ತಂದೆಯ ಜೀವವನ್ನೇ ಬಲಿ ಪಡೆದ ಶಾಲಾ ಮಕ್ಕಳಿಬ್ಬರ ನಡುವಿನ ಜಗಳ

ಹಾಸನ: ಅರಸೀಕೆರೆ ತಾಲ್ಲೂಕಿನ ಮುಜವಾರ್ ಮೊಹಲ್ಲಾದಲ್ಲಿ ಮಕ್ಕಳ ನಡುವೆ ನಡೆದಿದ್ದ ಕ್ಷುಲ್ಲಕ ಜಗಳ ಅಂತಿಮವಾಗಿ ತಂದೆಯ ಜೀವ ಕಸಿದ ಹೃದಯವಿದ್ರಾವಕ ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿ ತೌಫಿಕ್ (28) ಎಂದು ಗುರುತಿಸಲಾಗಿದೆ. ತೌಫಿಕ್ ಹಾಗೂ ಫರಾನ್ ಪುತ್ರರು ಅರಸೀಕೆರೆಯ ಖಾಸಗಿ ಶಾಲೆಯಲ್ಲಿ ಓದುತ್ತಿದ್ದು, ಆ. 25ರಂದು ಶಾಲೆಯ ಆವರಣದಲ್ಲಿ ಇಬ್ಬರ ನಡುವೆ ಸಣ್ಣ ಗಲಾಟೆ ನಡೆದಿತ್ತು. ಈ ವಿಚಾರದ ಹಿಂದೆ ಇಬ್ಬರ ಕುಟುಂಬಗಳ ನಡುವೆ ಅಸಮಾಧಾನ ಹುಟ್ಟಿಕೊಂಡಿತ್ತು. ನಾಲ್ಕು ದಿನಗಳ ಹಿಂದೆ ಅರಸೀಕೆರೆಯ ಬಿಎಚ್ ರಸ್ತೆಯಲ್ಲಿರುವ ಲಸ್ಸಿ ಅಂಗಡಿಯಲ್ಲಿ ತೌಫಿಕ್ ಮತ್ತು ಫರಾನ್ ಮುಖಾಮುಖಿಯಾಗಿದ್ದು, ಮಕ್ಕಳ ಜಗಳದ ವಿಚಾರವನ್ನು ಚರ್ಚಿಸುವಾಗ ಗಲಾಟೆ ತೀವ್ರಗೊಂಡಿತ್ತು. ಈ ವೇಳೆ ಫರಾನ್ ತೌಫಿಕ್‌ನನ್ನು ತಳ್ಳಿದ್ದು, ಅವರು ಮೆಟ್ಟಿಲುಗಳಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಆಸ್ಪತ್ರೆಗೆ ದಾಖಲಿಸಲಾದ ತೌಫಿಕ್ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ.
ತೌಫಿಕ್ ಸಾವಿನ ಸುದ್ದಿ ತಿಳಿದ ಕೂಡಲೇ ಅವರ ಕುಟುಂಬಸ್ಥರು ಕೋಪಗೊಂಡು ಫರಾನ್ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಮನೆ ಜಖಂಗೊಂಡಿದ್ದು, ಅಲ್ಲಿದ್ದ ಕಾರಿಗೆ ಬೆಂಕಿ ಹಚ್ಚಲಾಗಿದೆ. ಘಟನೆಯಿಂದ ಮುಜವಾರ್ ಮೊಹಲ್ಲಾದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದಾರೆ.