ಜಿಲ್ಲೆಯ 201 ವಿಕಲಚೇತನರಿಗೆ 20 ಲಕ್ಷ ರೂ.ವೆಚ್ಚದ 344 ಉಪಕರಣ ವಿತರಣೆ: ವಿಕಲಚೇತನರಿಗೆ ಸರ್ಕಾರದಿಂದ ಹಲವು ಸೌಲಭ್ಯ: ಯದುವೀರ್ ಒಡೆಯರ್

ಮಡಿಕೇರಿ:-ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ, ವಿಕಲಚೇತನರ ಇಲಾಖೆ ವತಿಯಿಂದ ‘ಸಾಮಾಜಿಕ ಆಧಾರಿತ ಸಿವಿಲ್’ ಯೋಜನೆಯಲ್ಲಿ ದಿವ್ಯಾಂಗರಿಗೆ ಸಾಧನ ಸಲಕರಣೆಗಳನ್ನು ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮಂಗಳವಾರ ವಿತರಿಸಿದರು.
ನಗರದ ರೆಡ್‍ಕ್ರಾಸ್ ಭವನದಲ್ಲಿ ವಿಕಲಚೇತನರಿಗೆ ಸಾಧನ ಸಲಕರಣೆಗಳನ್ನು ವಿತರಿಸಿ ಮಾತನಾಡಿದ ಸಂಸದರು ಜಿಲ್ಲೆಯ 201 ವಿಕಲಚೇತನರಿಗೆ 20 ಲಕ್ಷ ರೂ.ವೆಚ್ಚದ 344 ಸಾಧನ ಸಲಕರಣೆ ವಿತರಿಸಲಾಗುತ್ತದೆ ಎಂದು ತಿಳಿಸಿದರು. ಜೀವನದಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿ ಅವಲಂಬಿತರಾಗಿದ್ದಾರೆ. ಆ ನಿಟ್ಟಿನಲ್ಲಿ ವಿಕಲಚೇತನರಿಗೆ ಇನ್ನೂ ಹೆಚ್ಚಿನ ಅವಕಾಶ ನೀಡಬೇಕಿದೆ. ಆ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಸಾಧನ ಉಪಕರಣ ಕಲ್ಪಿಸುತ್ತಿದೆ ಎಂದು ತಿಳಿಸಿದರು.
ರಾಷ್ಟ್ರದ ಅಭಿವೃದ್ಧಿಗೆ ವಿಕಲಚೇತನರು ಸಹ ಹಲವು ಕೊಡುಗೆ ನೀಡಿದ್ದು, ವಿಕಲಚೇತನರು ಇತರರಂತೆ ಬದುಕು ನಡೆಸುವಂತಾಗಲು ಸರ್ಕಾರ ಹಲವು ಸೌಲಭ್ಯ ನೀಡುತ್ತಿದೆ ಎಂದು ಸಂಸದರು ನುಡಿದರು. ಭಾರತ ಬಲಿಷ್ಠ ಹಾಗೂ ಆದರ್ಶ ಸಮಾಜ ನಿರ್ಮಾಣ ಮಾಡಲು ಎಲ್ಲರ ಕೊಡುಗೆ ಅಗತ್ಯ. ಆ ನಿಟ್ಟಿನಲ್ಲಿ ಜವಾಬ್ದಾರಿಯುತ ಸಮಾಜ ನಿರ್ಮಾಣದಲ್ಲಿ ವಿಕಲಚೇತನರಿಗೆ ಸಾಧ್ಯವಾದಷ್ಟು ಸಹಕಾರ ನೀಡುವಂತಾಗಬೇಕು ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿಕಸಿತ ಭಾರತದಡಿ ಸಮಗ್ರ ಸಂಪೂರ್ಣ ಅಭಿವೃದ್ಧಿ ಆಗಬೇಕಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರ ಪಾತ್ರವು ಪ್ರಮುಖವಾಗಿದೆ. ನವ ಭಾರತ ನಿರ್ಮಾಣಕ್ಕೆ ಎಲ್ಲರ ಕೊಡುಗೆ ಅಗತ್ಯ ಎಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಒತ್ತಿ ಹೇಳಿದರು.
ವಿಧಾನಸಭೆಯ ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಅವರು ಮಾತನಾಡಿ ವಿಕಲಚೇತನರಿಗಾಗಿ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಆ ನಿಟ್ಟಿನಲ್ಲಿ ಸ್ವಾಭಿಮಾನಿ ಮತ್ತು ಸ್ವಾವಲಂಬಿ ಬದುಕು ನಡೆಸಲು ಹಲವು ಕಾರ್ಯಕ್ರಮ ಜಾರಿಗೊಳಿಸಿದೆ ಎಂದರು. 2047 ರೊಳಗೆ ವಿಕಸಿತ ಭಾರತ ಆಗಬೇಕು ಎಂಬ ದೃಷ್ಟಿಯಿಂದ ಸಮಾಜದ ಕಟ್ಟಕಡೆಯವರನ್ನು ಗುರುತಿಸಿ ವಿಕಲಚೇತನರು ಸೇರಿದಂತೆ ಎಲ್ಲಾ ಜನ ಸಾಮಾನ್ಯರಿಗೂ ಹಲವು ಕಾರ್ಯಕ್ರಮ ತಲುಪಿಸಲು ಶ್ರಮಿಸಲಾಗುತ್ತಿದೆ ಎಂದು ಹೇಳಿದರು.
ವಿಕಲಚೇತನರು ಸಮಾಜದಲ್ಲಿ ಸತ್ಪ್ರಜೆಗಳಾಗಿ ಬದುಕುವಂತಾಗಬೇಕು. ಸರ್ಕಾರದ ಸೌಲಭ್ಯಗಳನ್ನು ಪಡೆದು ಎಲ್ಲರಂತೆ ಬದುಕು ನಡೆಸುವಂತಾಗಬೇಕು ಎಂದು ಕೆ.ಜಿ.ಬೋಪಯ್ಯ ಅವರು ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ತಿಪ್ಪಣ್ಣ ಸಿರಸಗಿ ಅವರು ಮಾತನಾಡಿ ವಿಕಲತೆ ಶಾಪವಲ್ಲ. ಆದರೆ ಅದನ್ನು ಮೆಟ್ಟಿ ನಿಲ್ಲುವಂತಾಗಬೇಕು. ಸರ್ಕಾರದ ಸೌಲಭ್ಯಗಳನ್ನು ಪಡೆದು ಸ್ವ ಉದ್ಯೋಗ ಕೈಗೊಳ್ಳುವಂತಾಗಬೇಕು. ಸ್ವಾವಲಂಬಿ ಬದುಕು ನಡೆಸುವಂತಾಗಬೇಕು ಎಂದರು.
ರೆಡ್‍ಕ್ರಾಸ್ ಸಂಸ್ಥೆಯ ಸಭಾಪತಿ ರವೀಂದ್ರ ರೈ ಅವರು ಮಾತನಾಡಿ ರೆಡ್‍ಕ್ರಾಸ್ ಸಂಸ್ಥೆಯಿಂದ ವಿಕಲಚೇತನರಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಸದ್ಯ 25 ಜನ
ರಿಗೆ ರೈನ್‍ಕೋಟ್ ವಿತರಿಸಲಾಗಿದೆ ಎಂದರು. ಸರ್ಕಾರದ ಸಹಕಾರದಲ್ಲಿ ರೆಡ್‍ಕ್ರಾಸ್ ಭವನ ನಿರ್ಮಿಸಲಾಗಿದ್ದು, ಕಟ್ಟಡದ ಮೇಲ್ಬಾಗದಲ್ಲಿ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡುವಂತೆ ಸಂಸದರಲ್ಲಿ ಇದೇ ಸಂದರ್ಭದಲ್ಲಿ ಕೋರಿದರು.
ಜಿಲ್ಲಾ ವಿಕಲಚೇತನರ ಅಧಿಕಾರಿ ವಿಮಲ ಅವರು ಮಾತನಾಡಿ ಜಿಲ್ಲೆಯಲ್ಲಿನ ವಿಕಲಚೇತನರಿಗೆ ಸಾಧನ ಸಲಕರಣೆಗಳನ್ನು ನೀಡಲಾಗುತ್ತಿದ್ದು, ಮಳೆ ಇರುವ ಕಾರಣ ಆಯಾಯ ತಾಲ್ಲೂಕು ಮಟ್ಟದಲ್ಲಿ ಸಾಧನ ಸಲಕರಣೆ ವಿತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ವಿಕಲಚೇತನರ ಸಂಘಧ ಅಧ್ಯಕ್ಷರಾದ ಮಹೇಶ್ವರ, ನಗರಸಭೆ ಉಪಾಧ್ಯಕ್ಷರಾದ ಮಹೇಶ್ ಜೈನಿ, ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷರಾದ ನಾಪಂಡ ರವಿಕಾಳಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯಕ್ರಮ ನಿರೂಪಣಾ ಅಧಿಕಾರಿ ಪ್ರಸನ್ನ ಕುಮಾರ್, ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್‍ನ ಅಂಕಾಚಾರಿ, ರೆಡ್‍ಕ್ರಾಸ್ ಸಂಸ್ಥೆಯ ಸಹ ಕಾರ್ಯದರ್ಶಿ ಮಧುಕರ್, ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕರಾದ ತೆನ್ನಿರ ಮೈನಾ, ಕೆ.ಎಂ.ವೆಂಕಟೇಶ್, ಸತೀಶ್ ಹಾಗೂ ವಸಂತ್ ಇದ್ದರು.
What's Your Reaction?






