ವಿಶ್ವ ಯೋಗ ದಿನಾಚರಣೆ : ಸಿಂಚನಾಳಿಂದ ಡಿಂಬಾಸನ ಯೋಗದ ವಿಶ್ವದಾಖಲೆ ಕಾಯ೯ಕ್ರಮ
ಮಡಿಕೇರಿ: ಕೊಡಗು ಪತ್ರಕತ೯ರ ಸಂಘ (ರಿ) ಮತ್ತು ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ಕೊಡಗಿನ ಯುವ ಯೋಗಪಟು ಮದೆನಾಡಿನ ಸಿಂಚನಾಳ ಯೋಗ ಪ್ರದಶ೯ನವನ್ನು ಗಿನ್ನೀಸ್ ವಿಶ್ವದಾಖಲೆಗೆ ಸೇಪ೯ಡೆ ಮಾಡುವ ಕಾಯ೯ಕ್ರಮ ಜೂನ್ 21 ರಂದು ಶನಿವಾರ ವಿಶ್ವಯೋಗ ದಿನಾಚರಣೆಯಂದು ಮಡಿಕೇರಿಯಲ್ಲಿ ಆಯೋಜಿತವಾಗಿದೆ.
ಮಡಿಕೇರಿಯ ಪತ್ರಿಕಾಭವನ ಸಭಾಂಗಣದಲ್ಲಿ ಜೂನ್ 21 ರಂದು ಶನಿವಾರ ಸಂಜೆ 6 ಗಂಟೆಗೆ ಮದೆನಾಡಿನ ಬಿಜಿಎಸ್ ಪಬ್ಲಿಕ್ ಶಾಲೆಯ 6 ನೇ ತರಗತಿ ವಿದ್ಯಾಥಿ೯ನಿ ಸಿಂಚನಾಳ ಯೋಗಪ್ರದಶ೯ನವನ್ನು ಗಿನ್ನೀಸ್ ದಾಖಲೆಗೆ ಸೇಪ೯ಡೆಗೊಳಿಸುವ ನಿಟ್ಟಿನಲ್ಲಿ ಸಿಂಚನಾಳಿಂದ ಡಿಂಬಾಸನ ಯೋಗ ಆಯೋಜಿಸಲಾಗಿದೆ. 30 ನಿಮಿಷ 5 ಸೆಕೆಂಡ್ ಗಳ ಕಾಲ ಸಿಂಚನಾ ಡಿಂಬಾಸನ ಯೋಗ ಭಂಗಿಯಲ್ಲಿರುವ ಮೂಲಕ ಗಿನ್ನೀಸ್ ವಿಶ್ವದಾಖಲೆ ಮಾಡಲಿದ್ದು ಪರಿಣಿತರು ಈ ಸಂಬಂಧಿತ ದಾಖಲೆ ಮಾಡಿಕೊಳ್ಳಲಿದ್ದಾರೆ. ಈ ಮೂಲಕ ಸಿಂಚನಾಳ ಯೋಗ ಪ್ರತಿಭೆಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಪತ್ರಕತ೯ರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.