ಕೊಯಮತ್ತೂರು ಸಾಮೂಹಿಕ ಅತ್ಯಾಚಾರ ಪ್ರಕರಣ: ಮೂವರು ಆರೋಪಿಗಳ ಕಾಲಿಗೆ ಗುಂಡೇಟು
ಕೊಯಮತ್ತೂರು: ವಿಮಾನ ನಿಲ್ದಾಣದ ಹತ್ತಿರ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ತಮಿಳುನಾಡಿನಾದ್ಯಂತ ಆಕ್ರೋಶದ ಅಲೆ ಎಬ್ಬಿಸಿದ್ದು, ಪ್ರಕರಣದ ಮೂವರು ಆರೋಪಿಗಳನ್ನು ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
ಬಂಧಿತರನ್ನು ತವಾಸಿ, ಕರುಪ್ಪಸಾಮಿ ಹಾಗೂ ಕಾಳೀಶ್ವರನ್ ಎಂದು ಗುರುತಿಸಲಾಗಿದೆ. ಆರೋಪಿಗಳು ಮಂಗಳವಾರ ಬೆಳಿಗ್ಗೆ ದೇವಸ್ಥಾನದ ಬಳಿ ಅಡಗಿಕೊಂಡಿದ್ದರು. ವಿಶೇಷ ಪೊಲೀಸ್ ತಂಡವು ಅವರನ್ನು ಸುತ್ತುವರೆದಾಗ ಆರೋಪಿಗಳು ಕುಡಗೋಲುಗಳಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದರು. ಈ ವೇಳೆ ಹೆಡ್ ಕಾನ್ಸ್ಟೇಬಲ್ ಚಂದ್ರಶೇಖರ್ ಗಾಯಗೊಂಡಿದ್ದು, ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ.
ಮೂವರು ಆರೋಪಿಗಳ ಕಾಲಿಗೆ ಗುಂಡು ತಗುಲಿ ಗಾಯವಾಗಿದ್ದು, ಅವರನ್ನು ತಕ್ಷಣ ಕೊಯಮತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಾಯಗೊಂಡ ಪೊಲೀಸ್ ಅಧಿಕಾರಿಗೂ ಚಿಕಿತ್ಸೆ ನೀಡಲಾಗಿದೆ.
ಭಾನುವಾರ ರಾತ್ರಿ ಕಾಲೇಜು ವಿದ್ಯಾರ್ಥಿನಿ ಮತ್ತು ಆಕೆಯ ಸ್ನೇಹಿತ ಕಾರಿನಲ್ಲಿ ತೆರಳುತ್ತಿದ್ದಾಗ ಆರೋಪಿಗಳು ದಾಳಿ ನಡೆಸಿದ್ದರು. ಸ್ನೇಹಿತನ ಮೇಲೆ ಹಲ್ಲೆ ನಡೆಸಿ ವಿದ್ಯಾರ್ಥಿನಿಯನ್ನು ಅಪಹರಿಸಿ, ವಿಮಾನ ನಿಲ್ದಾಣದ ಹತ್ತಿರದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ .
ಅಪರಾಧಕ್ಕೂ ಮೊದಲು ಆರೋಪಿಗಳು ಇರುಗೂರ್ ಪ್ರದೇಶದಲ್ಲಿ ಮದ್ಯಪಾನ ಮಾಡಿದ್ದರು. ನಂತರ ಕೊರಿಪಾಳಯಂನಿಂದ ದ್ವಿಚಕ್ರ ವಾಹನ ಕಳ್ಳತನ ಮಾಡಿದ್ದರು. ಕುಡಗೋಲುಗಳ ಸಹಾಯದಿಂದ ಕಾರಿನ ಗಾಜು ಒಡೆದು ದಾಳಿ ನಡೆಸಿದ್ದರು. ಘಟನೆ ಭಾನುವಾರ ರಾತ್ರಿ 10.45ರಿಂದ 11ರ ವೇಳೆಗೆ ನಡೆದಿರುವುದು ದೃಢವಾಗಿದೆ.
ಕೊಯಮತ್ತೂರು ಪೊಲೀಸ್ ಆಯುಕ್ತ ಸರವಣ ಸುಂದರ್ ಅವರ ನೇತೃತ್ವದಲ್ಲಿ ಪೊಲೀಸರು 300 ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳನ್ನು ಪತ್ತೆಹಚ್ಚಿದರು.
“ಆರೋಪಿಗಳ ಪತ್ತೆಗೆ ಪರೇಡ್ ಮುಗಿಯುವವರೆಗೆ ಆರೋಪಿಗಳ ಚಿತ್ರಗಳನ್ನು ಪ್ರಕಟಿಸದಿರಿ” ಎಂದು ಆಯುಕ್ತರು ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ. ಸಂತ್ರಸ್ತೆ ವಿದ್ಯಾರ್ಥಿನಿಗೆ ಮಾನಸಿಕ ಸಮಾಲೋಚನೆ ನಡೆಸಲಾಗಿದೆ.
ಈ ಘಟನೆಯು ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ, “ಡಿಎಂಕೆ ಸರ್ಕಾರದಲ್ಲಿ ಮಹಿಳೆಯರ ಸುರಕ್ಷತೆ ಸಂಪೂರ್ಣ ಹದಗೆಟ್ಟಿದೆ” ಎಂದು ಟೀಕಿಸಿದ್ದಾರೆ.
ಕೇಂದ್ರ ಸಚಿವ ಎಲ್. ಮುರುಗನ್ “ಮಹಿಳೆಯರ ಮೇಲಿನ ಕ್ರೂರ ಕೃತ್ಯಗಳಲ್ಲಿ ಯಾವುದೇ ಇಳಿಕೆಯಾಗಿಲ್ಲ” ಎಂದು ಆರೋಪಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ರಾಜ್ಯವ್ಯಾಪಿ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದಾರೆ.
ಬಿಜೆಪಿ ನಾಯಕ ಕೆ. ಅಣ್ಣಾಮಲೈ “ಡಿಎಂಕೆ ಅಧಿಕಾರಕ್ಕೆ ಬಂದ ಬಳಿಕ ಸಮಾಜ ವಿರೋಧಿ ಶಕ್ತಿಗಳು ಕಾನೂನಿಗೆ ಹೆದರುವುದಿಲ್ಲ” ಎಂದು ಕಿಡಿಕಾರಿದ್ದಾರೆ.
ಮಹಿಳಾ ಸಂಘಟನೆಗಳು ಸಂತ್ರಸ್ತೆಗೆ ನ್ಯಾಯ ದೊರಕುವ ತನಕ ಹೋರಾಟ ಮುಂದುವರಿಯಲಿದೆ ಎಂದು ಘೋಷಿಸಿದ್ದು, ಘಟನೆಯು ತಮಿಳುನಾಡಿನಲ್ಲಿ ಮಹಿಳಾ ಭದ್ರತೆ ಕುರಿತ ಗಂಭೀರ ಪ್ರಶ್ನೆ ಹುಟ್ಟು ಹಾಕಿದೆ.
