ಎನ್‌ಡಿಎ ಗೆ ಬಿʼಹಾರʼ; ಮಹಾಘಟಬಂಧನಕ್ಕೆ ಭಾರೀ ಸೋಲು: ʼನಿಮೋʼಗೆ ಜೈಕಾರ ಹಾಕಿದ ಮತದಾರ
ಪಟ್ನಾ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್ ಡಿ ಎ ಭರ್ಜರಿ ಜಯ ಸಾಧಿಸಿದೆ. ಚುನಾವಣಾ ಆಯೋಗ ನೀಡಿದ ಇತ್ತೀಚಿನ ವಿವರಗಳ ಪ್ರಕಾರ, ರಾಜ್ಯದಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
243 ಸದಸ್ಯ ಬಲದ ವಿಧಾನಸಭೆಯಲ್ಲಿ 206ಕ್ಕೂ ಹೆಚ್ಚು ಸ್ಥಾನಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದು, ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ಸಿಗಲಿದೆ. 101 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ 94ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ದೆಹಲಿ, ಮಹಾರಾಷ್ಟ್ರ, ಹರಿಯಾಣದ ಬಳಿಕ ಬಿಹಾರದಲ್ಲಿಯೂ ತನ್ನ ರಾಜಕೀಯ ಬಲವನ್ನು ಪ್ರದರ್ಶಿಸಿದೆ.
ಸಮಯಕ್ಕೆ ಸರಿಯಾದ ಮೈತ್ರಿ ಲೆಕ್ಕಾಚಾರ ನಡೆಸಿದ ಜೆಡಿಯೂ 83ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ 2020ರಲ್ಲಿ ಪಡೆದ 43 ಸ್ಥಾನಗಳಿಗಿಂತ ಉತ್ತಮ ಸಾಧನೆ ದಾಖಲಿಸಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನಾಯಕತ್ವಕ್ಕೆ ರಾಜ್ಯದ ಮತದಾರರು ಮತ್ತೊಮ್ಮೆ ಬೆಂಬಲ ಸೂಚಿಸಿರುವುದು ಸ್ಪಷ್ಟವಾಗಿದೆ.
ವಿಪಕ್ಷಗಳ ಮಹಾಘಟಬಂಧನ ಮೈತ್ರಿಯ ಪ್ರಮುಖ ಪಕ್ಷ ಆರ್‌ಜೆಡಿ ಭಾರೀ ಹಿನ್ನಡೆ ಅನುಭವಿಸಿದೆ. 140ಕ್ಕೂ ಹೆಚ್ಚು ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿದ್ದರೂ ಕೇವಲ 24 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿರುವುದು ಪಕ್ಷದ ನೆಲೆಯ ದುರ್ಬಲತೆಯನ್ನು ಬಯಲಿಗೆಳೆದಿದೆ. ಕಾಂಗ್ರೆಸ್‌ನ ಇನ್ನೂ ಕಳಪೆ ಸಾಧನೆ ಮಾಡಿದೆ. 61 ಸ್ಥಾನಗಳಲ್ಲಿ ಸ್ಪರ್ಧಿಸಿದ ಪಕ್ಷವು 5ಕ್ಕೂ ಕಡಿಮೆ ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಂಡಿದೆ.
