ಬೈಕ್ ಕಳ್ಳತನ -ಆರೋಪಿಯ ಬಂಧನ

ಸಿದ್ದಾಪುರ:-ಇತ್ತೀಚೆಗೆ ಮನೆ ಮುಂಭಾಗದಲ್ಲಿ ನಿಲ್ಲಿಸಿದ್ದ ಬೈಕನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಸಿದ್ದಾಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಕಳ್ಳತನ ಮಾಡಿದ ಬೈಕ್ ಜೊತೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಮಾಲ್ದಾರೆ ಗ್ರಾಮ ಪಂ. ವ್ಯಾಪ್ತಿಯ ಬಾಡಗ ಬಾಣಂಗಾಲ ಗ್ರಾಮದ ಹುಂಡಿಯ ನಿವಾಸಿ ಕಿರಣ್ ಎಂಬುವರ (ಕೆ.ಎ-12 ಹೆಚ್-1039) ಬೈಕ್ ನ್ನು ಮೇ 21ರಂದು ಮನೆ ಮುಂಭಾಗ ನಿಲ್ಲಿಸಿದ್ದಾಗ ಕಳವು ಮಾಡಲಾಗಿತ್ತು.
ಈ ಬಗ್ಗೆ ಮಾಲೀಕ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ತನಿಖೆ ಕೈಗೊಂಡಾಗ ಹುಣಸೂರಿನ ಅಮೀರ್ ನಗರದ ನಿವಾಸಿ ಶಾರುಖ್ ( 35) ಎಂಬಾತ ಆತನ ಸ್ನೇಹಿತನೊಂದಿಗೆ ಸೇರಿ ಬೈಕ್ ಕಳ್ಳತನ ಮಾಡಿ ಅದರ ನಂಬರ್ ಪ್ಲೇಟ್‌ಗಳನ್ನು ಬದಲಾವಣೆ ಮಾಡಿ ಹುಣಸೂರಿನಲ್ಲಿ ಓಡಾಡುತ್ತಿದ್ದು ತಿಳಿದು ಬಂದಿದ್ದು, ಆರೋಪಿ ಶಾರೂಖ್‌ನನ್ನು ಪೊಲೀಸರು ಬಂಧಿಸಿ ಕಳ್ಳತನ ಮಾಡಿದ್ದ ಬೈಕನ್ನು ವಶಪಡಿಸಿಕೊಂಡಿದ್ದಾರೆ.
ಮತ್ತೋರ್ವ ಆರೋಪಿ ಪರಾರಿಯಾಗಿದ್ದು ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಶಾರುಖ್ ಈ ಹಿಂದೆ ಹುಣಸೂರಿನಲ್ಲಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ.ಕಾರ್ಯಾಚರಣೆಯಲ್ಲಿ ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಮಂಜುನಾಥ್, ಕ್ರೈಂ ವಿಭಾಗದ ಶಿವಣ್ಣ,ಸಹಾಯಕ ಠಾಣಾಧಿಕಾರಿ ಶ್ರೀನಿವಾಸ್,ಅಪರಾಧ ಪತ್ತೆದಳದ ಸಿಬ್ಬಂದಿ ಮಣಿಕಂಠ, ಪಾಲ್ಗೊಂಡಿದ್ದರು.