ಶಿಕ್ಷಕರನ್ನು ಕಂಡು ಕಾಡಿಗೆ ಓಡುತ್ತಿದ್ದ ಮಕ್ಕಳು ಈಗ ಶಾಲೆಗೆ ತಪ್ಪದೆ ಹಾಜರ್!: ಚೆನ್ನಂಗಿ ಸರ್ಕಾರಿ ಶಾಲೆಯಲ್ಲಿ ಪ್ರತಿನಿತ್ಯ ವಿಶೇಷ ಕಾರ್ಯಕ್ರಮ

ಶಿಕ್ಷಕರನ್ನು ಕಂಡು ಕಾಡಿಗೆ ಓಡುತ್ತಿದ್ದ ಮಕ್ಕಳು ಈಗ ಶಾಲೆಗೆ ತಪ್ಪದೆ ಹಾಜರ್!: ಚೆನ್ನಂಗಿ ಸರ್ಕಾರಿ ಶಾಲೆಯಲ್ಲಿ ಪ್ರತಿನಿತ್ಯ ವಿಶೇಷ ಕಾರ್ಯಕ್ರಮ

ಮಡಿಕೇರಿ :- ಈ ಹಿಂದೆ ಶಿಕ್ಷಣದಿಂದ ದೂರ ಉಳಿದಿದ್ದ ಮಕ್ಕಳನ್ನ ಶಾಲೆಗೆ ಕರೆತರಲು ಹಾಡಿಗೆ ಹೋದರೆ ಶಿಕ್ಷಕರನ್ನ ಕಂಡ ಮಕ್ಕಳು ಕಾಡಿಗೆ ಓಡುತ್ತಿದ್ದರು. ಮಕ್ಕಳನ್ನು ಕರೆ ತರುವುದು ಶಿಕ್ಷಕರುಗಳಿಗೆ ಸವಾಲಾಗಿ ಪರಿಣಮಿಸಿತ್ತು. ನಂತರದ ದಿನಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿ ಪೋಷಕರು ಹಾಗೂ ಮಕ್ಕಳನ್ನ ಮನವೊಲಿಸಿದಾಗ ಇದೀಗ ಶಿಕ್ಷಕರುಗಳು ಬರುವ ಮುನ್ನವೇ ಮಕ್ಕಳು ಶಾಲೆಗೆ ತಪ್ಪದೇ ಹಾಜರಾಗುತ್ತಿದ್ದಾರೆ.

ಶಿಕ್ಷಕರುಗಳ ಕಾಳಜಿಗೆ ಪೋಷಕವಾಗಿ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾಡಂಚಿನ ಚೆನ್ನಂಗಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಕಲಿಕೆಗೆ ಅನುಗುಣವಾಗಿ ತಿಂಗಳಿಗೊಂದು ವಿನೂತನ ಕಾರ್ಯಕ್ರಮವನ್ನು ಆಯೋಜಿಸುವುದರ ಮೂಲಕ ಅಧಿಕಾರಿಗಳು, ಜನಪ್ರತಿನಿಧಿಗಳು, ಪೋಷಕರು ಹಾಗೂ ಗ್ರಾಮಸ್ಥರ ಮೆಚ್ಚುಗೆ ಗಳಿಸಿದ ಶಾಲೆಯಲ್ಲಿ ಇದೀಗ ಶಿಕ್ಷಣ ಇಲಾಖೆಯ ನಿರ್ದೇಶನವನ್ನ ಪಾಲಿಸಿ ದಿನಕ್ಕೊಂದು ವಿಶೇಷ ಕಾರ್ಯಕ್ರಮವನ್ನು ಆಯೋಜಿಸುವುದರೊಂದಿಗೆ ನಾವು ಯಾರಿಗೂ ಕಮ್ಮಿ ಇಲ್ಲ ಎಂಬಂತೆ ವಿದ್ಯಾರ್ಥಿಗಳು ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗವಹಿಸುವುದರ ಮೂಲಕ ವ್ಯಾಪಕ ಮೆಚ್ಚುಗೆ ಗಳಿಸಿದ್ದಾರೆ.

ಶಿಕ್ಷಕರುಗಳ ವಿಶೇಷ ಕಾಳಜಿಯಿಂದ ವಿದ್ಯಾರ್ಥಿಗಳಿಗೆ ಶಿಕ್ಷಣ ಕಲಿಕೆ, ನೃತ್ಯ, ಗಾಯನ, ಯೋಗ, ಪರಿಸರ ಕಾಳಜಿ, ಶುಚಿತ್ವ, ಚಿತ್ರಕಲೆ, ಕೌಶಲ್ಯ ತರಬೇತಿ, ಶುದ್ಧ ಆಹಾರ ಬಳಕೆ, ಔಷಧಿ ಗುಣಗಳ ಮಹತ್ವ, ಅಲಂಕಾರಿಕ ವಸ್ತುಗಳ ತಯಾರಿಕೆ, ಮಕ್ಕಳ ಸಂತೆ ಸೇರಿದಂತೆ ವಿವಿಧ ಕ್ರೀಡೆಗಳಲ್ಲೂ ತೊಡಗಿಸಿಕೊಂಡು ತಮ್ಮ ಪ್ರತಿಭೆ ಅನಾವರಣಗೊಳಿಸಿ ಮಾದರಿಯದ ವಿದ್ಯಾರ್ಥಿಗಳ ಸಾಧನೆಗೆ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಲವು ವರ್ಷಗಳ ಹಿಂದೆ ಕಾಡಂಚಿನ ಕೆಲವು ಮಕ್ಕಳು ಶಾಲೆಗೆ ತೆರಳಲು ಹಿಂದೆಟಾಕುತ್ತಿದ್ದರು ಶಿಕ್ಷಣದಿಂದ ದೂರ ಉಳಿಯುತ್ತಿದ್ದರು. ಎರಡು ವರ್ಷಗಳ ಹಿಂದೆ ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಶಾಲೆಗೆ ನೇಮಕಗೊಂಡ ಕೆ ಕೆ ಸುಷಾ ಅವರು ಮೊದಲಿಗೆ ಪ್ರತಿ ಹಾಡಿಗಳಿಗೆ ತೆರಳಿ ಪೋಷಕರೊಂದಿಗೆ ಮಕ್ಕಳನ್ನ ಶಾಲೆಗೆ ಕಳಿಸಲು ಮನವೊಲಿಸಿದರು. ಕೆಲವು ದಿನ ಕಳೆದರೂ ಮಕ್ಕಳು ಮಾತ್ರ ಶಾಲೆ ಕಡೆ ಬರುತ್ತಿರಲಿಲ್ಲ ಪೋಷಕರು ಮಕ್ಕಳನ್ನು ಮನೆಯಲ್ಲಿ ಬಿಟ್ಟು ದಿನನಿತ್ಯದ ಕೆಲಸಕ್ಕೆ ತೆರಳುತ್ತಿದ್ದರು. ಶಾಲೆಯ ದಾಖಲಾತಿಯು ಕಡಿಮೆಯಾದ ಕಾರಣ ಶಿಕ್ಷಕರುಗಳೇ ಮಕ್ಕಳನ್ನು ಕರೆತರಲು ಹಾಡಿಗೆ ತೆರಳುತ್ತಿದ್ದರು. ದೂರದಿಂದಲೇ ಶಿಕ್ಷಕರಗಳು ಬರುವುದನ್ನು ಕಂಡ ಹಾಡಿ ಮಕ್ಕಳು ಕಾಡಿಗೆ ಓಡುತ್ತಿದ್ದರು. ಮಕ್ಕಳನ್ನು ಶಾಲೆಗೆ ಕರೆ ತರುವುದು ಶಿಕ್ಷಕರುಗಳಿಗೆ ಸವಾಲಾಗಿ ಪರಿಣಮಿಸಿತು. ಕಾರ್ಮಿಕರಿಗೆ ರಜಾ ದಿವಸದಂದು ಶಾಲೆಯಲ್ಲಿ ಪೋಷಕರ ಸಭೆಯನ್ನ ಮಾಡಿ ಪ್ರತಿ ಮಕ್ಕಳಿಗೆ ಶಿಕ್ಷಣ ಅತ್ಯವಶ್ಯಕವಾಗಿದ್ದು ಸರ್ಕಾರ ಹಲವಾರು ಯೋಜನೆಗಳನ್ನು ನೀಡುತ್ತಿದೆ ಯಾವುದೇ ವೆಚ್ಚಗಳಿಲ್ಲದೆ ಶಿಕ್ಷಣ ಕಲಿತು ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂಬ ಮಾಹಿತಿಯನ್ನ ಶಿಕ್ಷಕರುಗಳು ನೀಡಿದರು. ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ವಹಿಸಿದ ಪೋಷಕರು ಮರುದಿನ ಕೆಲಸವನ್ನು ಬಿಟ್ಟು ಮಕ್ಕಳೊಂದಿಗೆ ಶಾಲೆಗೆ ಆಗಮಿಸಿ ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡಿದರು. ಶಿಕ್ಷಕರುಗಳು ಮಕ್ಕಳ ಕಲಿಕೆಗೆ ಪೂರಕವಾದ ಶಿಕ್ಷಣದೊಂದಿಗೆ ಪಟ್ಟಿ ತರ ಚಟುವಟಿಕೆ ಕಾರ್ಯಕ್ರಮವನ್ನು ಆಯೋಜಿಸಿದರು. ವಿದ್ಯಾರ್ಥಿಗಳಿಗೆ ಬ್ಯಾಗ್ ಸೇರಿದಂತೆ ಕಡ್ಡಾಯ ಹಾಜರಾತಿ ಹೆಚ್ಚು ಅಂಕಗಳಿಸುವ ವಿದ್ಯಾರ್ಥಿಗಳಿಗೆ ದಾನಿಗಳು ಬಹುಮಾನ ಘೋಷಣೆ ಮಾಡಿದರು.

ಕೆಲವೇ ದಿನಗಳಲ್ಲಿ ವಿದ್ಯಾರ್ಥಿಗಳು ಎಲ್ಲಾ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳುವುದರ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ಶಿಕ್ಷಕರುಗಳು ಹಾಗೂ ವಿದ್ಯಾರ್ಥಿಗಳ ಜವಾಬ್ದಾರಿಯಿಂದ ಶಾಲೆಯ ಪರಿಸರ ಅಚ್ಚ ಹಸಿರಿನೊಂದಿಗೆ ಹೂತೋಟ, ಅಲಂಕಾರಿಕ ಗಿಡಮರಗಳು, ಬಗೆ ಬಗೆಯ ಹೂವಿನ ಗಿಡಗಳಿಂದ ಶಾಲಾ ಆವರಣ ಕಂಗೊಳಿಸಿದರೆ ಕೊಠಡಿಗಳಲ್ಲಿ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾದ ಬರಹ, ಚಿತ್ರಕಲೆ, ಪರಿಸರ, ಆರೋಗ್ಯ ಜಾಗ್ರತಿ, ಪ್ರಾಣಿ ಪಕ್ಷಿಗಳ ಬಿತ್ತಿ ಚಿತ್ರಗಳು ಸಾಹಿತ್ಯ ಅಭಿಮಾನದ ಬರಹಗಳು ರಾರಾಜಿಸುತ್ತಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ಸರ್ಕಾರದ ಶಿಕ್ಷಣ ಇಲಾಖೆಯ ನಿರ್ದೇಶನಗಳನ್ನ ಪಾಲಿಸುವುದರ ಮೂಲಕ ಶಾಲೆಯಲ್ಲಿ ದಿನಕ್ಕೊಂದು ಕಾರ್ಯಕ್ರಮವನ್ನು ಆಯೋಜಿಸಿ ಆಹಾರ ಆರೋಗ್ಯ ಕಾಳಜಿಯ ಮಹತ್ವವನ್ನು ಸಾರಲು ಪೋಷಣ ಪಕ್ವಾಡ ಎಂಬ ಅಭಿಯಾನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತರಕಾರಿಗಳಲ್ಲಿ ಅಲಂಕಾರಿಕವಾಗಿ ತೊಟ್ಟು ತರಕಾರಿಗಳ ಬಳಕೆ ಹಾಗೂ ಮಹತ್ವವನ್ನು ಪೋಷಕರಿಗೆ ವಿದ್ಯಾರ್ಥಿಗಳು ಹೇಳಿಕೊಟ್ಟರು. ಶಿಕ್ಷಣದೊಂದಿಗೆ ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡಿ ಪಾಠ ಪಠ್ಯೇತರ ಚಟುವಟಿಕೆಗಳೊಂದಿಗೆ ಶಿಕ್ಷಣದ ಮೂಲಕ ಪ್ರತಿಭಾನ್ವಿತರಾಗಿ ಮುಖ್ಯ ವಾಹಿನಿಗೆ ತರಲು ಶ್ರಮಿಸುತ್ತಿರುವ ಶಿಕ್ಷಕರ ಶಿಕ್ಷಣ ಕಾಳಜಿಗೆ ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೇಕೆರೀರ ಅರುಣ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಸರ್ಕಾರದ ಯೋಜನೆಗಳು ಶಿಕ್ಷಣ ಇಲಾಖೆಯ ನಿರ್ದೇಶನಗಳನ್ನ ಪಾಲನೆ ಮಾಡುವುದರ ಮೂಲಕ ಕಾಡಂಚಿನ ಗ್ರಾಮದ ವಿದ್ಯಾರ್ಥಿಗಳನ್ನ ಶಿಕ್ಷಣದ ಮೂಲಕ ಮುಖ್ಯ ವಾಹಿನಿಗೆ ತರಲು ವಿದ್ಯಾರ್ಥಿಗಳ ಕಲಿಕೆಗೆ ಅನುಗುಣವಾಗಿ ಹಲವಾರು ಕಾರ್ಯಕ್ರಮಗಳನ್ನ ನಿರಂತರ ಹಮ್ಮಿಕೊಂಡು ಬರಲಾಗುತ್ತಿದ್ದು ಅಧಿಕಾರಿಗಳು, ದಾನಿಗಳು, ಪೋಷಕರು ಹೆಚ್ಚಿನ ಸಹಕಾರ ನೀಡುತ್ತಿದ್ದಾರೆ ಕಳೆದ ವರ್ಷದಂತೆ ಈ ಸಾಲಿನಲ್ಲೂ 51 ವಿದ್ಯಾರ್ಥಿಗಳು ಕಲಿಕಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ತಮ್ಮ ಪ್ರತಿಭೆ ಅನಾವರಣಗೊಳಿಸುತ್ತಿದ್ದಾರೆ.

ಪ್ರಭಾರ ಶಾಲಾ ಮುಖ್ಯ ಶಿಕ್ಷಕಿ ಕೆ ಕೆ ಸುಷಾ