ದಿಲ್ಲಿಯಲ್ಲಿ ಗೆಳತಿಯನ್ನು ಕೊಲೆ ಮಾಡಿದ್ದ ಆರೋಪಿ ಎಂಟು ವರ್ಷಗಳ ನಂತರ ನೇಪಾಳ ಗಡಿಯಲ್ಲಿ ಬಂಧನ :ನೇಪಾಳದಲ್ಲೂ ಇದೇ ಮಾದರಿ ಕೃತ್ಯ ಎಸಗಿದ್ದ ಆರೋಪಿ!

ಹೊಸದಿಲ್ಲಿ: ಎಂಟು ವರ್ಷಗಳ ಹಿಂದೆ ದಿಲ್ಲಿಯಲ್ಲಿ ತನ್ನನ್ನು ಮದುವೆಯಾಗಲು ನಿರಾಕರಿಸಿದ್ದಕ್ಕಾಗಿ ಗೆಳತಿಯನ್ನು ಕೊಲೆ ಮಾಡಿದ್ದ ಆರೋಪಿ, ನೇಪಾಳ ಜೈಲಿನಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ವೇಳೆ ಭಾರತ-ನೇಪಾಳ ಗಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಅರ್ಜುನ್ ಕುಮಾರ್ ಅಲಿಯಾಸ್ ಭೋಲಾ (31) ಎಂದು ಗುರುತಿಸಲಾಗಿದೆ. ಅವನ ಬಗ್ಗೆ ಮಾಹಿತಿ ನೀಡಿದವರಿಗೆ ದಿಲ್ಲಿ ಪೊಲೀಸರು 1 ಲಕ್ಷ ರೂ. ಬಹುಮಾನ ಘೋಷಿಸಿದ್ದರು.
2017ರ ನವೆಂಬರ್ 16ರಂದು ನ್ಯೂ ಅಶೋಕ್ ನಗರದಲ್ಲಿ ವಾಸಿಸುತ್ತಿದ್ದ ತನ್ನ ಗೆಳತಿಯನ್ನು ಹಲವಾರು ಬಾರಿ ಇರಿದು ನಂತರ ಕತ್ತು ಸೀಳಿ ಆರೋಪಿಯು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತಮ್ಮ ಮಗಳು ಕಾಣೆಯಾದ ಬಗ್ಗೆ ಸಂತ್ರಸ್ತೆಯ ತಂದೆ ಮರುದಿನವೇ ಕಾಣೆಯಾದ ದೂರು ದಾಖಲಿಸಿ, ಕುಮಾರ್ ನನ್ನು ಶಂಕಿತ ಆರೋಪಿ ಎಂದು ಹೆಸರಿಸಿದ್ದರು. ಬಳಿಕ ಪೊಲೀಸರು ಆರೋಪಿಯ ಬಾಡಿಗೆ ಕೋಣೆಯಿಂದ ಯುವತಿಯ ಶವವನ್ನು ವಶಪಡಿಸಿಕೊಂಡಿದ್ದರು. ಕೊಲೆ ಪ್ರಕರಣ ದಾಖಲಾದ ನಂತರ ಕುಮಾರ್ ಪರಾರಿಯಾಗಿದ್ದನು.
ಪೊಲೀಸರ ಮಾಹಿತಿ ಪ್ರಕಾರ, ಕುಮಾರ್ ನೇಪಾಳಕ್ಕೆ ಪರಾರಿಯಾದ ನಂತರ ತನ್ನ ಸ್ನೇಹಿತನ ವಿವಾಹಿತ ಗೆಳತಿಯ ತಾಯಿಯನ್ನು ಕೊಲೆ ಮಾಡಿದ್ದ ಎಂದು ತಿಳಿದು ಬಂದಿದೆ. ಈ ಪ್ರಕರಣದಲ್ಲಿ ಆತನಿಗೆ 25 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆದರೆ, ಇತ್ತೀಚೆಗೆ ನೇಪಾಳದಲ್ಲಿ ಭ್ರಷ್ಟಾಚಾರ ಮತ್ತು ಸಾಮಾಜಿಕ ಮಾಧ್ಯಮ ನಿಷೇಧದ ವಿರುದ್ಧ ನಡೆದ ‘ಜೆನ್ ಝಡ್’ ಅಶಾಂತಿಯ ಸಂದರ್ಭದಲ್ಲೇ ಜೈಲಿನಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದನು!
ಅರ್ಜುನ್ ಕುಮಾರ್ ಭಾರತಕ್ಕೆ ನುಗ್ಗಿ ಬಿಹಾರದಲ್ಲಿರುವ ತನ್ನ ಹುಟ್ಟೂರಿಗೆ ತೆರಳಲು ಯತ್ನಿಸುತ್ತಿದ್ದಾನೆ ಎಂಬ ಗುಪ್ತಚರ ಮಾಹಿತಿಯ ಮೇರೆಗೆ ಗಡಿಯಲ್ಲಿ ವಿಶೇಷ ತಂಡವನ್ನು ನಿಯೋಜಿಸಲಾಗಿತ್ತು. ಇದೇ ವೇಳೆ ರಕ್ಸೌಲ್ ನಲ್ಲಿ ಅವನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದರು ಎಂದು ಡಿಸಿಪಿ ಹರ್ಷ್ ಇಂದೋರಾ ತಿಳಿಸಿದ್ದಾರೆ.
ಕೇವಲ 5ನೇ ತರಗತಿ ವರೆಗೆ ಓದಿದ್ದ ಕುಮಾರ್, ದಿಲ್ಲಿಯಲ್ಲಿ ಕೆಲಸ ಮಾಡುತ್ತಿದ್ದಾಗಲೇ ಹಿಂಸಾತ್ಮಕ ಸ್ವಭಾವ ಬೆಳೆಸಿಕೊಂಡಿದ್ದ. ನೇಪಾಳದಲ್ಲೂ ಇದೇ ಮಾದರಿಯ ಅಪರಾಧಗಳನ್ನು ಪುನರಾವರ್ತಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.