ಗಾಂಧಿ ಜಯಂತಿ ಆಚರಣೆ ಹಿನ್ನೆಲೆ ‘ಬಾಪೂಜಿ ಪ್ರಬಂಧ ಸ್ಪರ್ಧೆ": ಸೆ.9 ರಂದು ಪ್ರಬಂಧ ಸ್ಪರ್ಧೆ ಏರ್ಪಡಿಸಲು ಜಿ.ಪಂ.ಸಿಇಒ ಸೂಚನೆ

ಗಾಂಧಿ ಜಯಂತಿ ಆಚರಣೆ ಹಿನ್ನೆಲೆ ‘ಬಾಪೂಜಿ ಪ್ರಬಂಧ ಸ್ಪರ್ಧೆ": ಸೆ.9 ರಂದು ಪ್ರಬಂಧ ಸ್ಪರ್ಧೆ ಏರ್ಪಡಿಸಲು ಜಿ.ಪಂ.ಸಿಇಒ ಸೂಚನೆ

ಮಡಿಕೇರಿ:-ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 156 ನೇ ಜಯಂತಿ ಪ್ರಯುಕ್ತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ‘ಬಾಪೂಜಿ ಪ್ರಬಂಧ ಸ್ಪರ್ಧೆ’ ಆಯೋಜಿಸಿದ್ದು, ಈ ಹಿನ್ನೆಲೆ ಪ್ರೌಢಶಾಲೆ, ಪದವಿ ಪೂರ್ವ, ಪದವಿ-ಸ್ನಾತಕೋತ್ತರ ಪದವಿ ಈ ಮೂರು ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್, 09 ರಂದು ಪ್ರಬಂಧ ಸ್ಪರ್ಧೆ ಏರ್ಪಡಿಸಿ, ಸೆಪ್ಟೆಂಬರ್, 10 ರಂದು ಸಂಜೆಯೊಳಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಸಲ್ಲಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಅವರು ಸೂಚಿಸಿದ್ದಾರೆ.

ನಗರದ ಜಿಲ್ಲಾ ಪಂಚಾಯಿತಿ ತಮ್ಮ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು ಸೆಪ್ಟೆಂಬರ್, 09 ರಂದು ಆಯಾಯ ಪ್ರೌಢಶಾಲೆ, ಕಾಲೇಜುಗಳಲ್ಲಿ ಅಥವಾ ತಾಲ್ಲೂಕು ಮಟ್ಟದಲ್ಲಿ ಪ್ರಬಂಧ ಬರೆಸಿ ಪ್ರಬಂಧವನ್ನು ಮುಖ್ಯೋಪಾಧ್ಯಾಯರು ಅಥವಾ ಪ್ರಾಂಶುಪಾಲರ ಮೂಲಕ ಕಳುಹಿಸಬೇಕು ಎಂದು ತಿಳಿಸಿದರು. ತಜ್ಞರ ಸಮಿತಿಯು ಸೆಪ್ಟೆಂಬರ್, 12 ರಂದು ಮೂರು ವಿಭಾಗದಲ್ಲಿ (ಪ್ರೌಢಶಾಲೆ, ಪದವಿ ಪೂರ್ವ, ಪದವಿ-ಸ್ನಾತಕೋತ್ತರ ಪದವಿ) ಆಯಾಯ ಹಂತದಲ್ಲಿ ಮೌಲ್ಯಮಾಪನ ನಡೆಯಲಿದೆ ಎಂದು ತಿಳಿಸಿದರು.

 ವಾರ್ತಾಧಿಕಾರಿ ಚಿನ್ನಸ್ವಾಮಿ ಮಾಹಿತಿ ನೀಡಿ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಸ್ವಚ್ಛತೆಯ ಪಾಠ-ಗಾಂಧೀಜಿಯವರ ಸಂದೇಶ, ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಗಾಂಧೀಜಿಯವರ ಪಾತ್ರ ಮತ್ತು ಗಾಂಧೀಜಿಯವರ ಸ್ವಾತಂತ್ರ್ಯದ ಕನಸು- ನನ್ನ ಕಲ್ಪನೆ ಈ ಮೂರು ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯ ಕುರಿತು 700 ರಿಂದ 800 ಪದಗಳು ಮೀರದಂತೆ ಪ್ರಬಂದ ಬರೆಯಬೇಕು ಎಂದು ತಿಳಿಸಿದರು. ಪದವಿ ಪೂರ್ವ ಶಿಕ್ಷಣ ವಿಭಾಗದ ವಿದ್ಯಾರ್ಥಿಗಳು ಅಸ್ಪೃಶತೆ ನಿವಾರಣೆಯಲ್ಲಿ ಗಾಂಧೀಜಿಯವರ ಹೋರಾಟ, ಇಂದಿನ ಸಮಾಜದಲ್ಲಿ ಸರ್ವೋದಯ ಮತ್ತು ಅಂತ್ಯೋದಯದ ಪ್ರಾಸಂಗಿಕತೆ ಅಥವಾ ಬದಲಾವಣೆ ನನ್ನಿಂದಲೇ ಆರಂಭ - ಗಾಂಧೀಜಿಯವರ ಪಾಠ ಈ ಮೂರು ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯ ಕುರಿತು 900 ರಿಂದ 1000 ಪದಗಳು ಮೀರದಂತೆ ಪ್ರಬಂಧ ಬರೆಯಬೇಕು ಎಂದು ಮಾಹಿತಿ ನೀಡಿದರು.

 ಹಾಗೆಯೇ ಪದವಿ/ ಸ್ನಾತಕೋತ್ತರ ಪದವಿ ವಿಭಾಗದ ವಿದ್ಯಾರ್ಥಿಗಳು ಗಾಂಧೀಜಿ ಕಂಡ ನ್ಯಾಯಸಮ್ಮತ ರಾಜಕೀಯ ವ್ಯವಸ್ಥೆ, ಗಾಂಧೀಜಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್-ತತ್ವಗಳ ಹೋಲಿಕೆ ಅಥವಾ ಮೌಲ್ಯಾಧಾರಿತ ನಾಯಕತ್ವ ಹಾಗೂ ನೈತಿಕ ರಾಜಕಾರಣ-ಯುವಕರಿಗೆ ಗಾಂಧೀಜಿಯವರ ಪಾಠ ಈ ಮೂರು ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯ ಕುರಿತು 1400 ರಿಂದ 1500 ಪದಗಳು ಮೀರದಂತೆ ಪ್ರಬಂಧ ಬರೆಯಬೇಕು ಎಂದು ಹೇಳಿದರು.

ಜಿಲ್ಲಾ ಮಟ್ಟದಲ್ಲಿ ವಿಭಾಗದಲ್ಲಿ ಪ್ರಥಮ ಬಹುಮಾನ ವಿಜೇತ ಪ್ರಬಂಧವನ್ನು ರಾಜ್ಯ ಮಟ್ಟದಲ್ಲಿ ಮರು ಮೌಲ್ಯಮಾಪನ ಮಾಡಿ ಫಲಿತಾಂಶ ಪ್ರಕಟಿಸಲಾಗುತ್ತದೆ. ಗಾಂಧೀಜಿ ವಿಚಾರ ತಜ್ಞರು, ಶಾಲಾ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಕಾಲೇಜು ವಿಶ್ವವಿದ್ಯಾನಿಲಯದ ಶಿಕ್ಷಕರು, ಪ್ರಾಧ್ಯಾಪಕರನ್ನು ಒಳಗೊಂಡ ಸಮಿತಿಯೊಂದಿಗೆ ಪರಿಶೀಲಿಸಿ ಮೌಲ್ಯಮಾಪನ ಮಾಡಿ ಅವುಗಳಲ್ಲಿ ಅತ್ಯುತ್ತಮ ಎನಿಸಿದ ಮೂರು ಪ್ರಬಂಧಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಹೇಳಿದರು. ಪ್ರತೀ ವಿಭಾಗದಲ್ಲಿನ ಅತ್ಯುತ್ತಮವಾದ ಮೂರು ಪ್ರಬಂಧಗಳಿಗೆ ಅಕ್ಟೋಬರ್, 02 ರಂದು ಜಿಲ್ಲಾ ಮಟ್ಟದ ಗಾಂಧೀ ಜಯಂತಿ ದಿನಾಚರಣೆ ಸಂದರ್ಭದಲ್ಲಿ ಬಹುಮಾನ ನೀಡಲಾಗುವುದು ಎಂದು ವಾರ್ತಾಧಿಕಾರಿ ತಿಳಿಸಿದರು.

 ಪ್ರೌಢಶಾಲಾ, ಪದವಿ ಪೂರ್ವ, ಪದವಿ/ ಸ್ನಾತಕೋತ್ತರ ಈ ಮೂರು ಪ್ರತ್ಯೇಕ ವಿಭಾಗದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಜಿಲ್ಲಾ ಮಟ್ಟದಲ್ಲಿ ಪ್ರಥಮ 3 ಸಾವಿರ ರೂ, ದ್ವಿತೀಯ 2 ಸಾವಿರ, ತೃತೀಯ 1 ಸಾವಿರ ರೂ. ಬಹುಮಾನ ನೀಡಲಾಗುತ್ತದೆ. ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನಕ್ಕೆ 31 ಸಾವಿರ, ದ್ವಿತೀಯ ಸ್ಥಾನಕ್ಕೆ 21 ಸಾವಿರ ಹಾಗೂ ತೃತೀಯ ಸ್ಥಾನಕ್ಕೆ 11 ಸಾವಿರ ರೂ. ಬಹುಮಾನ ನೀಡಲಾಗುತ್ತದೆ ಎಂದು ಹೇಳಿದರು. ಪ್ರಬಂಧ ರಚಿಸಲು ಮಾರ್ಗಸೂಚಿಗಳು ಪ್ರಬಂಧವು ಸಂಪೂರ್ಣವಾಗಿ ಸ್ವರಚಿತವಾಗಿರಬೇಕು. ಸ್ಪರ್ಧೆ ಏರ್ಪಡಿಸುವ ಸ್ಥಳದಲ್ಲಿಯೇ ಶುದ್ಧ ಕೈಬರಹದಲ್ಲಿ ಪ್ರಬಂಧ ಬರೆಯಬೇಕು. ಆಕರವಾಗಿ ಬಳಸಿದ ಪರಾಮರ್ಶನ, ಆಧಾರ ಗ್ರಂಥಗಳ ವಿವರಗಳನ್ನು ಪ್ರಬಂಧದ ಕೊನೆಯಲ್ಲಿ ನಮೂದಿಸಬೇಕು.

ಆದರೆ, ಸ್ಪರ್ಧೆ ಏರ್ಪಡಿಸುವ ಸ್ಥಳದಲ್ಲಿ ಪರಾಮರ್ಶನ/ ಆಧಾರ ಗ್ರಂಥಗಳು / ಮೊಬೈಲ್‍ಗಳ ಬಳಕೆಗೆ ಅವಕಾಶ ಇರುವುದಿಲ್ಲ. ಪ್ರಬಂಧಕಾರರ ಹೆಸರು ವಿಳಾಸ ನಮೂದಿಸಿರಬೇಕು. ಪ್ರಬಂದವು ಈ ಮೊದಲು ಎಲ್ಲಿಯೂ ಪ್ರಕಟವಾಗಿರಬಾರದು. ಆಯ್ದ ಪ್ರಬಂಧಗಳ ಪ್ರಕಟಣೆಯ ಹಕ್ಕನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊಂದಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಆಚರಿಸುತ್ತಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 156ನೇ ಜಯಂತಿಯ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿ ಹಾಗೂ ಯುವಜನರಲ್ಲಿ ಮಹಾತ್ಮ ಗಾಂಧೀಜಿಯವರ ಬದುಕು, ಸ್ವಾತಂತ್ರ್ಯ ಚಳುವಳಿ, ಸರಳತೆ, ಅಹಿಂಸಾ ಮಾರ್ಗ, ಸಹಬಾಳ್ವೆ, ಅಸ್ಪೃಶ್ಯತೆ ನಿವಾರಣೆಗಾಗಿ ನಡೆಸಿದ ಪ್ರಯೋಗಗಳು ಇತ್ಯಾದಿ ವಿಚಾರಗಳ ಬಗ್ಗೆ ಪ್ರೌಢಶಾಲೆ ಪದವಿ ಪೂರ್ವ ಹಾಗೂ ಪದವಿ / ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬಾಪೂಜಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದರು. ಶಾಲಾ ಶಿಕ್ಷಣ ಇಲಾಖೆಯ ಡಿವೈಪಿಸಿ ಕೃಷ್ಣಪ್ಪ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಾಂಶುಪಾಲರಾದ ಶ್ರೀಲತಾ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಅಧ್ಯಾಪಕರಾದ ದಿವ್ಯ, ಇತರರು ಇದ್ದರು.