ಬೂಕರ್ ಪ್ರಶಸ್ತಿ ಪಡೆದ ಲೇಖಕಿ ದೀಪಾಭಾಸ್ತಿಗೆ ಸರ್ಕಾರದಿಂದ ಸಕಲ ನೆರವು:ಡಾ.ಮಂತರ್ ಗೌಡ : ವಿಜೇತ ಕೃತಿ ‘ಹಾರ್ಟ್ ಲ್ಯಾಂಪ್’ ಗೌರವಪೂರ್ವಕವಾಗಿ ಸ್ವೀಕರಿಸಿದ ಡಾ ಮಂತರ್
ಮಡಿಕೇರಿ:ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನರಾದ ನಗರದ ಲೇಖಕಿ ದೀಪಾಭಾಸ್ತಿಯವರ ಸಾಹಿತ್ಯ ಸಾಧನೆ ಕೊಡಗಿನ ಜನತೆಗೇ ಹೆಮ್ಮೆ ತಂದಿದ್ದು, ಭವಿಷ್ಯದಲ್ಲಿಯೂ ಲೇಖಕಿಯ ಯಾವುದೇ ಸಾಹಿತ್ಯ ಪರ ಚಟುವಟಿಕೆಗಳಿಗೆ ಸರ್ಕಾರದ ವತಿಯಿಂದ ಅಗತ್ಯ ನೆರವು ನೀಡುವುದಾಗಿ ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ಭರವಸೆ ನೀಡಿದ್ದಾರೆ. ಬೂಕರ್ ಪ್ರಶಸ್ತಿಯು ಅನುವಾದ ಸಾಹಿತ್ಯದ ನಿಜವಾದ ಶಕ್ತಿಯನ್ನು ನಿರೂಪಿಸಿದೆ ಎಂದು ಶಾಸಕರು ಹೇಳಿದರು.
ನಗರದಲ್ಲಿರುವ ದೀಪಾಭಾಸ್ತಿ ಅವರ ಮನೆಗೆ ತೆರಳಿದ ಡಾ.ಮಂತರ್ ಗೌಡ, ಕಾಫಿ ಹಾರದ ಮೂಲಕ ಗೌರವ ಸನ್ಮಾನವನ್ನು ನೆರವೇರಿಸಿದರಲ್ಲದೇ ದೀಪಾಭಾಸ್ತಿ ಅವರು ಈ ಸಂದರ್ಭ ನೀಡಿದ ಪ್ರಶಸ್ತಿ ವಿಜೇತ ಕೃತಿ ‘ಹಾರ್ಟ್ ಲ್ಯಾಂಪ್’ ನ್ನು ಗೌರವಪೂರ್ವಕವಾಗಿ ಸ್ವೀಕರಿಸಿದರು.
ದೀಪಾಭಾಸ್ತಿಯವರ ಸಾಹಿತ್ಯ ಸಾಧನೆಯನ್ನು ಶ್ಲಾಘಿಸಿದ ಶಾಸಕ ಡಾ.ಮಂತರ್ ಗೌಡ, ಬೂಕರ್ ಪ್ರಶಸ್ತಿಯಂತಹ ಜಗತ್ತಿನಲ್ಲಿ ಸಾಹಿತ್ಯಕ್ಕಾಗಿನ ಶ್ರೇಷ್ಟ ಪ್ರಶಸ್ತಿಯನ್ನು ಮಡಿಕೇರಿಯ ಲೇಖಕಿ ಪಡೆದುಕೊಳ್ಳುವ ಮೂಲಕ ಕೊಡಗು, ಕರ್ನಾಟಕ ಮಾತ್ರವೇ ಅಲ್ಲದೇ ಭಾರತವೇ ಮಡಿಕೇರಿಯತ್ತ ಗಮನ ಹರಿಸುವಂತೆ ದೀಪಾಭಾಸ್ತಿ ಮಾಡಿದ್ದಾರೆ. ಈ ಸಾಹಿತ್ಯ ಸಾಧನೆ ಜಗತ್ತಿನ ಸಾಹಿತ್ಯ ಲೋಕದ ಇತಿಹಾಸದಲ್ಲಿ ಅಚ್ಚಳಿಯದೇ ದಾಖಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ವತಿಯಿಂದ ಎಲ್ಲಾ ರೀತಿಯ ನೆರವು ನೀಡಲು ಸಿದ್ದವಿರುವುದಾಗಿ ತಿಳಿಸಿದರು. ಬಾನುಮುಷ್ತಾಕ್ ಅವರ ಎದೆಯ ಹಣತೆ ಕೃತಿಯನ್ನು ಹಾರ್ಟ್ ಲ್ಯಾಂಪ್ ಎಂಬ ಆಂಗ್ಲ ಭಾಷೆಗೆ ಕೃತಿಗೆ ಅನುವಾದಿಸಲು ಪಟ್ಟಿರಬಹುದಾದ ಶ್ರಮ ಊಹೆಗೂ ನಿಲುಕದ್ದು. ಮಡಿಕೇರಿಯ ಪರಿಸರದ ನಡುವಿನ ಮನೆಯಲ್ಲಿಯೇ ಇಂತಹ ಪ್ರಯತ್ನವನ್ನು ದೀಪಾಭಾಸ್ತಿ ಮಾಡಿರುವುದು ಹೆಮ್ಮೆ ಪಡುವ ವಿಚಾರ, ಮಡಿಕೇರಿಯ ನಿಸರ್ಗ ಕೂಡ ಇಂತಹ ಸಾಹಿತ್ಯಕ್ಕೆ ಸ್ಪೂರ್ತಿಯಾಗಿರುವುದು ಗಮನಾರ್ಹ ಎಂದು ಡಾ.ಮಂತರ್ ಗೌಡ ಹೇಳಿದರು.
ಸಾಹಿತ್ಯ ಲೋಕದಲ್ಲಿ ಅನುವಾದಿತ ಕೃತಿಯ ನಿಜವಾದ ಶಕ್ತಿಯೇನೆಂದು ಹಾರ್ಟ್ ಲ್ಯಾಂಪ್ ನಿರೂಪಿಸಿದೆ ಎಂದು ನುಡಿದರಲ್ಲದೇ, ವಿದ್ಯಾರ್ಥಿಗಳು ಮತ್ತು ಯುವಪೀಳಿಗೆಗೆ ದೀಪಾಭಾಸ್ತಿ ಆದರ್ಶವಾಗಿದ್ದು ಈ ನಿಟ್ಟಿನಲ್ಲಿ ಕೊಡಗಿನ ವಿವಿಧ ಶಿಕ್ಷಣ ಸಂಸ್ಥೆಗಳ ಆಸಕ್ತ ವಿದ್ಯಾರ್ಥಿಗಳೊಂದಿಗೆ ಲೇಖಕಿಯ ಸಂವಾದ ಏರ್ಪಡಿಸಿ, ಸಾಹಿತ್ಯ, ಲೇಖನ ಬರೆಯುವ ನಿಟ್ಟಿನಲ್ಲಿ ಪ್ರೋತ್ಸಾಹ ನೀಡುವ ಪ್ರಯತ್ನ ಮಾಡಲಾಗುತ್ತದೆ ಎಂದು ಮಂತರ್ ಗೌಡ ಹೇಳಿದರು.
ದೀಪಾಭಾಸ್ತಿಯ ಬರವಣಿಗೆಗೆ ಬಾಲ್ಯದಿಂದಲೇ ಪ್ರೋತ್ಸಾಹ ನೀಡಿದ ಪೋಷಕರನ್ನೂ ಡಾ.ಮಂತರ್ ಗೌಡ ಈ ಸಂದರ್ಭ ಅಭಿನಂದಿಸಿದರು. ಬೆಂಗಳೂರಿನಲ್ಲಿ ಸೋಮವಾರ ಸರ್ಕಾರದಿಂದ ಆಯೋಜಿಸಿದ ಅಭಿನಂದನಾ ಕಾರ್ಯಕ್ರಮದಲ್ಲಿ ಮಡಿಕೇರಿ ಶಾಸಕನಾಗಿ ತಾನೂ ಪಾಲ್ಗೊಂಡು ದೀಪಾಭಾಸ್ತಿ ಮತ್ತು ಭಾನುಮುಷ್ತಾಕ್ ಅವರಿಗೆ ಗೌರವ ಸಲ್ಲಿಸುವುದಾಗಿಯೂ ಮಂತರ್ ಗೌಡ ಹೇಳಿದರು.
ಈ ಸಂದರ್ಭ ಮಾತನಾಡಿದ ದೀಪಾಭಾಸ್ತಿ, ತಾನು ಭಾನುಮುಷ್ತಾಕ್ ಅವರು ಬರೆದ ಎದೆಯ ಹಣತೆ ಸೇರಿದಂತೆ ಇತರ ಕೃತಿಗಳಲ್ಲಿನ 12 ಆಯ್ದ ಕಥೆಗಳನ್ನು ಹಾರ್ಟ್ ಲ್ಯಾಂಪ್ ಮೂಲಕ ಅನುವಾದಿಸಿದ್ದು, ಬೂಕರ್ ಪ್ರಶಸ್ತಿಯು ಅನುವಾದಕ್ಕಾಗಿ ಸಂದದ್ದು ಸಂತೋಷ ತಂದಿದೆ ಎಂದರು. ಸುಮಾರು 3 ವರ್ಷಗಳ ಅವಿರತ ಶ್ರಮ ಈ ಸಾಧನೆಯ ಹಿಂದಿದೆ ಎಂದು ಹೇಳಿದ ದೀಪಾಭಾಸ್ತಿ, ಸದ್ಯದಲ್ಲಿಯೇ ಲಂಡನ್‍ಗೆ ಮತ್ತೆ ತೆರಳಿ ಅಲ್ಲಿಂದ ಜಗತ್ತಿನ ಬೇರೆ ಬೇರೆ ದೇಶಗಳಿಗೆ ಸಂಚರಿಸಿ ಅಲ್ಲಿ ‘ಹಾರ್ಟ್ ಲ್ಯಾಂಪ್’ ಕೃತಿಯ ಸಂವಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿರುವುದಾಗಿ ತಿಳಿಸಿದರು.
ಮಡಿಕೇರಿಯ ನಿಸರ್ಗ ರಮಣೀಯತೆಯಿಂದಾಗಿ ಪತಿಯೊಂದಿಗೆ ತಾನು ಬೆಂಗಳೂರಿನಿಂದ ಇಲ್ಲಿಗೇ ಬಂದು ನೆಲಸಿದ್ದಾಗಿ ಹೇಳಿದ ದೀಪಾಭಾಸ್ತಿ, ಕೊಡಗಿನ ಪ್ರಕೃತಿ ಸಿರಿ ಲೇಖಕರಿಗೆ ನಿಜವಾದ ಸ್ಪೂರ್ತಿಯಾಗಿದೆ ಎಂದು ಹರ್ಷದಿಂದ ನುಡಿದರು.ದೀಪಾಭಾಸ್ತಿ ಪತಿ ಚೆಟ್ಟೀರ ನಾಣಯ್ಯ, ಪೋಷಕರಾದ ಪ್ರಕಾಶ್ ಭಾಸ್ತಿ, ಸುಧಾಭಾಸ್ತಿ, ಪತ್ರಕರ್ತ ಅನಿಲ್ ಹೆಚ್.ಟಿ. ಈ ಸಂದರ್ಭ ಹಾಜರಿದ್ದರು.