ಮಕ್ಕಳನ್ನು ಸ್ನೇಹಿತನ ಬಳಿ ಬಿಟ್ಟು ಚಿತ್ರ ನೋಡಲು ಹೋದ ದಂಪತಿ; ಹಿಂತಿರುಗುವಷ್ಟರಲ್ಲಿ ಮಗು ಕಿಡ್ನ್ಯಾಪ್

ಮಕ್ಕಳನ್ನು ಸ್ನೇಹಿತನ ಬಳಿ ಬಿಟ್ಟು ಚಿತ್ರ ನೋಡಲು ಹೋದ ದಂಪತಿ; ಹಿಂತಿರುಗುವಷ್ಟರಲ್ಲಿ ಮಗು ಕಿಡ್ನ್ಯಾಪ್

ಮುಂಬೈ, ಡಿಸೆಂಬರ್ 11: ಮೂವರು ಮಕ್ಕಳನ್ನು ಸ್ನೇಹಿತನ ಬಳಿ ಬಿಟ್ಟು ಚಲನಚಿತ್ರ ವೀಕ್ಷಣೆಗೆ ತೆರಳಿದ್ದ ದಂಪತಿ ಮನೆಗೆ ಮರಳುವಷ್ಟರಲ್ಲಿ ಆಘಾತಕಾರಿ ಘಟನೆ ಎದುರಾಗಿದೆ. ದಂಪತಿ ಹಿಂತಿರುಗುವ ಹೊತ್ತಿಗೆ ಅವರ ಎರಡು ವರ್ಷದ ಹೆಣ್ಣುಮಗು ಕಾಣೆಯಾಗಿರುವುದು ಪತ್ತೆಯಾಗಿದೆ. ಮಹಾರಾಷ್ಟ್ರದ ಥಾಣೆಯಲ್ಲಿ ಈ ಘಟನೆ ನಡೆದಿದೆ.

ಘಾಟ್ಕೋಪರ್‌ನ ನಿತ್ಯಾನಂದ ನಗರ ನಿವಾಸಿ 30 ವರ್ಷದ ಮಹಿಳೆಯೊಬ್ಬರು ಡಿಸೆಂಬರ್ 8ರ ರಾತ್ರಿ ಪತಿಯೊಂದಿಗೆ ಸಿನಿಮಾ ಹಾಗೂ ಭೋಜನಕ್ಕೆ ತೆರಳಿದ್ದರು. ಮೂವರು ಮಕ್ಕಳನ್ನು ಸ್ನೇಹಿತ ರಾಜೇಶ್ ಅವರ ಜವಾಬ್ದಾರಿಯಲ್ಲಿ ಬಿಟ್ಟು ದಂಪತಿ ಹೊರಟಿದ್ದರು. ನಂತರ ಡಿಸೆಂಬರ್ 9ರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ದಂಪತಿ ಥಾಣೆ ರೈಲ್ವೆ ನಿಲ್ದಾಣಕ್ಕೆ ತಲುಪಿದಾಗ, ಮಕ್ಕಳನ್ನು ತೆಗೆದುಕೊಳ್ಳಲು ಹೋದಾಗ ಒಂದೇ ಮಗು ಕಾಣೆಯಾಗಿರುವುದು ಬೆಳಕಿಗೆ ಬಂದಿದೆ.

ರಾಜೇಶ್ ಪ್ರಕಾರ, ತಮಗೆ ಪರಿಚಿತಳಾದ 14 ವರ್ಷದ ಬಾಲಕಿ ಮಗುವನ್ನು ಕ್ಷಣಕಾಲಕ್ಕೆ ಕರೆದುಕೊಂಡು ಹೋಗಿದ್ದಳು. ಆದರೆ ಬಹಳ ಹೊತ್ತಾದರೂ ವಾಪಸ್ಸು ಬರದೇ ಇರುವ ಹಿನ್ನೆಲೆಯಲ್ಲಿ ಪೋಷಕರು ಸಂಶಯಭರಿತರಾಗಿ ದೂರು ದಾಖಲಿಸಿದರು. ಇದಕ್ಕೂ ಸಂಬಂಧಿಸಿದಂತೆ ಬಿಎನ್‌ಎಸ್ ಸೆಕ್ಷನ್ 137(2) ಅಡಿಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ.

ದೂರು ಸ್ವೀಕರಿಸಿದ ಥಾಣೆ ರೈಲ್ವೆ ಪೊಲೀಸರು ತಕ್ಷಣವೇ ಶೋಧ ಕಾರ್ಯಾಚರಣೆ ಪ್ರಾರಂಭಿಸಿದರು. ಕಲ್ಯಾಣ್, ಅಂಬರ್ನಾಥ್ ಸೇರಿದಂತೆ ಶಂಕಿತ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಹಾಗೂ ಮಾಹಿತಿದಾರರಿಂದ ಬಂದ ಸುಳಿವುಗಳ ಆಧಾರದ ಮೇಲೆ ಡಿಸೆಂಬರ್ 9ರ ಮಧ್ಯಾಹ್ನ ಅಂಬರ್ನಾಥ್ ರೈಲ್ವೆ ನಿಲ್ದಾಣದ ಹೊರವಲಯದಲ್ಲಿ ಬಾಲಕಿ ಹಾಗೂ ಮಗುವನ್ನು ಪತ್ತೆಹಚ್ಚಿದರು. 

ಮಗುವನ್ನು ಸುರಕ್ಷಿತವಾಗಿ ಪೋಷಕರ ವಶಕ್ಕೆ ಒಪ್ಪಿಸಲಾಗಿದ್ದು, ಅಪಹರಣದ ಹಿಂದೆ ಯಾರಿದ್ದಾರೆ, 14 ವರ್ಷದ ಬಾಲಕಿ ಈ ಕ್ರಮಕ್ಕೆ ಕೈ ಹಾಕಲು ಕಾರಣಗಳೇನು ಎಂಬ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.