25ನೇ ದಿನಕ್ಕೆ ಕಾಲಿಟ್ಟ ಅಮ್ಮತ್ತಿ ನಿವೇಶನ ರಹಿತರ ಅಹೋರಾತ್ರಿ ಧರಣಿ: 24ದಿನಗಳ ಬಳಿಕ ಸ್ಥಳಕ್ಕೆ ಬಂದ ವಿರಾಜಪೇಟೆ ತಹಶೀಲ್ದಾರ್

25ನೇ ದಿನಕ್ಕೆ ಕಾಲಿಟ್ಟ ಅಮ್ಮತ್ತಿ ನಿವೇಶನ ರಹಿತರ ಅಹೋರಾತ್ರಿ ಧರಣಿ:  24ದಿನಗಳ ಬಳಿಕ ಸ್ಥಳಕ್ಕೆ ಬಂದ ವಿರಾಜಪೇಟೆ ತಹಶೀಲ್ದಾರ್
25ನೇ ದಿನಕ್ಕೆ ಕಾಲಿಟ್ಟ ಅಮ್ಮತ್ತಿ ನಿವೇಶನ ರಹಿತರ ಅಹೋರಾತ್ರಿ ಧರಣಿ:  24ದಿನಗಳ ಬಳಿಕ ಸ್ಥಳಕ್ಕೆ ಬಂದ ವಿರಾಜಪೇಟೆ ತಹಶೀಲ್ದಾರ್

ಅಮ್ಮತ್ತಿ :ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿಯ ಪೈಸಾರಿ ಜಾಗದಲ್ಲಿದ್ದ ತಾತ್ಕಾಲಿಕ ಗುಡಿಸಲು ತೆರವುಗೊಳಿಸಿರುವುದನ್ನು ವಿರೋಧಿಸಿ, ಸ್ಥಳೀಯ ನಾಡಕಛೇರಿ ಎದುರು ನಡೆಯುತ್ತಿರುವ ಅಹೋರಾತ್ರಿ ಪ್ರತಿಭಟನೆ 25ನೇ ದಿನಕ್ಕೆ ಕಾಲಿಟ್ಟಿದೆ‌. ಅಮ್ಮತ್ತಿ ಬಳಿಯ ಪೈಸಾರಿ ಜಾಗದಲ್ಲಿ ತಾತ್ಕಾಲಿಕ ಗುಡಿಸಲು ಕಟ್ಟಿ ಶಾಶ್ವತ ಸೂರಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ವಿರಾಜಪೇಟೆ ಉಪ ತಹಶೀಲ್ದಾರ್ ನೇತೃತ್ವದ ಕಂದಾಯ ಇಲಾಖೆ ಸಿಬ್ಬಂದಿಗಳು ದಿಢೀರ್ ದಾಳಿ ನಡೆಸಿ ಗುಡಿಸಲು ತೆರವು ಕಾರ್ಯಚರಣೆ ಮಾಡಿ ಸ್ಥಳದಲ್ಲಿದ್ದ ವಸ್ತುಗಳನ್ನು ವಶಕ್ಕೆ ಪಡೆದು ಕೊಂಡೊಯ್ದ ಘಟನೆ ಖಂಡಿಸಿ, ಉಪತಹಶೀಲ್ದಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಅಮ್ಮತ್ತಿ ನಾಡಕಚೇರಿ ಎದುರು ಆಹೋರಾತ್ರಿ ಪ್ರತಿಭಟನೆ ಮುಂದುವರೆಸಿದ್ದಾರೆ. ಸ್ವಂತ ಸೂರಿಲ್ಲದೆ ಅತಂತ್ರ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿರುವ ಅಮ್ಮತ್ತಿ, ಕಾರ್ಮಾಡು ಪಂಚಾಯಿತಿ ವ್ಯಾಪ್ತಿಯ ಆದಿವಾಸಿ ಹಾಗೂ ದಲಿತ ಕುಟುಂಬಗಳು ಗಾಳಿ, ಮಳೆ, ಚಳಿಯನ್ನು ಲೆಕ್ಕಿಸದೇ ಅಹೋರಾತ್ರಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಪುಟ್ಟ ಮಕ್ಕಳೊಂದಿಗೆ ವಯೋವೃದ್ಧರು ಸೇರಿ ಮಹಿಳೆಯರು, ಪುರುಷರು ತಾತ್ಕಾಲಿಕ ಶೆಡ್ ಅನ್ನು ನಿರ್ಮಿಸಿ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದು, ಶಾಶ್ವತ ನಿವೇಶನ ವ್ಯವಸ್ಥೆ ಕಲ್ಪಿಸುವವರೆಗೂ ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾನಿರತರು ಪಟ್ಟು ಹಿಡಿದಿದ್ದಾರೆ. 

ವಿರಾಜಪೇಟೆ ತಾಲೂಕು ತಹಸಿಲ್ದಾರ್ ಅನಂತ್ ಶಂಕರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾನಿರತರ ಬೇಡಿಕೆಗಳನ್ನು ಆಲಿಸಿದರು. ಈ ಸಂದರ್ಭ ತಮ್ಮ ಬೇಡಿಕೆಗಳ ಬಗ್ಗೆ ಧರಣಿನಿರತರು ತಹಶೀಲ್ದಾರ್ ಅವರ ಗಮನಕ್ಕೆ ತಂದರು.

 ಈ ಸಂದರ್ಭ ಮಾತನಾಡಿದ ಭಾರತ ಕಮ್ಯುನಿಸ್ಟ್ ಮಾರ್ಕ್ಸ್ ವಾದಿ ಮಾಸ್ ಲೈನ್ ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಡಿ.ಎಸ್.ನಿರ್ವಾಣಪ್ಪ ಅವರು, ಈ ತಾಲೂಕಿನಲ್ಲಿ ಬಡವರಿಗೆ ಹಂಚಲು ಭೂಮಿ ಇದ್ದು, ಇರುವ ಭೂಮಿ ಉಳ್ಳವರ ಕೈಯಲ್ಲಿದೆ ಈ ವಿಚಾರದಲ್ಲಿ ತಾಲೂಕು ತಹಶೀಲ್ದಾರರು ಬಹಳ ಅಸಹಾಯಕತೆ ತೋರುತ್ತಿದ್ದಾರೆ. ಉಳ್ಳವರ ಕೈಯಿಂದ ಸರ್ಕಾರಿ ಭೂಮಿಯನ್ನು ಬಡವರಿಗೆ ಬಿಡಿಸಿಕೊಡಲು ಕಾನೂನಿನ ಅರಿವಿದ್ದರೂ ಈ ಅಧಿಕಾರಿಗಳು ಭಯಪಡುತ್ತಿದ್ದಾರೆ. ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ಸೂಚಿಸುತ್ತಿದ್ದು, ರಾಜ್ಯಮಟ್ಟದಲ್ಲಿನ ಹೋರಾಟಗಾರರನ್ನು ಇಲ್ಲಿಗೆ ಕರೆತರಲಾಗುವುದು ಈ ಹೋರಾಟ ಇನ್ನಷ್ಟು ತಿವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.

ಬಹುಜನ ಕಾರ್ಮಿಕ ಸಂಘಟನೆಯ ಜಿಲ್ಲಾಧ್ಯಕ್ಷ ಕೆ. ಮೊಣ್ಣಪ್ಪ ಅವರು ಮಾತನಾಡಿ, ತಹಶೀಲ್ದಾರ್‌ರವರಿಂದ ಈ ಸಮಸ್ಯೆ ಬಗೆಹರಿಯುವ ವಿಶ್ವಾಸವಿಲ್ಲ. ಕಂದಾಯ ಇಲಾಖೆಯವರ ನಿರ್ಲಕ್ಷ ಎದ್ದು ಕಾಣುತ್ತಿದೆ. ಕಂದಾಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಸ್ಥಳದಲ್ಲಿಯೇ ಬಂದು ಪರಿಹಾರ ನೀಡಬೇಕು. ಮುಂದಿನ ದಿನಗಳಲ್ಲಿ ಶಾಲೆ ಕಾಲೇಜುಗಳು ಆರಂಭವಾಗುತ್ತಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಗುವುದರಿಂದ ಶಾಸಕರು ಇತ್ತ ಗಮನಹರಿಸಿ ಈ ಸಮಸ್ಯೆಯನ್ನು ಪರಿಹರಿಸಿ ಕೊಡಬೇಕು ಎಂದು ಒತ್ತಾಯಿಸಿದರಲ್ಲದೇ, ಪ್ರತಿಭಟನೆಯನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲವೆoದು ಎಚ್ಚರಿಸಿದರು.

ವಿರಾಜಪೇಟೆ ತಾಲೂಕು ತಹಶೀಲ್ದಾರ್ ಅನಂತ ಶಂಕರ್ ಅವರು ಮಾತನಾಡಿ, ಈಗಾಗಲೇ 18 ಸರ್ವೇ ನಂಬರ್ ಗಳನ್ನು ಗುರುತಿಸಿದ್ದು, ಈ ಸ್ಥಳಗಳಲ್ಲಿ ಯೋಗ್ಯವಾದ ಜಾಗವನ್ನು ಗುರುತಿಸಿ ಆರು ತಿಂಗಳ ಒಳಗೆ ನಿವೇಶನ ಕಲ್ಪಿಸುವುದಾಗಿ ಭರವಸೆ ನೀಡಲಾಗಿದೆ. ಆದರೆ ಈ ಕ್ಷಣವೇ ಜಾಗಗಳನ್ನು ಗುರುತಿಸಿ ಎಂದು ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದು, ಯಾವುದೇ ಹಕ್ಕುಪತ್ರಗಳಿಲ್ಲದೆ ನಿವೇಶನ ನೀಡಲು ಸಾಧ್ಯವಿಲ್ಲ ಈ ಕುರಿತು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಈ ಸಂದರ್ಭ ಸಿ.ಪಿ.ಐ.ಎಂ.ಎಲ್. ರಾಜ್ಯ ಕಾರ್ಯದರ್ಶಿ ಪ್ರಕಾಶ್, ಬಹುಜನ ಕಾರ್ಮಿಕ ಸಂಘಟನೆಯ ಪದಾಧಿಕಾರಿ ಕಿರಣ್ ಜಗದೀಶ್, ಪೆಗೊಲ್ಲಿ ಹೋರಾಟ ಸಮಿತಿಯ ಸದಸ್ಯರದ ಕುಮಾರಿ ಮತ್ತು ಸುಜಾತ, ಅಮ್ಮತ್ತಿ ಹೋರಾಟ ಸಮಿತಿಯ ಉಸ್ತುವಾರಿ ಮಾದೇಶ್, ಕಾರ್ಯದರ್ಶಿ ಹೊನ್ನಪ್ಪ, ಮತ್ತೆ ಹೋರಾಟ ಸಮಿತಿಯ ಅಧ್ಯಕ್ಷ ಪಾಪಣ್ಣ, ಕೊಡಗು ಜಿಲ್ಲಾ ಸಮಿತಿ ಸದಸ್ಯ ಎಚ್. ಜೆ. ಪ್ರಕಾಶ್, ಅಮ್ಮತ್ತಿ ಹೋಬಳಿಯ ಆರ್.ಐ ಅನಿಲ್ ಕುಮಾರ್ ಹಾಜರಿದ್ದರು.

ವರದಿ:ಚೆಪ್ಪುಡಿರ ರೋಷನ್, ಪೊನ್ನಂಪೇಟೆ