ಮಾಲ್ದಾರೆ:ಮೇ19 ಹಾಗೂ ಮೇ20 ರಂದು ಮೂರನೇ ವರ್ಷದ ಜನಪರ ಪ್ರೀಮಿಯರ್ ಲೀಗ್

ಸಿದ್ದಾಪುರ:ಮಾಲ್ದಾರೆ ಜನಪರ ಕ್ರೀಡಾ ಮತ್ತು ಕಲಾ ಯುವಜನ ಸಂಘ(ರಿ)ಇವರ ಆಶ್ರಯದಲ್ಲಿ ಮೇ19 ಹಾಗೂ ಮೇ20ರಂದು ಜನಪರ ಪ್ರೀಮಿಯರ್ ಲೀಗ್-3 ಕ್ರಿಕೆಟ್ ಪಂದ್ಯಾಟವು ಮಾಲ್ದಾರೆ ಪ್ರೌಢ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಬಾವ ಮಾಲ್ದಾರೆ ತಿಳಿಸಿದ್ದಾರೆ.
ಗುರವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು ಜನಪರ ಸಂಘಟನೆಯು, ನಿರಂತರವಾಗಿ ಸಾಮಾಜಿಕ ಚಟುವಟಿಕೆ ಹಾಗೂ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಈ ವರ್ಷ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಮೂರನೇ ವರ್ಷದ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ ನಡೆಯಲಿದ್ದು ಪಂದ್ಯಾವಳಿಯ ಉದ್ಘಾಟನೆಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್ ಪೊನ್ನಣ್ಣ ರವರು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲತಿ, ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದು, ಸಮಾರೋಪ ಸಮಾರಂಭದ ದಿನ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಾವ ಮಾಹಿತಿ ನೀಡಿದ್ದಾರೆ.
ಸೋಮವಾರ ಉದ್ಘಾಟನೆ ಪಂದ್ಯವು ವಿರಾಜಪೇಟೆ ತಾಲ್ಲೂಕು ಪತ್ರಕರ್ತರ ಸಂಘ ಹಾಗೂ ಸಿದ್ದಾಪುರ ಪೊಲೀಸರ ನಡುವೆ ನಡೆಯಲಿದೆ. ಜನಪರ ಪ್ರೀಮಿಯರ್ ಲೀಗ್ ಪ್ರಶಸ್ತಿಗಾಗಿ ಹತ್ತು ತಂಡಗಳ ನಡುವೆ ಹಣಾಹಣಿ ನಡೆಯಲಿದೆ. ಮಾಲ್ದಾರೆ, ಚೆನ್ನಯ್ಯನ ಕೋಟೆ, ಪಾಲಿಬೆಟ್ಟ, ಗ್ರಾಮದ 100ಕ್ಕೂ ಹೆಚ್ಚು ಕ್ರಿಕೆಟಿಗರು ಈ ಪಂದ್ಯಾಟ ಭಾಗವಹಿಸಲಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಜನಪರ ಸಂಘಟನೆಯ ಕಾರ್ಯದರ್ಶಿ ವಿನಿಲ್, ಉಪಾಧ್ಯಕ್ಷ ಅಂತೋಣಿ ಇದ್ದರು.