ಒಡ ಹುಟ್ಟಿದವನಿಗೇ ಚಟ್ಟ ಕಟ್ಟಿದ ಅಣ್ಣ: ತಮ್ಮನನ್ನು ಕರೆಸಿ ಮರ್ಡರ್!

ಒಡ ಹುಟ್ಟಿದವನಿಗೇ ಚಟ್ಟ ಕಟ್ಟಿದ ಅಣ್ಣ: ತಮ್ಮನನ್ನು ಕರೆಸಿ ಮರ್ಡರ್!
Photo credit: TV09 (ಬಂಧಿತ ಆರೋಪಿಗಳು)

ಆನೇಕಲ್, ನ.22: ಬನ್ನೇರುಘಟ್ಟ ಠಾಣಾ ವ್ಯಾಪ್ತಿಯ ಕಗ್ಗಲೀಪುರ ರಸ್ತೆ ಬದಿಯ ಪೊದೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಯುವಕನ ಶವ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಕುಡಿದು, ಕಳ್ಳತನ ಮಾಡುತ್ತಾ ಕುಟುಂಬಕ್ಕೆ ನಿರಂತರ ತೊಂದರೆ ಕೊಡುತ್ತಿದ್ದ ತಮ್ಮನನ್ನು ಅಣ್ಣನೇ ಸ್ನೇಹಿತರ ಜೊತೆಗೂಡಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಸಿಸಿ ಕ್ಯಾಮರಾ ದೃಶ್ಯಾವಳಿಗಳ ಆಧಾರದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ರವಾನಿಸಿದ್ದಾರೆ.

ಕಲಬುರಗಿ ಮೂಲದ ಧನರಾಜ್ (24) ಮೃತ ಯುವಕ. ತಂದೆ-ತಾಯಿಯ ಜೊತೆ ವಾಸವಾಗಿದ್ದ ಆತ ಕೆಲಸ ಮಾಡದೆ ಕಳ್ಳತನದಲ್ಲಿ ತೊಡಗಿಕೊಂಡಿದ್ದ. ಮನೆಗೆ ಕುಡಿದು ಬಂದು ನಿತ್ಯ ಗಲಾಟೆ, ಹಲ್ಲೆ ನಡೆಸುತ್ತಿದ್ದ. ಅಣ್ಣ ಶಿವರಾಜನ ಮೇಲೂ ಹಲವಾರು ಬಾರಿ ದಾಳಿ ನಡೆಸಿದ್ದಲ್ಲದೆ, ಕೊಲೆ ಮಾಡುವ ಬೆದರಿಕೆ ಹಾಕಿದ್ದ ವಿಚಾರ ತನಿಖೆಯಲ್ಲಿ ಹೊರಬಿದ್ದಿದೆ.

ತಮ್ಮನ ವರ್ತನೆಯಿಂದ ಬೇಸತ್ತ ಶಿವರಾಜ್, ಸ್ನೇಹಿತರಾದ ಸಂದೀಪ್ ಮತ್ತು ಪ್ರಶಾಂತ್‌ ಜೊತೆಗೂಡಿ ಕೊಲೆ ಪ್ಲಾನ್ ರೂಪಿಸಿದ್ದ. ಕೆಲಸ ಕೊಡಿಸುವ ನೆಪದಲ್ಲಿ ಧನರಾಜ್‌ನ್ನು ಬೆಂಗಳೂರಿಗೆ ಕರೆಸಿಕೊಂಡು, ಕಾರಿನಲ್ಲೇ ಇಬ್ಬರು ಕೈ ಹಿಡಿದ ಸಂದರ್ಭದಲ್ಲಿ ಶಿವರಾಜ್ ಮಚ್ಚಿನಿಂದ ಕುತ್ತಿಗೆ ಭಾಗಕ್ಕೆ ಹೊಡೆದು ಕೊಲೆಗೈದಿದ್ದಾನೆ. ಬಳಿಕ ಶವವನ್ನು ಕಗ್ಗಲೀಪುರ ರಸ್ತೆಯ ಪೊದೆಯಲ್ಲಿ ಎಸೆದು ಪರಾರಿಯಾಗಿದ್ದರು.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಸುತ್ತಮುತ್ತಲಿನ ಪ್ರದೇಶಗಳ ಸಿಸಿ ಕ್ಯಾಮರಾ ಚಿತ್ರಗಳನ್ನು ವಿಶ್ಲೇಷಿಸಿ, ಕಾರಿನ ನಂಬರ್ ಮೂಲಕ ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.