಸುಬ್ರಾಯ ಸಂಪಾಜೆ ಅವರು, "ಮಕ್ಕಳನ್ನು ನಾವು ಬೆಳೆಸುತ್ತೇವೆ. ಏಕಕಾಲದಲ್ಲಿ ಮಕ್ಕಳು ನಮ್ಮನ್ನೂ ಬೆಳೆಸುತ್ತಾರೆ. ಮಕ್ಕಳನ್ನು ಅವರವರ ಆಸಕ್ತಿಯ ಕ್ಷೇತ್ರದಲ್ಲಿ ತೊಡಗಿಸಿ ಬೆಳೆಸುವುದೇ ನಿಜವಾದ ಶಿಸ್ತು. ಮುಂದಿನ ದಿನಗಳಲ್ಲಿ ಹಾಡು ಹೇಳುವ ಕಾರ್ಯಕ್ರಮವನ್ನೂ ಸಮರ್ಥ ಕನ್ನಡಿಗರು ಬಳಗ ಆಯೋಜಿಸುವಂತಾಗಲಿ ಎಂದರು. 

  ಪೊಲೀಸ್ ವೃತ್ತ ನಿರೀಕ್ಷಕ ಚಂದ್ರಶೇಖರ್ ಅವರು ಮಾತನಾಡಿ, ಎಳೆಯ ಮಕ್ಕಳಲ್ಲಿ ಕನ್ನಡದ ಬಗ್ಗೆ ಪ್ರೀತಿ ಅಭಿಮಾನ ಬೆಳೆಸುತ್ತಿರುವ ಬಳಗದ ಕೆಲಸ ಪ್ರಶಂಸಾರ್ಹ ಎಂದರು. ಅವರು ತಮ್ಮ ಸಮಯೋಚಿತ ಹಾಡಿನ ಮೂಲಕ ಮಕ್ಕಳ ಗಮನ ಸೆಳೆದರು.

   ಡಾ. ಶಿಲ್ಪಾ ಸತೀಶ್ ಮಾತನಾಡಿ ಮನುಷ್ಯನ ಮೆದುಳಿನ ಬೆಳವಣಿಗೆಯ ಶೇ. ತೊಂಬತ್ತರಷ್ಟು ಭಾಗ ಆರು ವರ್ಷದ ಒಳಗೇ ಆಗುತ್ತದೆ. ಇಂತಹ ಕಥಾ ಕಮ್ಮಟಗಳು ಮಕ್ಕಳಲ್ಲಿ ಧನಾತ್ಮಕ ಚಿಂತನೆ ಮೂಡಿಸಲು ಸಹಕಾರಿ. ಹಿರಿಯರು ಮಕ್ಕಳಿಗೆ ಕಥೆ ಹೇಳುವ ರೂಢಿಯನ್ನು ಉಳಿಸಿಕೊಳ್ಳಬೇಕು ಎಂದರು.

 ಸಮಾರಂಭದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಸಮರ್ಥ ಕನ್ನಡಿಗರು ಸಂಸ್ಥೆಯ ಜಿಲ್ಲಾ ಸಂಚಾಲಕಿ ಜಯಲಕ್ಷಿ÷್ಮ ಅವರು ಮಾತನಾಡಿ ಮಕ್ಕಳಲ್ಲಿ ಕಲ್ಪನಾ ಶಕ್ತಿಯನ್ನು ಹೆಚ್ಚಿಸಿ, ಭಾಷಾ ಕೌಶಲ್ಯವನ್ನು ಬೆಳೆಸಿ, ಏಕಾಗ್ರತೆ ಮತ್ತು ನೆನಪಿನ ಶಕ್ತಿಯ ವೃದ್ಧಿಯೊಂದಿಗೆ ನೈತಿಕ ಮೌಲ್ಯಗಳನ್ನು ಬೆಳೆಸಲು ಕಥೆ ಹೇಳುವ ಮತ್ತು ಕಥೆ ಕೇಳುವ ಕಾರ್ಯಕ್ರಮ ಬಹಳ ಸಹಕಾರಿ. ಸಮರ್ಥ ಕನ್ನಡಿಗರು ಸಂಸ್ಥೆ ಪ್ರತಿ ವರ್ಷ ನಡೆಸುವ ನಿಮ್ಮ ಪ್ರತಿಭೆ ನಮ್ಮ ವೇದಿಕೆ ಕಾರ್ಯಕ್ರಮದಲ್ಲಿ ವಿಭಿನ್ನ ಕಾರ್ಯಕ್ರಮಗಳಿರುವುದರಿಂದ ಮಕ್ಕಳ ಕಥೆ ಹೇಳುವ ಸ್ಪರ್ಧೆಗೆ ವಿಶೇಷ ಆದ್ಯತೆ ನೀಡಲು ಸಮಯದ ಅಭಾವವಿರುವುದರಿಂದ ಪ್ರತ್ಯೇಕವಾಗಿ ಕಥೆ ಹೇಳುವ ಸ್ಪರ್ಧೆಯನ್ನು ಆಯೋಜಿಸಿರುವುದಾಗಿ ಹೇಳಿದರು.

   ಸಮಾರೋಪ ಸಮಾರಂಭ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ ಇಂತಹ ವಿಭಿನ್ನ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ ಸಾಹಿತ್ಯ ಶಕ್ತಿ ಹಾಗೂ ಕನ್ನಡ ಭಾಷೆಯ ಮೇಲೆ ಮಕ್ಕಳಿಗೆ ಹೆಚ್ಚು ಆಸಕ್ತಿ ವಹಿಸಲು ಸಹಕಾರಿಯಾಗುವುದಲ್ಲದೆ ಮಕ್ಕಳಲ್ಲಿ ಭಾವೈಕ್ಯದ ಬೀಜ ಬಿತ್ತಲು ಸಹಕಾರಿಯಾಗುವುದೆಂದು ಹೇಳಿದರು. 

ವಿರಾಜಪೇಟೆ ತಾಲ್ಲೂಕು ಜಾನಪದ ಪರಿಷತ್ತಿನ ಅಧ್ಯಕ್ಷ ನಾ ಕನ್ನಡಿಗ ಟೋಮಿ ತೋಮಸ್ ಮಾತನಾಡಿ ಅನೇಕ ವರುಷಗಳಿಂದ ಕೊಡಗಿನ ಸಮರ್ಥ ಕನ್ನಡಿಗರ ಸಂಘಟನೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ಗುರುತಿಸಿ ಪ್ರೋತ್ಸಾಹಿಸಿ ಸನ್ಮಾನಿಸುವ ಕಾರ್ಯಕ್ರಮವನ್ನು ಮಾಡಿಕೊಂಡು ಬರುತಿದೆ, ಇಂದು ಈ ಮಕ್ಕಳ ಪ್ರತಿಭೆಯನ್ನು ನೋಡಿ ನಿಜವಾಗಲೂ ಹೆಮ್ಮೆ ಮತ್ತು ಆಶ್ಚರ್ಯವೆನಿಸುತ್ತಿದೆ, ಯಾವುದೇ ಶುಲ್ಕವಿಲ್ಲದೆ ಕಾರ್ಯಕ್ರಮಗಳನ್ನು ಆಯೋಜಿಸಿ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಇದರ ಪ್ರಧಾನ ಸಂಚಾಲಕಿ ಜಯಲಕ್ಷ್ಮಿ ಅವರ ಆಸಕ್ತಿ ಹಾಗೂ ಶ್ರಮಕ್ಕೆ ಎಲ್ಲಾ ಪೋಷಕರ ಸಹಕಾರ ಅಗತ್ಯ ಎಂದು ಹೇಳಿದರು.

   ಮಕ್ಕಳೇ ನಿರೂಪಣೆ ಮಾಡುವ ಮೂಲಕ ತಮ್ಮ ವಾಕ್ಚಾತುರ್ಯವನ್ನು ಮಕ್ಕಳು ಪ್ರದರ್ಶಿಸಿದರು. ತೀರ್ಪುಗಾರರಾಗಿ ಲೇಖಕಿ ಸಹನಾ ಕಾಂತಬೈಲು, ರಾಧಿಕಾ ವಿಶ್ವನಾಥ್ ಹಾಗೂ ವಿಜಯಲಕ್ಷ್ಮಿ ಮತ್ತು ಶಶಿಕಿರಣ ಪಾಲ್ಗೊಂಡಿದ್ದರು. ಒಟ್ಟು ಎಪ್ಪತ್ತಾರು ಮಂದಿ ಪುಟಾಣಿಗಳು ಕಥೆ ಹೇಳುವ ಕಮ್ಮಟದಲ್ಲಿ ಪಾಲ್ಗೊಂಡಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0