ಅಕ್ರಮವಾಗಿ ಮನೆ ಮಂಜೂರು: ಬಿಲ್ ಕಲೆಕ್ಟರ್, ಪಿಡಿಒಗೆ ಒಂದು ವರ್ಷ ಸಜೆ

ಚಿಕ್ಕಮಗಳೂರು: ಅಕ್ರಮವಾಗಿ ತನ್ನ ತಾಯಿಯ ಹೆಸರಿಗೆ ಬಸವ ವಸತಿ ಯೋಜನೆಯಡಿ ಮನೆ ಮಂಜೂರು ಮಾಡಿಸಿಕೊಂಡಿದ್ದ ಬಿಲ್ ಕಲೆಕ್ಟರ್ ಹಾಗೂ ಪಿಡಿಒಗೆ ತಲಾ ಒಂದು ವರ್ಷ ಸಜೆ ಹಾಗೂ 15 ಸಾವಿರ ರೂ. ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ತೀರ್ಪು ನೀಡಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಕೆಳಗೂರು ಗ್ರಾಪಂ 2010-11ನೇ ಸಾಲಿನಲ್ಲಿ ಬಿಲ್ ಕಲೆಕ್ಟರ್ ಆಗಿದ್ದ ಎಂ.ಎನ್.ಮಂಜುನಾಥ್ ತನ್ನ ತಾಯಿಗೆ ಅರ್ಹತೆ ಇಲ್ಲದಿದ್ದರೂ ಸರಕಾರದ ಬಸವ ವಸತಿ ಯೋಜನೆಯಡಿ ಕಾನೂನು ಬಾಹಿರವಾಗಿ ಮನೆ ಮಂಜೂರು ಮಾಡಿಸಿಕೊಂಡು ಈ ಸಂಬಂಧ ಸರಕಾರದಿಂದ ಬಿಡುಗಡೆಯಾದ ಹಣವನ್ನೂ ಪಡೆದುಕೊಂಡಿದ್ದರು. ಗ್ರಾಪಂ ವ್ಯಾಪ್ತಿಯಲ್ಲಿ ಅರ್ಹ ಫಲಾನುಭವಿಗಳ ಪಟ್ಟಿ ತಯಾರಿಸುವ ಸಂದರ್ಭ ಮಂಜುನಾಥನ ತಾಯಿಯನ್ನು ಆಯ್ಕೆ ಮಾಡಿರಲಿಲ್ಲ. ಆದರೆ ಫಲಾನುಭವಿಗಳ ಪಟ್ಟಿಯನ್ನು ತಾಲ್ಲೂಕು ಪಂಚಾಯಿತಿಗೆ ಸಲ್ಲಿಸುವ ಸಂದರ್ಭ ಮಂಜುನಾಥ ಅಂದಿನ ಪಿಡಿಒ ಕೆ.ಎಂ.ಲಕ್ಷ್ಮಣ್ ಗೌಡ ಜೊತೆ ಸೇರಿ ತನ್ನ ತಾಯಿಯ ಹೆಸರನ್ನು ಸೇರಿಸಿದ್ದರು.
ಈ ಸಂಬಂಧ ಆರೋಪಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಹಾಗೂ ಐಪಿಸಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ಅಂದಿನ ಲೋಕಾಯುಕ್ತ ಡಿವೈಎಸ್‌ಪಿ ಪ್ರಸನ್ನ ವಿ.ರಾಜು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಗೌರವಾನ್ವಿತ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಅವರು ಆರೋಪಿಗಳಿಗೆ ಒಂದು ವರ್ಷ ಸಜೆ ಹಾಗೂ 15 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಲೋಕಾಯುಕ್ತದ ಪರವಾಗಿ ಲೋಕಾಯುಕ್ತ ವಿಶೇಷ ಸರ್ಕಾರಿ ಅಭಿಯೋಜಕ ವಿ.ಟಿ.ಥೋಮಸ್ ವಾದ ಮಂಡಿಸಿದ್ದರು.